ತುಮಕೂರು:
ತುಮಕೂರು ವಿಶ್ವವಿದ್ಯಾನಿಲಯದಲ್ಲಿಂದು ನಡೆದ ವಾರ್ಷಿಕ 12ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಪೋಷಕರು ಸಂಭ್ರಮಿಸಿದರು.
ಈ ಘಟಿಕೋತ್ಸವದಲ್ಲಿ 67 ಮಂದಿಗೆ ಪಿಎಚ್‍ಡಿ, 68 ವಿದ್ಯಾರ್ಥಿಗಳಿಗೆ 89 ಚಿನ್ನದ ಪದಕ ಹಾಗೂ 9442 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಹೆಚ್ಚು ಚಿನ್ನದ ಪದಕ ಪಡೆದವರು:-
ಎಂ.ಎಸ್ಸಿ ಗಣಿತಶಾಸ್ತ್ರ ವಿಭಾಗದಲ್ಲಿ ಕೆ.ಆರ್ ಕಿಶೋರ್‍ಕುಮಾರ್ 5 ಚಿನ್ನದ ಪದಕ ಹಾಗೂ ಎಂ.ಎ ಕನ್ನಡ ವಿಭಾಗದಲ್ಲಿ ಕೆ.ಎಂ. ಗೋವಿಂದರಾಜು ಅವರಿಗೆ 4 ಚಿನ್ನದ ಪದಕ ಪ್ರದಾನ ಮಾಡಲಾಗಿದೆ. ಬಿ.ಎ ಕನ್ನಡ (ಐಚ್ಛಿಕ)ವಿಭಾಗದಲ್ಲಿ ಕೆ.ಎನ್. ಪವನ, ಬಿ.ಕಾಂ ವಿಭಾಗದಲ್ಲಿ ಕೆ.ವಿ ಶ್ರೀವಲ್ಲಿ, ಬಿ.ಎಸ್ಸಿ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗದ ಚಿರಾಗ್ ಎಸ್., ಎಂ.ಕಾಂ ವಿಭಾಗದ ಕೆ.ಎನ್. ವಸುಧ ಅವರು ತಲಾ 3 ಚಿನ್ನದ ಪದಕ ಗಳಿಸಿದ್ದಾರೆ. ಬಿ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಂತೋಷ್ ಜೆ.ಆರ್, ಎಂ.ಎ ಅರ್ಥಶಾಸ್ತ್ರ ವಿಭಾಗದಲ್ಲಿ ಸುರೇಖ, ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಅನುರಾಧ, ಎಂ.ಎಸ್.ಡಬ್ಲೂ ವಿಭಾಗದಲ್ಲಿ ಕವಿತ, ಎಂ.ಎಸ್ಸಿ ವಿಭಾಗದಲ್ಲಿ ಸಿ.ಎನ್. ವಿನುತ ಹಾಗೂ ಎಂ.ಎ ಪದವಿಯಲ್ಲಿ ಎ.ವಿ. ಗಾಯತ್ರಿ ಅವರು ತಲಾ 2 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಉಳಿದಂತೆ 56 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಡಾ|| ಸಿ.ಎಸ್. ಶರ್ಮಾ ಅವರಿಗೆ ಗೌರವ ಡಾಕ್ಟರೇಟ್:
ಘಟಿಕೋತ್ಸವದಲ್ಲಿ ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ಆಡಳಿತಗಾರರಾಗಿ ಸೇವೆ ಸಲ್ಲಿಸಿರುವ ತುಮಕೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ|| ಎಸ್.ಸಿ ಶರ್ಮಾ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಜಿ.ಟಿ. ದೇವೇಗೌಡ ಅವರು ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸ್ವರ್ಣಪದಕಗಳನ್ನು ಪ್ರದಾನ ಮಾಡಿದರು.
