ತುಮಕೂರು:
ಗಂಡ, ಅತ್ತೆ, ಮಾವಂದಿರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ನಗರದ ಗೋಕುಲ ಬಡಾವಣೆ ನಿವಾಸಿ ರಾಜೇಶ್ವರಿ ಹಾಗೂ ಈಕೆಯ ತಮ್ಮ ಮೋಹನ್ ಕುಮಾರ್ ಅವರಿಗೆ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಆರೋಪಿ ರಾಜೇಶ್ವರಿಯು ತನ್ನ ಗಂಡ ಆನಂದ, ಮಾವ ರಾಮಕೃಷ್ಣ ಹಾಗೂ ಅತ್ತೆ ನಿಂಗಮ್ಮ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಈಕೆಯು ಮನೆಯಲ್ಲಿ ಸರಿಯಾಗಿ ಕೆಲಸ ಮಾಡದೆ, ಮನೆಯವರನ್ನು ಗೌರವ ತೋರದೆ ಏಕವಚನದಲ್ಲಿ ಬೈಯುವುದು, ಗಂಡನನ್ನು ಷಂಡನನ್ನ ಮಗ ಎಂದು ಪದೇಪದೇ ಹಿಯ್ಯಾಳಿಸಿ ತವರು ಮನೆಗೆ ಹೋಗುವುದು, ತನ್ನ ತಮ್ಮ ಮೋಹನ್‍ಕುಮಾರ್‍ನೊಂದಿಗೆ ಸೇರಿ ನೀವೆಲ್ಲಾ ಇರುವುದಕ್ಕಿಂತ ಕೆರೆಗೋ-ಬಾವಿಗೋ ಬಿದ್ದು ಸಾಯಿರಿ. ವರದಕ್ಷಿಣೆ ಕೇಸು ಕೊಟ್ಟು ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದು ಅವಮಾನ ಮಾಡಿದ್ದರಿಂದ ಕಿರುಕುಳ ತಾಳಲಾರದೆ ಆರೋಪಿಯ ಗಂಡ ಆನಂದ, ಅತ್ತೆ ನಿಂಗಮ್ಮ, ಮಾವ ರಾಮಕೃಷ್ಣ ಅವರು 2015ರ ಡಿಸೆಂಬರ್ 14ರಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಕಾಳಿಂಗನಹಳ್ಳಿ ಗ್ರಾಮದ ಬಳಿ ಇರುವ ಮಾರ್ಕೋನಹಳ್ಳಿ ಜಲಾಶಯದ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕ್ಷ್ಯಾಧಾರಗಳಿಂದ ರುಜುವಾತಾಗಿದೆ.
ಆರೋಪ ಸಾಬೀತಾಗಿದ್ದರಿಂದ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಾಬಾ ಸಾಹೇಬ್ ಜಿನರಾಳ್ಕರ್ ಅವರು ರಾಜೇಶ್ವರಿಗೆ 5 ವರ್ಷ ಕಠಿಣ ಶಿಕ್ಷೆ ಮೋಹನ್ ಕುಮಾರ್‍ಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 50ಸಾವಿರ ರೂ.ಗಳ ದಂಡ ವಿಧಿಸಿ ಇತ್ತೀಚೆಗೆ ತೀರ್ಪು ನೀಡಿದ್ದಾರೆ. ತನಿಖಾಧಿಕಾರಿ ಪಾರ್ವತಮ್ಮ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಆರ್.ಟಿ.ಅರುಣ ವಾದ ಮಂಡಿಸಿದ್ದರು.