ತುಮಕೂರು:
ಪವರ್ ಗ್ರಿಡ್ ಸಂಸ್ಥೆ ಮತ್ತು ಕೂಡ್ಗಿ ಸಂಸ್ಥೆಯಿಂದ ಅನ್ಯಾಯಕ್ಕೊಳಗಾದ ಜಿಲ್ಲೆಯ ರೈತರಿಗೆ ಸೂಕ್ತ ಪರಿಹಾರವನ್ನು ಮುಂಬರುವ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಜಿಲ್ಲಾಧಿಕಾರಿಗಳು ಸಭೆ ಕರೆದು ರೈತರಿಗೆ ಸೂಕ್ತ ಪರಿಹಾರ ನೀಡುವ ಅನುಮೋದನೆ ನೀಡಬೇಕು ಇಲ್ಲದಿದ್ದರೆ ರೈತರು ಕುಟುಂಬ ಸಮೇತ ಸಾಮೂಹಿಕವಾಗಿ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಕೃಷಿಕ ಸಮಾಜ, ನವದೆಹಲಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಕಂಚೇನಹಳ್ಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿಕ ಸಮಾಜ ನವದೆಹಲಿ ಜಿಲ್ಲಾಧ್ಯಕ್ಷ ಸುರೇಶ್ ಕಂಚೇನಹಳ್ಳಿ ತುಮಕೂರು ತಾಲ್ಲೂಕಿನ ಬೆಳ್ಳಾವಿ ಮತ್ತು ಕೋರಾ ಹೋಬಳಿ, ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕಸಬಾ ಮತ್ತು ಹುಲಿಕುಂಟೆ ಹೋಬಳಿ, ಮಧುಗಿರಿ ತಾಲ್ಲೂಕಿನ ಕಸಬಾ, ದೊಡ್ಡೇರಿ ಹೋಬಳಿ, ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಗಳಲ್ಲಿನ ರೈತರ ಜಮೀನುಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ಹೈ ಟೆನ್ಷನ್ ವಿದ್ಯುತ್ ಕಂಬಗಳ ಮತ್ತು ತಂತಿ ಅಳವಡಿಸುವ ಕಾಮಗಾರಿಯನ್ನು ಪವರ್ ಗ್ರಿಡ್ ಮತ್ತು ಕೂಡಿ ಸಂಸ್ಥೆಯವರು ನಿರ್ವಹಿಸುತ್ತಿದ್ದು, ಲೈನ್ ಹಾದುಹೋಗಿರುವ ರೈತರ ಜಮೀನುಗಳಿಗೆ ಹಾಗೂ ಜಮೀನುಗಳಲ್ಲಿರುವ ಮರಗಳಿಗೆ 2014ರ ಜುಲೈ 8 ರಂದು ಅಂದಿನ ಜಿಲ್ಲಾಧಿಕಾರಿಗಳು ಕ್ಲಾಸ್ ಎ ಮರಗಳೆಂದು ಪರಿಗಣಿಸಿ ಪ್ರತಿಯೊಂದು ತೆಂಗಿನ ಮರಕ್ಕೆ 16,314, 3728, 27862, 14800 ಹೀಗೆ ಪರಿಹಾರ ನೀಡಲು ಸೂಚಿಸಿದ್ದರು.
