ಚಿಕ್ಕನಾಯಕನಹಳ್ಳಿ :
ರಾಷ್ಟ್ರೀಯ ಹೆದ್ದಾರಿ 150 ಎ ಕೆ.ಬಿ.ಕ್ರಾಸ್‍ನಿಂದ ಹುಳಿಯಾರು ರಸ್ತೆಯ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸರ್ಕಾರದ ಶಿಷ್ಟಾಚಾರವನ್ನು ಉಲ್ಲಂಘನೆಯಾಗಿದೆ ಎಂದು ತಾಲ್ಲೂಕು ಬಿ.ಜೆ.ಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಜಾಗೃತಗೊಂಡ ಪೋಲಿಸರು ಪ್ರತಿಭಟನೆಗೆ ಮುನ್ನವೇ 37 ಮಂದಿ ಬಂಧಿಸುವಲ್ಲಿ ಯಶಸ್ವಿಯಾಗಿ ಕಾಮಗಾರಿಯ ಪೂಜೆಗೆ ಅನುಮಾಡಿಕೊಟ್ಟರು.
ಪಟ್ಟಣದ ನೆಹರು ವೃತ್ತದಲ್ಲಿ ಕೇಂದ್ರ ಸರ್ಕಾರ ರಸ್ತೆ ಅಭಿವೃದ್ದಿ ಕಾಮಗಾರಿಗೆ 255ಕೋಟಿ ಕಾಮಗಾರಿಯನ್ನು ಎಸ್.ಪಿ.ಮುದ್ದಹನುಮೇಗೌಡರು ಶಂಕುಸ್ಥಾಪನೆಗೆ ಆಗಮಿಸಿದ ಸಂದರ್ಭದಲ್ಲಿ ಬಿ.,ಜೆ.ಪಿ ಕಾರ್ಯಕರ್ತರು ಸಂಸದರಿಗೆ ಮತ್ತು ಮೈತ್ರಿ ಸರ್ಕಾರಕ್ಕೆ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಲು ಮುಂದಾದರು.
ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಹೆಚ್.ಆರ್.ಶಶಿಧರ್ ಮಾತನಾಡಿ ಕೇಂಧ್ರ ಬಿ.ಜೆ.ಪಿ ಸರ್ಕಾರ ರಸ್ತೆ ಅಭಿವೃದ್ದಿಗೆ ಹಣ ನೀಡಿದ್ದು, ತಾಲ್ಲೂಕಿನ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಶಾಸಕರಿದ್ದು, ಸರ್ಕಾರಿ ಕಾರ್ಯಕ್ರಮವಾದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪೂಜೆಗೆ ಶಾಸಕರನ್ನು ಆಹ್ವಾನ ನೀಡದೇ ಇರುವುದನ್ನು ಖಂಡಿಸಿ ಪ್ರತಿಭಟನೆ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ತಾಲ್ಲೂಕು ಬಿ,ಜೆ.ಪಿ ಪ್ರಧಾನ ಕಾರ್ಯದರ್ಶಿ ನಿರಂಜನ್‍ಮೂರ್ತಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಕೇಂದ್ರ ಸರ್ಕಾರದ ಸಚಿವರಾದ ನಿತಿನ್ ಗಡ್ಕರಿಯವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿರೇವಣ್ಣನವರು, ಕೆಲಸವನ್ನು ಪ್ರಾರಂಭಿಸಲು ಚಾಲನೆ ನೀಡಿದ್ದಾರೆ ಆದರೆ ಸಂಸದರಾದ ಎಸ್.ಪಿ.ಮುದ್ದಹನುಮೇಗೌಡರು ಕಾಮಗಾರಿ ಉದ್ಘಾಟನೆ ವೇಳೆಯಲ್ಲಿ ಶಿಷ್ಟಾಚಾರ ಪಾಲನೆ ಮಾಡದೇ ಸ್ಥಳೀಯ ಶಾಸಕರನ್ನು ಗಣನೆಗೆ ತೆಗೆದುಕೊಳ್ಳದೇ, ಚಿಕ್ಕನಾಯಕನಹಳ್ಳಿ, ಹುಳಿಯಾರು ವ್ಯಾಪ್ತಿಯ 150ಎ ಹೆದ್ದಾರಿಯ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡುತ್ತಿರುವುದು ಮತ್ತು ಸರ್ಕಾರದ ಶಿಷ್ಟಾಚಾರ ಉಲ್ಲಂಘನೆ ವಿರುದ್ದ ಖಂಡಿಸಿ ತಾಲ್ಲೂಕು ಬಿ.ಜೆ.ಪಿ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪೋಲಿಸರು-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ :
ಹುಳಿಯಾರುನಿಂದ ಆಗಮಿಸಿದ ಎಸ್.ಪಿ.ಮುದ್ದಹನುಮೇಗೌಡರಿಗೆ ಕಾಮಗಾರಿ ಪೂಜೆಯನ್ನು ಮಾಡಲು ಅಡ್ಡಿಪಡಿಸಿದ್ದಕ್ಕಾಗಿ ನೆಹರು ವೃತ್ತದಲ್ಲಿ ನೂರಾರು ಬಿ.ಜೆ.ಪಿ ಕಾರ್ಯಕರ್ತರು ಜಾಮಾಯಿಸಿದ್ದನ್ನು, ಗಮನಿಸಿದ ಪೋಲಿಸರು ಪ್ರತಿಭಟನೆಗೆ ಇಳಿಯುವುದಕ್ಕೂ ಮುನ್ನವೇ ಪ್ರತಿಭಟನಾಕಾರರೊಂದಿಗೆ ಮಾತುಕತೆಗೆ ಮುಂದಾದರು. ಪೋಲಿಸರ ಮಾತಿಗೆ ಮನ್ನಣೆ ನೀಡದ ಪ್ರತಿಭಟನಾಕಾರರು ರಸ್ತೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಕಾಂಗ್ರೇಸ್ ಕಾರ್ಯಕರ್ತರನ್ನು ಕೂಡ ಬಂಧಿಸುವಂತೆ ಪೋಲಿಸರಿಗೆ ತಾಕೀತು ಮಾಡುವ ಚರ್ಚೆಗಳು ವ್ಯಾಪಕವಾಯಿತು. ಬಿ.ಜೆ.ಪಿ ಕಾರ್ಯಕರ್ತರನ್ನು ಪುನಃ ಪೋಲಿಸರು ಪ್ರತಿಭಟನೆ ಮಾಡದಂತೆ ಪ್ರತಿಭಟನಾ ಸ್ಥಳದಿಂದ ಕಳುಹಿಸಲು ಮಾತುಕತೆ ನಡೆಸುವಾಗ ಕಾರ್ಯಕರ್ತರಿಗೂ ಪೋಲಿಸರಿಗೂ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಕಾರ್ಯಕರ್ತರ ಬಂಧನ-ಬಿಡುಗಡೆ :
ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಪೋಲಿಸ್ ಅಧಿಕಾರಿಗಳು ಪಟ್ಟಣದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿ.ಜೆ.ಪಿ ಕಾರ್ಯಕರ್ತರನ್ನು ಬಂಧಿಸಲು ಮುಂದಾದರು. ಪೋಲಿಸರ ಮಾತಿಗೆ ಜಗ್ಗದ ಬಿಜೆಪಿ ಕಾರ್ಯಕರ್ತರು ಪೋಲಿಸ್ ವಾಹನವನ್ನು ಅಡ್ಡಗಟ್ಟಿ ಬಂಧಿಸದಂತೆ ಪೋಲಿಸರ ವಿರುದ್ದ ದಿಕ್ಕಾರ ಕೂಗಿದರು.
ಪ್ರತಿಭಟನೆ ಹೆಚ್ಚಾದದನ್ನು ಗಮನಿಸಿದ ಪೋಲಿಸರು ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಹೆಚ್.ಆರ್.ಶಶಿಧರ್, ಪ್ರಧಾನ ಕಾರ್ಯದರ್ಶಿ ನಿರಂಜನ್‍ಮೂರ್ತಿ, ಓ.ಬಿ.ಸಿ. ಅಧ್ಯಕ್ಷ ಕೇಶವಮೂರ್ತಿ, ಶಿವರಾಜ್, ಸಾಮಾಜಿಕ ಜಾಲತಾಣದ ಯೋಗೀಶ್, ಪುರಸಭಾ ಸದಸ್ಯ ಸಾಮಿಲ್‍ಬಾಬು, ಮಾಜಿ ಪುರಸಭಾಧ್ಯಕ್ಷ ಸಿ.ಎಮ್.ರಂಗಸ್ವಾಮಯ್ಯ, ಮಾಜಿ ಪುರಸಭಾ ಸದಸ್ಯ ಸಿ.ಪಿ.ಮಹೇಶ್, ಪ್ರಸನ್ನಕುಮಾರ್ ಸೇರಿದಂತೆ 37 ಮಂದಿ ಕಾರ್ಯಕರ್ತರನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದರು. ಸಂಸದ ಎಸ್.ಪಿ.ಮುದ್ದಹನುಮೇಗೌಡರು ಗುದ್ದಲಿ ಪೂಜೆ ನೆರವೇರಿಸಿ ವಾಪಾಸ್ ತೆರಳಿದ ನಂತರ ಬಂಧಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು.
