ತುಮಕೂರು:
ತಾಲ್ಲೂಕಿನ ಹೆಬ್ಬೂರು ಹೋಬಳಿ ರಾಯವಾರ ಗ್ರಾಮದ ದಲಿತ ಯುವಕನಿಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣವಾಗಿರುವ 11 ಆರೋಪಿತರನ್ನು ಬಂಧಿಸಬೇಕು, ಆರೋಪಿತರಿಗೆ ಬಿ ರಿಪೋರ್ಟ್ ನೀಡಬಾರದು ಎಂದು ಒತ್ತಾಯಿಸಿ ದಲಿತ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಯವಾರದ ಜಯಣ್ಣ ಎಂಬುವ ಯುವಕ ಸವರ್ಣೀಯರ ಬೆದರಿಕೆಗೆ ಹೆದರಿ, 11 ಮಂದಿಯ ಹೆಸರನ್ನು ಉಲ್ಲೇಖಿಸಿ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಜಾತಿನಿಂದನೆ ಪ್ರಕರಣವೊಂದರಲ್ಲಿ ಆರೋಪಿತರ ಪರವಾಗಿ ಸಾಕ್ಷಿ ಹೇಳದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ತೋಟದ ಮನೆಯಲ್ಲಿ ಕೂಡಿಹಾಕಿದ್ದು, 24-11-18ರಂದು ಸರ್ವಣೀಯರ ಬೆದರಿಕೆಗೆ ಹೆದರಿ ಜಯಣ್ಣ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆರೋಪಿತರಲ್ಲಿ ಕೆಂಪೇಗೌಡ ರೌಡಿಶೀಟರ್ ಆಗಿದ್ದು, ರಘುಕುಮಾರ್ ಎಂಬುವರ ಮೇಲೆ ಮೂರು ಜಾತಿ ನಿಂದನೆ ಪ್ರಕರಣಗಳು ದಾಖಲಾಗಿದ್ದು, ರಾಜಕೀಯ ಮತ್ತು ಹಣ ಬಲದಿಂದ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಪಡೆದುಕೊಳ್ಳಲು ಪ್ರಭಾವ ಬೀರುತ್ತಿದ್ದು, ಪ್ರಕರಣದಲ್ಲಿ ಇದುವರೆಗೂ ಪ್ರಕರಣದ ಎರಡನೇ ಆರೋಪಿ ಜಯಮ್ಮ, ಶಾಂತರಾಜು, ಆರತಿ, ಜಯಮ್ಮ ಎಂಬುವರನ್ನು ಸೇರಿ 6 ಮಂದಿಯನ್ನು ಪೊಲೀಸರು ಬಂಧಿಸದೇ, ಇವರನ್ನು ಪ್ರಕರಣದಿಂದಲೇ ಕೈಬಿಡಲು ಬಿ ರಿಪೋರ್ಟ್ ಹಾಕಲು ಪೊಲೀಸರು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಬೇಕು, ಈ ಪ್ರಕರಣದಲ್ಲಿ ಕೈಬಿಟ್ಟಿರುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು, ದಲಿತರ ಮೇಲೆ ದೌರ್ಜನ್ಯ ನಡೆಸಿರುವವರ ಪರವಾಗಿ ಬಿ ರಿಪೋರ್ಟ್ ಹಾಕಿದರೆ, ಆರೋಪಿಗಳಿಗೆ ಪೊಲೀಸರೇ ರಕ್ಷಣೆ ನೀಡಿದಂತಾಗುತ್ತದೆ, ಆರೋಪಿಗಳನ್ನು ಬಂಧಿಸಿ ಕಾನೂನಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಮುಖಂಡರಾದ ಡಿಎಸ್‍ಎಸ್ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಅಖಿಲಭಾರತ ಡಾ||ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ನೇತೃತ್ವದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.