ತುಮಕೂರು:
ಕಟ್ಟಡ ಮತ್ತಿತರ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವ ಕಾರ್ಮಿಕ ಕೈಗಳಿಗೆ ಎಲ್ಲರಂತೆ ಗೌರವ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳ ಸಹಯೋಗದಲ್ಲಿಂದು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ “ಕಾರ್ಮಿಕ ಸಮ್ಮಾನ ಪ್ರಶಸ್ತಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅರ್ಹ ಫಲಾನುಭವಿಗಳಿಗೆ ಕಾರ್ಯಕ್ರಮಗಳ ಸೌಲಭ್ಯ ತಲುಪಬೇಕು. ಕಟ್ಟಡ ಕಾರ್ಮಿಕರು ಹಾಗೂ ವಾಹನ ಚಾಲಕರಿಗೆ ವಿಮಾ ಸೌಲಭ್ಯ ನೀಡಲು ಅನುದಾನ ಲಭ್ಯವಿದ್ದು, ಅಧಿಕಾರಿಗಳು ಸೌಲಭ್ಯಗಳನ್ನು ಶೀಘ್ರವೇ ಅರ್ಹರಿಗೆ ನೀಡಬೇಕು. ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ, ಹೆರಿಗೆ, ಮದುವೆಗಾಗಿ ಧನಸಹಾಯ ಹಾಗೂ ವಸತಿ ನಿರ್ಮಾಣ, ವಿದ್ಯಾರ್ಥಿ ವೇತನದಂತಹ ಸವಲತ್ತುಗಳನ್ನು ಸರ್ಕಾರ ಒದಗಿಸುತ್ತಿದ್ದು, ಕಾರ್ಮಿಕರು ಈ ಸೌಲಭ್ಯವನ್ನು ಬಳಸಿಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಜಿಲ್ಲೆಯಲ್ಲಿ ಲಕ್ಷಾಂತರ ಮಂದಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿದ್ದು, ಇವರಲ್ಲಿ 52ಸಾವಿರ ಕಾರ್ಮಿಕರು ಇಎಸ್‍ಐ ವಂತಿಕೆಯನ್ನು ಪಾವತಿಸುತ್ತಿದ್ದಾರೆ. ಇಎಸ್‍ಐ ವಂತಿಗೆಯನ್ನು 50ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪಾವತಿ ಮಾಡುತ್ತಿದ್ದಲ್ಲಿ ಇಎಸ್‍ಐ ಆಸ್ಪತ್ರೆ ಸೌಲಭ್ಯ ಒದಗಿಸುವುದು ನಮ್ಮ ಜವಾಬ್ದಾರಿ ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶೇಷವಾಗಿ ಕಾರ್ಮಿಕ ವಲಯದಲ್ಲಿ ಶ್ರಮವಹಿಸಿ ಕೆಲಸ ಮಾಡಿದ ಅಗಸ, ಕ್ಷೌರಿಕ, ಅಕ್ಕಸಾಲಿಗ, ಕುಂಬಾರ, ಕಮ್ಮಾರ ಸೇರಿದಂತೆ 11 ವಿವಿಧ ವರ್ಗಗಳಿಗೆ ಸೇರಿದ 194 ಮಂದಿಗೆ ಶ್ರಮಸಮ್ಮಾನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪೈಕಿ ಜಯಮ್ಮ, ಲಕ್ಷ್ಮಮ್ಮ, ವೈ.ಬಿ. ಚಂದ್ರಶೇಖರ್, ಮಂಜುನಾಥ್, ಕಮಲಮ್ಮ, ಕೆ.ಪಿ ಚಾಣಾಕ್ಷ, ಬಿ.ಕೆ ನಾಗರಾಜು, ಕೆ.ಸಿ ವರದರಾಜು, ಮೆಹಬೂಬ್ ಪಾಷಾ, ವಜೀರ್, ನಾಗರಾಜ್, ಗಂಗಾಧರ್, ಮಂಜುನಾಥ್ ಹೆಚ್.ವಿ., ಮಂಜೇಗೌಡ ಅವರಿಗೆ 10 ಸಾವಿರ ರೂ.ಗಳ ನಗದು ಬಹುಮಾನದೊಂದಿಗೆ ಶ್ರಮ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಕಾರ್ಮಿಕ ಇಲಾಖೆಯಿಂದ ಒಂದು ಸಾವಿರ ಗೋಡೆ ಕ್ಯಾಲೆಂಡರ್ ಹಾಗೂ 2ಸಾವಿರ ಪ್ಯಾಕೇಟ್ ಕ್ಯಾಲೆಂಡರ್ ವಿತರಿಸಲಾಯಿತು.
ಕಾರ್ಮಿಕ ಇಲಾಖೆಯ ಉಪ ಆಯುಕ್ತ ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ.ಟಿ ನಿರಂಜನ್, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.