ತುಮಕೂರು:

      ಇತಿಹಾಸ ಪ್ರಸಿದ್ದ ಸಿದ್ದಗಂಗಾ ಕ್ಷೇತ್ರದ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವೋಪೇತವಾಗಿ ಇಂದು ನಡೆಯಿತು.

      ನಡೆದಾಡುವ ದೇವರಾಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ನಂತರ ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಮೊದಲ ರಥೋತ್ಸವ ಇದಾಗಿದ್ದು, ಮಧ್ಯಾಹ್ನ 12.10 ಗಂಟೆಗೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ಹಿರಿಯ ಶ್ರೀಗಳಂತೆ ರಥದ ಬಲಭಾಗದ ಗಾಲಿಗೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

      ರಥೋತ್ಸವಕ್ಕೂ ಮುನ್ನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯನ್ನು ಶ್ರೀಗಳ ಗದ್ದುಗೆ ಬಳಿಗೆ ಕೊಂಡೊಯ್ದು ಪೂಜೆ ಸಲ್ಲಿಸಿ, ನಂತರ ರಥದ ಸುತ್ತ ಮೂರು ಸುತ್ತು ಸುತ್ತಿದ ನಂತರ ರಥಕ್ಕೆ ಕೂರಿಸಲಾಯಿತು. ನಂತರ ಸಿದ್ದಲಿಂಗ ಸ್ವಾಮೀಜಿಯವರು ರಥದ ಗಾಲಿಗೆ ತೆಂಗಿನಕಾಯಿ ಒಡೆದು ಚಾಲನೆ ನೀಡುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಸಮೂಹದ ಹರ್ಷೋದ್ಗಾರ ಮುಗಿಲು ಮುಟ್ಟಿತು. ನೆತ್ತಿ ಸುಡುವ ಬಿಸಿಲಿನ ಝಳವನ್ನು ಲೆಕ್ಕಿಸದೆ ಭಕ್ತಾದಿಗಳು ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.

      ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಅಮೂಲ್ಯ ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ವಿವಿಧ ಮಠಾಧೀಶರುಗಳು ಸೇರಿದಂತೆ ಅನೇಕ ಗಣ್ಯರು, ಭಕ್ತಾದಿಗಳು ಭಾಗವಹಿಸಿದ್ದರು.

      ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯನ್ನು ಅಭೂತಪೂರ್ಣ ವಸ್ತ್ರಗಳಿಂದ ಸುವರ್ಣ ಕಲಶಗಳಿಂದ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕೃತವಾದ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು.ರಥ ಸಾಗಿದ ದಾರಿಯುದ್ದಕ್ಕೂ ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೆರೆದಿದ್ದ ಸಹಸ್ರಾರು ಭಕ್ತ ಸಮೂಹವನ್ನು ಆಕರ್ಷಿಸಿದವು.

      ನಿನ್ನೆ ಶಿವರಾತ್ರಿ ಹಬ್ಬದ ಪ್ರಯುಕ್ತ ರಾತ್ರಿಯೇ ಶ್ರೀಮಠಕ್ಕೆ ನಾಡಿನ ವಿವಿಧೆಡೆಯಿಂದ ಭಕ್ತಾದಿಗಳ ದಂಡೇ ಹರಿದು ಬಂದಿದ್ದು, ಸುಡು ಬಿಸಿಲನ್ನೂ ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಬಾಳೆಹಣ್ಣು, ಹೂವು, ದವನ ಎಸೆದು ಭಕ್ತಿ ಸಮರ್ಪಿಸಿದರು.

      ಶಿವರಾತ್ರಿ ಪ್ರಯುಕ್ತ ಜಾಗರಣೆಗಾಗಿ ನಾಡಿನಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ರಾತ್ರಿಯೇ ರಾತ್ರಿಯೇ ಶ್ರೀಮಠಕ್ಕೆ ಆಗಮಿಸಿದ್ದ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

      ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಹಲವು ಸಂಘ ಸಂಸ್ಥೆಗಳಿಂದ ಪಾನಕ, ನೀರು, ಮಜ್ಜಿಗೆಯನ್ನು ವಿತರಿಸಲಾಯಿತು.  

(Visited 42 times, 1 visits today)