ತುರುವೇಕೆರೆ:
ಬಡ್ಡಿ ರಹಿತ ಸಾಲ ಪಡೆದುಕೊಳ್ಳುವ ಬೀದಿ ಬದಿ ವ್ಯಾಪಾರಿಗಳು ಸದುಪಯೋಗ ಮಾಡಿಕೊಂಡು ಆರ್ಥಿಕ ಸಬಲತೆ ಹೊಂದಬೇಕೆಂದು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಆರ್. ರಾಜೇಂದ್ರ ಕಿವಿಮಾತು ಹೇಳಿದರು.
ಪಟ್ಟಣದ ಪಟ್ಟಣ ಪಂಚಾಯತ್ ಆವರಣದಲ್ಲಿ ಡಿ.ಸಿ.ಸಿ. ಬ್ಯಾಂಕ್ ಬೀದಿಬದಿ ವ್ಯಾಪಾರಿಗಳಿಗೆ ಬಡವರಬಂಧು ಯೋಜನೆಯ ಸಾಲ ವಿತರಣೆ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಐದಾರು ವರ್ಷಗಳ ಹಿಂದೆಯೇ ಬೀದಿ ಬದಿ ವ್ಯಾಪಾರಿಗಳಿಗೆ ಜಿಲ್ಲಾ ಕೇಂದ್ರ ಬ್ಯಾಂಕ್ ವತಿಯಿಂದ ಬಡ್ಡಿ ರಹಿತ ಸಾಲ ನೀಡಬೇಕೆಂಬುದು ಅಧ್ಯಕ್ಷರಾಗಿದ್ದ ಕೆ.ಎನ್.ರಾಜಣ್ಣನವರು ಆಕಾಂಕ್ಷೆಯನು ಹೊಂದಿದ್ದರು. ಈ ನಿಟ್ಟಿನಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ವಿತರಿಸುವ ಮೂಲಕ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸಶಕ್ತತೆಗೊಳಿಸಲು ಡಿ.ಸಿ.ಸಿ.ಬ್ಯಾಂಕ್ ಮುಂದಾಗಿದ್ದನ್ನು ಸ್ಮರಿಸಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಬಡವರ ಬಂಧು ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕೆ ಉತ್ತಮವಾದ ಯೋಜನೆಯಾಗಿದೆ ಎಂದರು.
ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಬಿ.ಎಸ್. ದೇವರಾಜು ಮಾತನಾಡಿ ಸರ್ಕಾರದ ಸಾಲಮನ್ನಾ ಯೋಜನೆಯ ಲಾಭ ಪಡೆದ ಜಿಲ್ಲೆಯ ಎರಡನೇ ಸ್ಥಾನ ತುರುವೇಕೆರೆಯದ್ದಾಗಿದೆ. ಒಂದು ಕುಂಟೆ ಪಹಣಿಯಿರುವ ರೈತರಿಗೂ ಡಿ.ಸಿ.ಸಿ. ಬ್ಯಾಂಕ್ ಸಾಲ ನೀಡಿತ್ತು. ಬಡವರ ಬಂದು ಯೋಜನೆಯಡಿ ತುರುವೇಕೆರೆ ಶಾಖೆಯು ಸುಮಾರು 102 ಮಂದಿ ಬೀದಿಬದಿ ವ್ಯಾಪಾರಸ್ಥರಿಗೆ 7,63,000 ರೂಗಳ ಬಡ್ಡಿ ರಹಿತ ಸಾಲ ನೀಡಿದೆ. ದಂಡಿನಶಿವರ ಶಾಖೆಯು 26 ಮಂದಿಗೆ 2,60,000 ರೂಗಳನನು ನೀಡಿದೆ. ಒಟ್ಟು 10,23000 ಸಾಲವನ್ನು ಮೊದಲ ಹಂತದಲ್ಲಿ ನೀಡಲಾಗಿದೆ. ಸಾಲ ಪಡೆದುಕೊಳ್ಳುವುದು ಎಷ್ಟು ಮುಖ್ಯವೋ, ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡುವುದು ಅಷ್ಟೆ ಮುಖ್ಯ, ಪ್ರಾಮಾಣಿಕ ಸಾಲ ಮರುಪಾವತಿ ಪಾಲನೆ ಮಾಡುವ ಮೂಲಕ ಸಾಲ ನೀಡಿದ ಬ್ಯಾಂಕ್‍ನ ವಿಶ್ವಾಸವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.