ಇತರೆ ಮರಗಳಿಗೆ ಸರ್ಕಾರ ನಿಗಧಿಪಡಿಸಿರುವ ದರದಂತೆ ಪರಿಹಾರ ನೀಡುವುದು ಜೊತೆಗೆ ಶೇ.10 ರಷ್ಟು ಎಕ್ಸ್ ಗ್ರೇಷಿಯಾ ಪರಿಹಾರವನ್ನು ಪಾವತಿಸಲು ಸೂಚಿಸಿದ್ದರು. ಜಮೀನುಗಳಲ್ಲಿ ಪವರ್‍ಲೈನ್ ಎಳೆಯುವ ಸಂದರ್ಭದಲ್ಲಿ ಜಮೀನಿಗೆ ಆಗುವ ಹಾನಿ ಬಗ್ಗೆ ಪ್ರತಿ ಎಕರೆಗೆ ಅಧಿಕ ಪರಿಹಾರವಾಗಿ 2ಲಕ್ಷ ಪಾವತಿಸಲು ತೀರ್ಮಾನಿಸಿದ್ದರು. ಆದರೆ ಈ ಪರಿಹಾರದ ಮೊತ್ತವು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ಕೃಷಿಕ ಸಮಾಜ ನವದೆಹಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್. ಸುಧೀಂದ್ರ ಮಾತನಾಡಿ ರೈತರ ನ್ಯಾಯಯುತ ಬೇಡಿಕೆಗಳಾದ ಪವರ್ ಗ್ರಿಡ್‍ಸಂಸ್ಥೆಯವರು ರೈತರ ಮೇಲೆ ದಾಖಲು ಮಾಡಿರುವ ಎಲ್ಲಾ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ಸದರಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಭಾಕರ್, ಶ್ರೀಧರ್, ಮತ್ತು ಶ್ರೀಧರ್ ಅವರ ಮೇಲೆ ರೈತರಿಂದ ದೂರು ಪಡೆದು ಮೋಸ ವಂಚನೆ, ಬೆದರಿಕೆ ಸುಳ್ಳು ದೂರು ಸೃಷ್ಠಿ ಮಾಡಿದ್ದು, ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ರೈತರುಗಳ ಜಮೀನಿನ ಜೆಎಂಸಿ ಮತ್ತು ಪಂಚನಾಮೆ ನೀಡಬೇಕು ಮತ್ತು 2014ರ ನಷ್ಟ ಪರಿಹಾರ ಆದೇಶವನ್ನು ಮರು ಪರಿಶೀಲಿಸಿ ಮನವಿಯಲ್ಲಿ ಕೋರಿದಂತೆ ನ್ಯಾಯಯುತ ಪರಿಹಾರ ನಿಗಧಿಪಡಿಸಬೇಕೆಂದು ಒತ್ತಾಯಿಸಿದರು.
ಪ್ರತಿ ರೈತರಿಗೂ ಪರಿಹಾರವನ್ನು ಜಿಲ್ಲಾಧಿಕಾರಿಗಳು ಮತ್ತು ರೈತ ಸಂಘಟನೆ ಮುಖಂಡರ ಪರಿಶೀಲನೆಯಲ್ಲಿ ಪರಿಹಾರ ನೀಡಬೇಕು, 2014 ರಿಂದ ಇಲ್ಲಿಯವರೆಗೆ ಬಡ್ಡಿ ಸಹಿತ ರೈತರಿಗೆ ಪರಿಹಾರ ಕೊಡಿಸಬೇಕು ಇಲ್ಲದಿದ್ದರೆ ರೈತರಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಲು ವಿಫಲವಾಗಿರುವುದರಿಂದ ಜಿಲ್ಲಾಡಳಿತ ನಿರ್ವಹಿಸಲಿರುವ 2019ರ ಲೋಕಸಭಾ ಚುನಾವಣೆಯ ಪ್ರಕ್ರಿಯೆಯಲ್ಲಿ ಪವರ್ ಗ್ರಿಡ್ ಸಂಸ್ಥೆ ಮತ್ತು ಕೂಡ್ಗಿ ಸಂಸ್ಥೆ ಯಿಂದ ಅನ್ಯಾಯಕ್ಕೊಳಗಾಗಿರುವ ಜಿಲ್ಲೆಯ ರೈತರು ಸಾಮೂಹಿಕವಾಗಿ ಕುಟುಂಬ ಸಮೇತ ಚುನಾವಣೆ ಬಹಿಷ್ಕರಿಸಲು ಮತ್ತು ಮತದಾನದ ದಿನ ಮತ ಕೇಂದ್ರದ 100 ಮೀಟರ್ ದೂರದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು. ಇದಕ್ಕೆ ಅವಕಾಶ ನೀಡದೆ ಜಿಲ್ಲಾಡಳಿತ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಅನುಮೋದನೆ ನೀಡಬೇಕೆಂದು ಮನವಿ ಮಾಡಿದರು.