ತುಮಕೂರು:
ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ವಿವಿಧ ಕಡೆ ಕೈಗೆತ್ತಿಕೊಂಡಿರುವ 134 ಕೋಟಿ ರೂ. ವೆಚ್ಚದ 3 ಸ್ಮಾರ್ಟ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು.
ನಗರದ ಸುಮಾರು 14 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳನ್ನು 191.10 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ರಸ್ತೆಗಳನ್ನಾಗಿ ಪರಿವರ್ತಿಸುವ ಕಾಮಗಾರಿಯಡಿ ಈ 3 ರಸ್ತೆಗಳ ನಿರ್ಮಾಣ ಕೈಗೊಳ್ಳಲಾಗಿದ್ದು, 47.74ಕೋಟಿ ರೂ. ವೆಚ್ಚದ ಸ್ಮಾರ್ಟ್ ರಸ್ತೆಯನ್ನು ಡಾ: ಶಿವಕುಮಾರ ಸ್ವಾಮೀಜಿ ವೃತ್ತ, 49.87 ಕೋಟಿ ರೂ. ವೆಚ್ಚದ ರಸ್ತೆಯನ್ನು ಡಾ: ರಾಧಾಕೃಷ್ಣ ರಸ್ತೆ ಹಾಗೂ 36.88 ಕೋಟಿ ರೂ. ವೆಚ್ಚದ ಸ್ಮಾರ್ಟ್ ರಸ್ತೆಯನ್ನು ಭಗವಾನ್ ಮಹಾವೀರರಸ್ತೆಯಲ್ಲಿ ಅವರು ಇಂದು ಭೂಮಿಪೂಜೆ ನೆರವೇರಿಸಿದರು. ಸ್ಮಾರ್ಟ್ ರಸ್ತೆ ವಿಶೇಷ ಪ್ಯಾಕೇಜ್‍ನಡಿ ಹಂತ ಹಂತವಾಗಿ ಉತ್ತಮವಾದ ಪಾದಚಾರಿ ಮಾರ್ಗ, ಪ್ರತ್ಯೇಕ ಬೈಸಿಕಲ್ ಟ್ರ್ಯಾಕ್, ಅಂಡರ್‍ಗ್ರೌಂಡ್ ಡಕ್ಟಿಂಗ್, ಬಹುಕ್ರಿಯಾತ್ಮಕ ವಲಯ, ಹಸಿರು ವಲಯ ಮತ್ತಿತರ ಸೌಲಭ್ಯಗಳನ್ನೊಳಗೊಂಡ ಈ ರಸ್ತೆ ಅಭಿವೃದ್ಧಿಯನ್ನು ಕಾರ್ಯಗತಗೊಳಿಸಲಾಗುವುದು.
ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಕ್ಯಾಲೆಂಟ್ ಬಿಡುಗಡೆ ಮಾಡಲಾಯಿತು. ಶಾಸಕ ಜ್ಯೋತಿಗಣೇಶ್, ಮೇಯರ್ ಲಲಿತಾ ರವೀಶ್, ಉಪ ಮೇಯರ್ ರೂಪಶ್ರೀ, ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್, ಮಲ್ಲಿಕಾರ್ಜುನ, ಸ್ಮಾರ್ಟ್ ಸಿಟಿ ಅಧಿಕಾರಿ ರಂಗಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.