ತುಮಕೂರು:

      ಜನಪದ ಸಂಸ್ಕೃತಿಯೇ ಜೀವನದ ಮೌಲ್ಯವಾಗಿದ್ದು ಕಲೆ ಉಳಿದರೆ ಮಾತ್ರ ಮನುಷ್ಯ ಸಂಸ್ಕೃತಿಗೆ ಅರ್ಥ ಬರುತ್ತದೆ, ಪ್ರಜ್ಞಾವಂತರೆಲ್ಲರೂ ಸಮಾಜಮುಖಿಯಾದ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್‍ನ ಅಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದರು.

      ನಗರದ ಉಪ್ಪಾರಳ್ಳಿ ಇಂದಿರಾ ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಜನಪದ ಕಲೋತ್ಸವ ಉದ್ಘಾಟಿಸಿ ಮಾತನಾಡಿ, ಜನಪದ ಕಲೆ, ಸಾಹಿತ್ಯ ಮನುಷ್ಯ ಸಂಸ್ಕøತಿಯ ರೂಪವಾಗಿದ್ದು ಜನಪದರನ್ನ ಅಕ್ಷರವಂತರು ನಿರ್ಲಕ್ಷ್ಯತೆಯಿಂದ ಕಾಣಬಾರದು, ಜನಪದರೇ ನಮ್ಮ ಸಂಸ್ಕೃತಿಯ ವಕ್ತಾರರು. ಜನಪದ ಕಲೆ ಮತ್ತು ಸಂಸ್ಕೃತಿಯ ನಾಶವೇ ಮಾನವ ಸಂಸ್ಕೃತಿಯ ನಾಶವೂ ಆಗುತ್ತದೆ ಈ ಎಚ್ಚರಿಕೆ ನಾಗರೀಕ ಮಾನವರಾದ ನಮಗೆಲ್ಲರಿಗೂ ಇರಬೇಕು ಎಂದರು.

      ಸಮಾರಂಭದಲ್ಲಿ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಅವರ ಮೈಲಾರಲಿಂಗ ಕ್ಷೇತ್ರ ಕಾರ್ಯಾಧಾರಿತ ಅಧ್ಯಯನ ಕೃತಿಯನ್ನು ಡಾ.ಕಮಲಾ ಹಂಪನ ಬಿಡುಗಡೆ ಮಾತನಾಡಿ, ಡಾ.ಚಿಕ್ಕಣ್ಣ ಜಿಲ್ಲೆಯ ಆಸ್ತಿ, ಅವರ 63 ಕೃತಿಗಳಲ್ಲಿ 50ಕ್ಕೂ ಹೆಚ್ಚು ಕೃತಿ ಈ ಜಿಲ್ಲೆಯನ್ನೇ ಕೇಂದ್ರವಾಗಿಸಿಕೊಂಡು ರೂಪುಗೊಂಡಿವೆ. ಮುಂದಿನ ತಲೆಮಾರಿನವರಿಗೆ ಈ ಕೃತಿಗಳು ಬಹುದೊಡ್ಡ ಆಕರವಾಗಿ ಉಳಿಯುತ್ತದೆ ಮಾತ್ರವಲ್ಲ ನಾವು, ನಮ್ಮವರ ನಮ್ಮ ಸಂಸ್ಕೃತಿಯ ಪರಿಚಯವಾಗುವುದೇ ಈ ಬಗೆಯ ಕ್ಷೇತ್ರ ಕಾರ್ಯಾಧಾರಿತ ಕೃತಿಗಳಿಂದ. ಈ ಹಿನ್ನೆಲೆಯಲ್ಲಿ ಮೈಲಾರಲಿಂಗನ ಈ ಕೃತಿ ಬಹುದೊಡ್ಡ ಶ್ರಮದ ಸಾಹಸದ ಕಾರ್ಯವೆಂದು ಪ್ರಶಂಶಿಸಿದರು.