ಜವಾಬ್ದಾರಿಯುತ ನಾಗರೀಕರನ್ನಾಗಿ ಪರಿವರ್ತಿಸಬೇಕು:-
ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಪ್ರೊ|| ಅನುರಾಗ್ ಕುಮಾರ್ ಅವರು ತಮ್ಮ ಘಟಿಕೋತ್ಸವ ಭಾಷಣದಲ್ಲಿ ವಿಶ್ವವಿದ್ಯಾನಿಲಯಗಳು ಕೇವಲ ತಮ್ಮ ಪ್ರದೇಶದ ಸಮುದಾಯಗಳಿಂದ ಮಾತ್ರವಲ್ಲದೆ ದೂರದೂರದ ಪ್ರದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ನಗರ/ಗ್ರಾಮೀಣ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳು ಯಾವುದೇ ಜಾತಿ-ಬೇಧಗಳಿಲ್ಲದೇ ಒಟ್ಟಿಗೆ ಬೆರೆತು ಕಲಿಯುವ ವಾತಾವರಣ ಇಲ್ಲಿರುತ್ತದೆ. ಕೆಲವು ವಿಶ್ವವಿದ್ಯಾಲಯಗಳಲ್ಲಂತೂ ಈ ಒಡನಾಟಕ್ಕೆ ರಾಷ್ಟ್ರೀಯತೆಯೂ ಅಡ್ಡ ಬರುವುದಿಲ್ಲ. ಬಗೆ ಬಗೆಯ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಣ ಮುಗಿಸಿ ವಿಶ್ವವಿದ್ಯಾಲಯ ಪ್ರವೇಶಿಸಿದಾಗ ತಮ್ಮ ಸಾಂಸ್ಕøತಿಕ ಹೊರೆಯನ್ನೂ ಕೆಳಗಿಳಿಸಬೇಕಾಗುತ್ತದೆ. ಸೀಮಿತ ಲೋಕಜ್ಞಾನವುಳ್ಳ ಬಾಲಕ-ಬಾಲಕಿಯರನ್ನು ದೇಶದ ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತಿಸುವ ಮಹತ್ತರ ಜವಾಬ್ದಾರಿ ವಿಶ್ವವಿದ್ಯಾಲಯದ ಮೇಲಿರುತ್ತದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ವಿವಿಗಳು ವರ್ಷದಿಂದ ವರ್ಷಕ್ಕೆ ಅವರಲ್ಲಿರುವ ಜ್ಞಾನವನ್ನು ಹೆಚ್ಚು ಮಾಡುತ್ತವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿಕಸನ ಹೊಂದಲು ವಿವಿಗಳು ಉತ್ತಮ ವೇದಿಕೆಯಾಗಿವೆ ಎಂದು ಅವರು ತಿಳಿಸಿದರು.
ಕುಲಪತಿ ಪ್ರೊ|| ವೈ.ಎಸ್. ಸಿದ್ದೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವವಿದ್ಯಾಲಯದ ಸಾಧನೆಗಳ ಕಿರುಪರಿಚಯ ಮಾಡುತ್ತಾ ಗ್ರಾಮೀಣ ಮತ್ತು ಸಾಮಾಜಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಾವಕಾಶವನ್ನು ಒದಗಿಸುವುದೇ ನಮ್ಮ ಗುರಿ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹೆಚ್ಚಿನ ಆಯ್ಕೆ ಮತ್ತು ಸ್ವಾತಂತ್ರ್ಯವನ್ನು ನೀಡುವ ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದು, ಪಠ್ಯಕ್ರಮವನ್ನು ಪರಿಷ್ಕರಿಸಿದ್ದೇವೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯುಜಿಸಿ/ನೆಟ್, ಗೇಟ್‍ನಂತಹ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಯಶಸ್ಸುಗಳಿಸಿದ್ದಾರೆ. ಸ್ನಾತಕೋತ್ತರ ಕೋರ್ಸುಗಳಿಗೆ ಮಾತ್ರವಲ್ಲದೆ ಸ್ನಾತಕ ಕೋರ್ಸ್‍ಗಳಿಗೂ ಸಿಬಿಸಿಎಸ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