ಉಳಿದಂತೆ ಜಿಲ್ಲಾ ಉಪಾಧ್ಯಕ್ಷ ಟಿ.ಶಂಕರಲಿಂಗಪ್ಪ ಹಾಗೂ ನೂರಾರು ಬಿ.ಜೆ.ಪಿ ಕಾರ್ಯಕರ್ತರನ್ನು ಪೋಲಿಸರು ನೆಹರು ವೃತ್ತದಿಂದ ಚದುರಿಸಿ ಪ್ರತಿಭಟನೆಯನ್ನು ತಿಳಿಗೊಳಿಸಿದರು. ಪ್ರತಿಭಟನೆಯ ವೇಳೆ ನಡೆದ ನೂಕಾಟ-ತಳ್ಳಾಟದ ಸಂದರ್ಭದಲ್ಲಿ ಚಿ.ನಾ.ಹಳ್ಳಿ ಠಾಣೆಯ ಸಬ್ ಇನ್ಸ್‍ಪೆಕ್ಟರ್ ನವೀನ್‍ಕುಮಾರ್‍ರವರ ಸಮವಸ್ತ್ರದ ಗುಂಡಿಗಳು ಕಿತ್ತುಹೋದದ್ದು ಕಂಡುಬಂದಿತು.
ವಿರೋಧದ ನಡವೆ ಗುದ್ದಲಿ ಪೂಜೆ :
ಸಂಸದ ಎಸ್.ಪಿ.ಮುದ್ದಹನುಮೇಗೌಡರು ಹುಳಿಯಾರಿನಲ್ಲಿ ಪೂಜೆ ಮುಗಿಸಿ ಪಟ್ಟಣದ ನೆಹರು ವೃತ್ತಕ್ಕೆ ಆಗಮಿಸಿ. ತಮ್ಮ ಕಾಂಗ್ರೇಸ್ ಕಾರ್ಯಕರ್ತರೊಂದಿಗೆ ಆತಾತುರವಾಗಿ ರಸ್ತೆ ಕಾಮಗಾರಿಯ ಪೂಜೆಯನ್ನು ನೆರವೇರಿಸಿ ತಾತಯ್ಯನ ಗೋರಿಗೆ ತೆರಳಿದರು.
ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಆರೋಪ : ಪ್ರತಿಭಟನೆಯ ವೇಳೆ ನೆಹರು ಸರ್ಕಲ್‍ನಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಲಿ ಶಾಸಕ ಜೆ.ಸಿ.ಮಾಧುಸ್ವಾಮಿ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನ ಪರಿಷತ್ ಸದಸ್ಯರುಗಳಾದ ವೈ.ಎ.ನಾರಾಯಣಸ್ವಾಮಿ, ಬೆಮಲ್ ಕಾಂತರಾಜು, ಚೌಳರೆಡ್ಡಿ ತೂಪುವಲ್ಲಿ, ಇವರುಗಳ ಹೆಸರನ್ನು ಆಹ್ವಾನ ಪತ್ರಿಕೆಗೆ ಮುದ್ರಣಗೊಳಿಸದೆ ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿದ್ದಾರೆ ಇದು ಸರಿಯೇ ಎಂದು ಪ್ರತಿಭಟನೆಯ ವೇಳೆ ಆರೋಪಿಸಿದರು.
ಗುದ್ದಲಿ ಪೂಜೆ ಸಂದರ್ಭದಲ್ಲಿ ಹುಳಿಯಾರು ಜಿ.ಪಂ.ಸದಸ್ಯರಾದ ವೈ.ಸಿ.ಸಿದ್ದರಾಮಯ್ಯ, ರಾಮಚಂದ್ರಯ್ಯ, ತಾ.ಪಂ.ಅಧ್ಯಕ್ಷೆ ಚೇತನಗಂಗಾಧರ್, ಮಾಜಿ ಶಾಸಕ ಬಿ.ಲಕ್ಕಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಪುರಸಭಾ ಮಾಜಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ, ಅಶೋಕ್, ಡಿ.ಆರ್.ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.
ಶಾಸಕರು, ಅವರ ಅಭಿಮಾನಿಗಳು ಇಂದು ಕೇವಲ ರಸ್ತೆ ಕಾಮಗಾರಿ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿರುವ ಬಗ್ಗೆ ಕಾರ್ಯಕರ್ತ ಅಭಿಮಾನಿಗಳಲ್ಲಿ ಕಿಚ್ಚುಎಬ್ಬಿಸಿ ಅಶಾಂತಿ ಮೂಡುವ ವಾತವರಣ ಸೃಷ್ಠಿಸಿರುವುದು ಯಾವ ನ್ಯಾಯ ಎಂದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಹಾಲಿ ವಿಧಾನ ಪರಿಷತ್‍ನ ಸದಸ್ಯರಲ್ಲಿ ಒಬ್ಬರಾದರೂ ಒಂದು ವೇಳೆ ವಿಧಾನ ಸಭೆಯಲ್ಲಿ ಈ ವಿಷಯವಾಗಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ದಾಖಲೆ ನೀಡಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗುತ್ತಿತ್ತು. ಆದರೂ ಅವರ್ಯಾರು ಪ್ರಶ್ನಿಸಿಲ್ಲ ಕೇವಲ ರಸ್ತೆ ಕಾಮಗಾರಿ ವಿಚಾರದಲ್ಲಿ ಶಿಷ್ಠಾಚಾರದ ಮಾತನಾಡುವುದು ಯಾವ ನ್ಯಾಯ ಎಂಬುದು ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆ ಶುರುವಾಗಿದೆ.