      ಶಾಸನ ತಜ್ಞ ಡಿ.ವಿ.ಪರಶಿವಮೂರ್ತಿ ಕೃತಿ ಕುರಿತು ಮಾತನಾಡಿ, ವಿಶ್ವ ವಿದ್ಯಾನಿಲಯದ ಯೂಜಿಸಿ ನಿಯಮಕ್ಕೆ ನಿಜವಾದ ಘನತೆ ತಂದ ಕೆಲವೇ ಕೆಲವು ವಿದ್ವಾಂಸರಲ್ಲಿ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಮೊದಲಿಗರಾಗಿ ನಿಲ್ಲುತ್ತಾರೆ. ನಿರ್ಲಿಪ್ತ ನೆಲೆಯ ಈ ವಿದ್ವಾಂಸ ಯಾವತ್ತೂ ಪ್ರಚಾರಗಳಿಗಿಂತ ಕ್ಷೇತ್ರ ಕಾರ್ಯದಲ್ಲಿ ತೊಡಗಿರುವುದು ನಮ್ಮಂತಹವರಿಗೂ ಸಂಕೋಚವಾಗುತ್ತದೆ ಎಂದರು. ಮೈಲಾರಲಿಂಗನನ್ನು ಜಾತಿ ಆಚೆಗೆ ಭಕ್ತಿ ಪ್ರಧಾನ ನೆಲೆಯಲ್ಲಿ ಕಂಡು ಪುರಾಣ, ಚರಿತ್ರೆ, ಶಾಸನವನ್ನು ಜಾನಪದದೊಂದಿಗೆ ಸಂವಹನ ಗೊಳಿಸಿರುವ ಈ ಕೃತಿ ಕನ್ನಡ ಜನಪದ ಮಹಾಕಾವ್ಯ ಸಂಶೋಧನಾ ಕ್ಷೇತ್ರಕ್ಕೆ ಹೊಸ ಪ್ರಯೋಗ. ಬಹುದೊಡ್ಡ ಶ್ರಮದ, ಬಹು ಶಿಸ್ತಿನ ನೆಲೆಗಳಿಂದಾಗಿ ಈ ಕೃತಿ ಅಪೂರ್ವತೆಯನ್ನು ಪಡೆದುಕೊಂಡಿದೆ. ಜನಪದ ಮಹಾಕಾವ್ಯವನ್ನು ಹೇಗೆ ಬಹುಜ್ಞಾನ ಶಿಸ್ತುಗಳಿಂದ ಅಧ್ಯಯನ ಮಾಡಬೇಕು ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಆಕರ ಗ್ರಂಥ ನಮ್ಮ ಮುಂದೆ ಇಲ್ಲ ಎಂದು ಅಭಿನಂದಿಸಿದರು.

      ಇಂದಿರಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಿ.ಶಿವಮೂರ್ತಿ ಅಧ್ಯಕ್ಷತೆವಹಿಸಿ ಜನಪದ ಕಲಾವಿದರ ಸಹವಾಸ ನಮ್ಮ ಆರೋಗ್ಯಕ್ಕೂ ಉತ್ತಮ ಸಂತೋಷವನ್ನು ಕೊಡುತ್ತದೆ ಎಂದು ಜನಪದ ಕಲಾವಿದರು ಮುಜುಗರ ಪಟ್ಟುಕೊಳ್ಳದೆ ವಿದ್ವಾಂಸರೊಂದಿಗೆ ಸಂಪರ್ಕ ಬೆಳಸಬೇಕು ಎಂದು ಮನವಿ ಮಾಡಿದರು. ಸಮಾರಂಭದಲ್ಲಿ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಪ್ರಸ್ತಾವಿಕ ಭಾಷಣ ಮಾಡಿ, ಜಿಲ್ಲೆಯ ಕರ್ನಾಟಕ ಜಾನಪದ ಪರಿಷತ್ತು ಮತ್ತು ಎಚ್.ಎಲ್.ನಾಗೇಗೌಡರ ಕಾರ್ಯಗಳನ್ನ ವಿವರಿಸಿದರು.

      ಜನಪದ ಕಲೋತ್ಸವದಲ್ಲಿ ಹಿರಿಯ ಭಾಗವತ, ಕಲ್ಮನೆ ನಂಜಪ್ಪ, ಕಲಾವಿದೆ ಗಂಗಹುಚ್ಚಮ್ಮ, ಮುಖವೇಣಿ ಮೂಡಲಗಿರಿಯಪ್ಪ ಸೇರಿದಂತೆ ಜನಪದ ವಿವಿಧ ಪ್ರಕಾರಗಳ 15 ಕಲಾವಿದರನ್ನು ಸನ್ಮಾನಿಸಲಾಯಿತು.
ಇಂದಿರಾ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ರೀಟಾ ಶಿವಮೂರ್ತಿ, ಕೋಶಾಧ್ಯಕ್ಷ ಪ್ರೊ.ಎಸ್.ಸುಧೀರ್‍ಮೂರ್ತಿ ಉಪಸ್ಥಿತರಿದ್ದರು. ಪ್ರಂಶುಪಾಲ ಪ್ರೊ.ರಂಗಪ್ಪ, ಪ್ರೊ.ಮಮತ ಇದ್ದರು. ಭಾಗವತ ಕಲ್ಮನೆ ನಂಜಪ್ಪ ತಂಡದವರು ಯಕ್ಷಗಾನ ಪ್ರಸಂಗವನ್ನು ಆಕರ್ಷಕವಾಗಿ ನಿರೂಪಿಸಿದರು.

(Visited 218 times, 1 visits today)