ಹೊಸ ಕೋರ್ಸ್‍ಗಳ ಪ್ರಾರಂಭ:-
ವಿವಿಯಲ್ಲಿ ಹೊಸದಾಗಿ ಎಂ.ಎಸ್ಸಿಯಲ್ಲಿ ಮನೋವಿಜ್ಞಾನ, ಸಾವಯವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಕೋರ್ಸ್, ಎಂಸಿಎ ಕೋರ್ಸ್‍ಗಳನ್ನು ಪ್ರಾರಂಭಿಸಲಾಗಿದೆ. ಉದ್ಯೋಗ ಸಾಮಥ್ರ್ಯವನ್ನು ಗಳಿಸಿಕೊಳ್ಳಲು ಅನುವಾಗುವಂತೆ ಕೈಗಾರಿಕೆಗೆ ಅನುಗುಣವಾಗಿ ಬಿಎಸ್‍ಡಬ್ಲ್ಯೂ, ಬಿಸಿಎ, ಎಂಪಿಇಡಿ, ಬಿವಿಎ ಮತ್ತಿತರ ಕೋರ್ಸ್‍ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಶೈಕ್ಷಣಿಕ ಸೌಲಭ್ಯವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಪ್ರತಿ ವಿಭಾಗದಲ್ಲಿ ಮಿನಿ ಕಂಪ್ಯೂಟರ್ ಪ್ರಯೋಗಾಲಯಗಳನ್ನು ಸ್ಥಾಪಿಸುವುದರ ಜೊತೆಗೆ ತರಗತಿಯ ಕೊಠಡಿಗಳಲ್ಲಿ ಹೊಸ ಎಲ್‍ಸಿಡಿ ಪ್ರೊಜೆಕ್ಟರ್‍ಗಳನ್ನು ಅಳವಡಿಸಿ ಆಧುನೀಕರಣಗೊಳಿಸಲಾಗಿದೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ಪ್ರತಿ ವಿಭಾಗದಲ್ಲಿ ಯುವ ಹಾಗೂ ಉತ್ಸಾಹಿ ತರುಣರು ಬೋಧಕರಾಗಿ ಸೇವೆ ಸಲ್ಲಿಸುತ್ತಿರುವುದು ಸಂತಸದ ವಿಷಯ. ಬೋಧಕರು ತಮ್ಮ ಬೋಧನೆಯ ಜೊತೆಗೆ ಮುಂದುವರೆದ ಕ್ಷೇತ್ರಗಳಲ್ಲಿ ಸಂಶೋಧನೆಯಲ್ಲಿ ನಿರತರಾಗಿರುವುದು ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕೆಗಳಲ್ಲಿ ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರಲ್ಲದೆ, ಮಹಾನ್ ಚಿಂತಕರ ಸಮಾಜ ಸುಧಾರಕರ, ಸಾಹಿತಿಗಳ ಹೆಸರಿನಲ್ಲಿ ಅಧ್ಯಯನ ಪೀಠಗಳನ್ನು ಸ್ಥಾಪಿಸುವುದು ಹಾಗೂ ಅಧ್ಯಯನ ಕೈಗೊಳ್ಳುವುದು ವಿಶ್ವವಿದ್ಯಾನಿಲಯದ ಅವಿಭಾಜ್ಯ ಅಂಗವಾಗಿದೆ. ಈ ಬಾರಿ ಕುವೆಂಪು, ಜುಂಜಪ್ಪ, ಡಾ: ಜಿ.ಎಸ್.ಪರಮಶಿವಯ್ಯ ಹಾಗೂ ದೇವರಾಜು ಅರಸು ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ ವಿಶ್ವವಿದ್ಯಾನಿಲಯದ ಅಧ್ಯಯನ ಪೀಠಗಳು ಮಹನೀಯರ ವಿಚಾರಧಾರೆಗಳನ್ನು ಪಸರಿಸುವ ವಿಚಾರ ಸಂಕಿರಣ, ಉಪನ್ಯಾಸ, ತರಬೇತಿ, ಮತ್ತಿತರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ವಿಶ್ವವಿದ್ಯಾನಿಲಯವು ತನ್ನೆಲ್ಲಾ ಅಧಿಕೃತ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿಕೊಂಡಿದೆ. ಪಿಹೆಚ್‍ಡಿ ನಿಯಮಾವಳಿಯಲ್ಲಿ ಕನ್ನಡದಲ್ಲಿಯೇ ಪ್ರೌಢ ಪ್ರಬಂಧವನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಹೊಸ ಕ್ಯಾಂಪಸ್ ನಿರ್ಮಾಣ ಕಾಮಗಾರಿ ಪ್ರಗತಿ:-
