ಜೈಪುರ:
ಈ ದೇಶಕ್ಕಿಂತಲೂ ಮುಖ್ಯವಾದದ್ದು ನನಗೆ ಬೇರೇನೂ ಇಲ್ಲ. ಈ ಮಣ್ಣಿನ ಆಣೆ ನಾನು ದೇಶವನ್ನು ತಲೆಬಾಗಲು ಬಿಡುವುದಿಲ್ಲ ದೇಶದ ಸುರಕ್ಷತೆ ದೃಷ್ಟಿಯಿಂದ ಉಗ್ರ ನಿಗ್ರಹಕ್ಕೆ ಬದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
ರಾಜಸ್ಥಾನದ ಚುರುವಿನಲ್ಲಿ ಸಮಾವೇಶದಲ್ಲಿ ಮಾತನಾಡಿದ ಅವರು, ವೈಮಾನಿಕ ದಾಳಿಯ ನಂತರ ಮೊದಲ ಬಾರಿಗೆ ಆ ಬಗ್ಗೆ ಪ್ರತಿಕ್ರಿಯಿಸಿದರು. ಭಾರತ ಅತ್ಯಂತ ಸುರಕ್ಷಿತ ಕೈಗಳಲ್ಲಿದೆ ಎಂದು ದೇಶಕ್ಕೆ ಮತ್ತೊಮ್ಮೆ ಭರವಸೆ ನೀಡಲು ಬಯಸುತ್ತೇನೆ. ಪಾಕಿಸ್ತಾನದ ಬಾಳಾಕೋಟ್ ಮೇಲಿನ ವೈಮಾನಿಕ ದಾಳಿ ನಡೆಸಿ, ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಧೀರ ಯೋಧರೆಲ್ಲರನ್ನೂ ಅಭಿನಂದಿಸಲು ಬಯಸುತ್ತೇನೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ದೇಶದ ಗೌರವಕ್ಕೆ ಧಕ್ಕೆ ಒದಗದಂತೆ ನೋಡಿಕೊಳ್ಳುತ್ತೇನೆ. 2014ರಲ್ಲಿ ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವಾಗ ಈ ಕುರಿತು ಹೇಳಿದ ಮಾತಿಗೆ ನಾನು ಈಗಲೂ ಬದ್ಧ ಎಂದರು.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನೊಬ್ಬನ ದಾಳಿಯಲ್ಲಿ ಸಿಆರ್ಪಿಎಫ್ನ 40 ಯೋಧರು ಹುತಾತ್ಮರಾಗಿದ್ದರು. ಇದರ ಪ್ರತೀಕಾರವಾಗಿ ಸೋಮವಾರ ತಡರಾತ್ರಿ 3.30ಕ್ಕೆ ಪಾಕಿಸ್ತಾನದ ಬಾಳಾಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿದ ವಾಯುಪಡೆ ಯೋಧರು, ಜೈಷ್ನ ಪ್ರಮುಖ ನೆಲೆಯನ್ನು ಧ್ವಂಸಗೊಳಿಸಿದರು. ಅಂದಾಜು 300 ಜನ ಉಗ್ರರು ಹತರಾಗಿರುವುದಾಗಿ ಹೇಳಲಾಗುತ್ತಿದೆ.