ನವದೆಹಲಿ:
ಭಾರತದ ಕಾಶ್ಮೀರದಲ್ಲಿ ಹಿಂಸಾಕೃತ್ಯ ಎಸಗುವ ಕನಸು ಕಾಣುತ್ತ ಪಾಕಿಸ್ತಾನಿ ಉಗ್ರರು ಸುಖನಿದ್ರೆಯಲ್ಲಿ ತೊಡಗಿದ್ದಾಗ, ಮಂಗಳವಾರ ಬೆಳಗಿನ ಜಾವ 3.45ರ ಸುಮಾರಿಗೆ ದಾಳಿ ನಡೆಸಿದ ಭಾರತೀಯ ವಾಯು ಸೇನೆ, ಬಾಲಕೋಟ್ ನಲ್ಲಿ
ಅತ್ಯಂತ ವ್ಯವಸ್ಥಿತವಾಗಿ ನಡೆದಿರುವ ಈ ದಾಳಿಯ ಬಗ್ಗೆ ಅರಿಯುವ ಮುನ್ನವೇ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದ ಕಂಟ್ರೋಲ್ ರೂಮ್ ಸೇರಿದಂತೆ ಹಲವಾರು ಉಗ್ರರ ತರಬೇತಿ ನೆಲೆಗಳು ಧ್ವಂಸವಾಗಿವೆ. ಈ ದಾಳಿಯಲ್ಲಿ ಕನಿಷ್ಠಪಕ್ಷ 300ಕ್ಕೂ ಹೆಚ್ಚು ಪಾಕ್ ಬೆಂಬಲಿತ ಉಗ್ರರು ಹತರಾಗಿದ್ದಾರೆ.
ಈ ದಾಳಿ ನಡೆದಿದ್ದು ಕೇವಲ 21 ನಿಮಿಷಗಳು ಮಾತ್ರ. ಬೆಳಗಿನ ಜಾವ 3.45ಕ್ಕೆ ಆರಂಭವಾದ ದಾಳಿ 4 ಗಂಟೆ 6 ನಿಮಿಷದ ಹೊತ್ತಿಗೆ ಮುಕ್ತಾಯವಾಗಿತ್ತು. ಮೊದಲಿಗೆ ಬಾಲಕೋಟ್ ನಲ್ಲಿ ದಾಳಿ ನಡೆದರೆ, ನಂತರ ಮುಜಫರಾಬಾದ್ ಮತ್ತು ಚಾಕೋಟಿಯಲ್ಲಿ, ಭಾರತೀಯ ವಾಯು ಸೇನೆಯ ಮಿರಾಜ್ 2000 ಯುದ್ಧ ವಿಮಾನ ಬಳಸಿ ದಾಳಿ ಮಾಡಲಾಗಿದೆ.
ಈ ದಾಳಿಯಲ್ಲಿ 12 ಮಿರಾಜ್ 2000 ಯುದ್ಧ ವಿಮಾನಗಳನ್ನು ಬಳಸಲಾಗಿದ್ದು, ತಂಡವನ್ನು 3 ಭಾಗಗಳನ್ನಾಗಿ ಮಾಡಲಾಗಿತ್ತು. ಸುಮಾರು ಸಾವಿರ ಕೆಜಿಯಷ್ಟು ಲೇಸರ್ ಗೈಡೆಡ್ ಬಾಂಬ್ ಗಳನ್ನು ಬಳಸಲಾಗಿದೆ. ಬಲ್ಲ ಮೂಲಗಳ ಪ್ರಕಾರ ಕಳೆದ ಕೆಲವು ದಿನಗಳಿಂದಲೇ ಉಗ್ರರ ಈ ನೆಲೆಗಳ ಮೇಲೆ ಭಾರತೀಯ ವಾಯು ಸೇನೆ ಕಣ್ಣಿಟ್ಟಿತ್ತು. ಅವುಗಳ ಧ್ವಂಸಕ್ಕೆ ಮಂಗಳವಾರ ಯೋಗ ಕೂಡಿ ಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಆತ್ಮಾಹುತಿ ದಾಳಿ ನಡೆದು, 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿ, ಹನ್ನೆರಡು ದಿನಗಳ ನಂತರ ಪ್ರತೀಕಾರ ದಾಳಿಯನ್ನು ಭಾರತದ ಸೇನೆ ನಡೆಸಿದೆ. ಪುಲ್ವಾಮಾ ದಾಳಿ ನಡೆದ ನಂತರವೂ ಭಾರತದ ಸೇನೆ ವಿರಮಿಸಿದೆ ಎಂದು ಭ್ರಮೆ ಹುಟ್ಟುವ ಸಂದರ್ಭದಲ್ಲಿಯೇ ಅತ್ಯಂತ ಯೋಜನಾಬದ್ಧವಾಗಿ ಈ ಪ್ರತಿದಾಳಿ ನಡೆಸಲಾಗಿದೆ.