ತುಮಕೂರು:
ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಟೌನ್‍ಹಾಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಟೌನ್‍ಹಾಲ್‍ನಲ್ಲಿ ಸಮಾವೇಶಗೊಂಡ ಕಟ್ಟಡ ಮತ್ತು ಕ್ವಾರಿ ಕಾರ್ಮಿಕರ ಸಂಘದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಿಪಿಐ ಜಿಲ್ಲಾ ಸಂಚಾಲಕ ಗಿರೀಶ್ ಅವರು, ಕಾರ್ಮಿಕರ ಮಂಡಳಿಯಲ್ಲಿ ನೊಂದಣಿಯನ್ನು ಮಾಡುವ ವಿಧಾನವನ್ನು ಬದಲಾಯಿಸಬಾರದು, ಸಾರ್ವಜನಿಕರು ಅಥವಾ ಕಾರ್ಮಿಕರಿಗೆ ನೇರವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದರೆ, ಕಾರ್ಮಿಕರಲ್ಲದವರು ನೋಂದಣಿಯಾಗುವ ಸಾಧ್ಯತೆ ಇದ್ದು, ನೈಜ ಕಾರ್ಮಿಕರಿಗೆ ಅನ್ಯಾಯವಾಗಲಿದ್ದು, ಸರ್ಕಾರ ಯಾವುದೇ ಕಾರಣಕ್ಕೂ ಈ ವಿಧಾನವನ್ನು ಬದಲಿಸಲು ಮುಂದಾಗಬಾರದು ಎಂದು ಒತ್ತಾಯಿಸಿದರು.
ರಾಜ್ಯ ಸಮಿತಿ ಮಾರ್ಚ್ 06ರನ್ನು ಬೇಡಿಕೆ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದು, ರಾಜ್ಯದೆಲ್ಲೆಡೆ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಅಂಬೇಡ್ಕರ್ ಕಾರ್ಮಿಕ ಹಸ್ತ ಯೋಜನೆಯಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿಶೇಷ ಅಭಿಯಾನದಲ್ಲಿ ಕಟ್ಟಡ ಕಾರ್ಮಿಕರಲ್ಲದ ಪುರುಷರು, ಮಹಿಳೆಯರು, ವಿದ್ಯಾರ್ಥಿಗಳನ್ನು ಹಣ ಪಡೆದು ನೋಂದಣಿ ಮಾಡುತ್ತಿದ್ದು, ನರೇಗಾದಡಿ ಗುತ್ತಿಗೆದಾರರ ಉಸ್ತುವಾರಿಯಲ್ಲಿ ಅಕ್ರಮ ನಡೆಯುತ್ತಿದ್ದು, ಈ ಮೂಲಕ ಕಾರ್ಮಿಕ ಕಲ್ಯಾಣ ಮಂಡಳಿ ನಿಧಿಯನ್ನು ಖಾಲಿ ಮಾಡುವ ಹುನ್ನಾರ ಮಾಡಲಾಗುತ್ತಿದ್ದು, ತಕ್ಷಣವೇ ಈ ಬಗ್ಗೆ ವಿಚಾರಣೆ ನಡೆಸಿ ನೋಂದಣಿ ಸ್ಥಗಿತಗೊಳಿಸಬೇಕೆಂದರು.
ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಸೌಲಭ್ಯಗಳು ತಲುಪುತ್ತಿಲ್ಲ, ಸಣ್ಣಪುಟ್ಟ ತಪ್ಪುಗಳ ನೆಪದಲ್ಲಿ ವಿಳಂಬವಾಗುತ್ತಿದ್ದು, ಅಪಘಾತ ಪರಿಹಾರವನ್ನು 10ಲಕ್ಷಕ್ಕೆ ಹೆಚ್ಚಿಸಬೇಕು, ಚಿಕಿತ್ಸಾ ವೆಚ್ಚವನ್ನು 5 ಲಕ್ಷಕ್ಕೆ ಹೆಚ್ಚಿಸುವುದು ಹಾಗೂ ಮಾಸಿಕ ಪಿಂಚಣಿಯನ್ನು 3000 ಸಾವಿರಕ್ಕೆ ಹೆಚ್ಚಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಕಾಲಮಿತಿಯನ್ನು ನಿಗದಿಪಡಿಸಬಾರದು ಎಂದು ಒತ್ತಾಯಿಸಿದರು.
ಮಂಡಳಿಯಿಂದ ಸೌಲಭ್ಯ ಪಡೆಯಲು ನೀಡುವ ಅರ್ಜಿಗೆ ಪಡೆಯುತ್ತಿರುವ ಶುಲ್ಕವನ್ನು ರದ್ದುಗೊಳಿಸಬೇಕು, ಮಂಡಳಿ ಕಚೇರಿಯಿಂದ ನಿರೀಕ್ಷಕರ ಕಚೇರಿಯವರೆಗೆ ಫಲಾನುಭವಿಗಳು ಅರ್ಜಿ ಸಲ್ಲಿಸುವುದರಿಂದ ಸೌಲಭ್ಯ ವಿತರಣೆವರೆಗೆ ಪಾರದರ್ಶಕತೆ ಇರಬೇಕೆಂದರೆ ಇನ್‍ವರ್ಡ್ ದಾಖಲಾತಿಗಳನ್ನು ಕಡ್ಡಾಯವಾಗಿ ತೆಗೆಯಬೇಕು, ಇಲಾಖೆ ಅಧಿಕಾರಿಗಳು ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿ ಮಾಹಿತಿ ನೀಡುತ್ತಿರುವುದರಿಂದ ಕಾರ್ಮಿಕರಲ್ಲಿ ಉಂಟಾಗುವ ಗೊಂದಲವನ್ನು ತಡೆಯಬೇಕು, ಮಂಡಳಿ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.