ನಗರದ ಹೊರವಲಯದ 21 ಕಿ.ಮೀ. ದೂರದಲ್ಲಿ ಕುಣಿಗಲ್ ರಸ್ತೆ ಬಿದರಕಟ್ಟೆಯಲ್ಲಿ 241 ಎಕರೆ ವಿಸ್ತಾರದ ಜಮೀನಿನಲ್ಲಿ ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್ ನಿರ್ಮಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಈ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿ ನಿಲಯದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಪುರುಷರು, ಮಹಿಳೆಯರು ಹಾಗೂ ಸಂಶೋಧನಾರ್ಥಿಗಳಿಗಾಗಿ ಪ್ರತ್ಯೇಕ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು 15.5ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕ್ಯಾಂಪಸ್‍ನ ಮುಖ್ಯದ್ವಾರ ಹಾಗೂ ಇತರೆ ದ್ವಾರಗಳ ನಿರ್ಮಾಣಕ್ಕಾಗಿ 2.5ಕೋಟಿ ರೂ.ಗಳನ್ನು ನಿಗಧಿಪಡಿಸಲಾಗಿದೆ. ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡುವಂತ ಸುಸಜ್ಜಿತ ಸಭಾಂಗಣವನ್ನೊಳಗೊಂಡ ಕಲಾಭವನದ ನಿರ್ಮಾಣಕ್ಕೆ ನಕ್ಷೆ ತಯಾರಿಸಲಾಗುತ್ತಿದೆ. ಅಲ್ಲದೆ ಶಿರಾದಲ್ಲಿ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ನಿರ್ಮಾಣಕ್ಕಾಗಿ 25 ಎಕರೆ ಜಾಗ ದೊರೆತಿದ್ದು, ಸರ್ಕಾರದಿಂದ 10ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ಡಾ: ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರವು ವಿದ್ಯಾರ್ಥಿಗಳಲ್ಲಿ ಅಂಬೇಡ್ಕರ್ ಅವರ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಚುರಪಡಿಸುವ ಕಾರ್ಯ ನಿರ್ವಹಿಸುತ್ತಿದೆ. ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಏಳಿಗೆಗಾಗಿ ವಿಶೇಷ ಘಟಕ/ ಗಿರಿಜನ ಉಪಯೋಜನೆಯಡಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಜೀವನ ಪರ್ಯಂತ ಕಲಿಕೆ ಮುಕ್ತ ಆಲೋಚನೆ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯವನ್ನು ನೀಡಬಲ್ಲ ಪರಿಸರ ನಿರ್ಮಾಣ ಮಾಡುವುದೇ ವಿವಿಯ ಗುರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಲಸಚಿವರುಗಳಾದ ಪ್ರೊ.ಕೆ.ಜೆ.ಸುರೇಶ್ ಹಾಗೂ ಪ್ರೊ.ಕೆ.ಎನ್.ಗಂಗಾನಾಯಕ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕೇತರರು, ವಿದ್ಯಾರ್ಥಿಗಳು, ಪೋಷಕರು, ಮತ್ತಿತರರು ಉಪಸ್ಥಿತರಿದ್ದರು.