ತುರುವೇಕೆರೆ:
ತಾಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಡಿ.ಹೊಸಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮೀದೇವರ ದೇವಾಲಯ ನಮ್ಮ ಪೂರ್ವಜರ ಸ್ವತ್ತಾಗಿದ್ದು ಆದರೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಮ್ಮ ಸಹೋದರರೊಡಗೂಡಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು ಮಾಹಿತಿ ಹಕ್ಕು ಅಧಿನಿಯಮದಡಿ ದೇವಾಲಯದ ಖಾತೆ ನಕಲು ಕೇಳಿದರೆ ದಾಖಲೆ ನೀಡುತ್ತಿಲ್ಲವೆಂದು ಸಾಮಾಜಿಕ ಹೋರಾಟಗಾರ ಹಾಗೂ ನಿವೃತ್ತ ಶಿಕ್ಷಕ ಹೆಚ್.ಎಲ್.ಕೃಷ್ಣಮೂರ್ತಿ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮೀದೇವರ ದೇವಾಲಯ ನಮ್ಮ ಪೂರ್ವಜರ ಸ್ವತ್ತು ಈ ದೇವಾಲಯದ ನಿರ್ಮಾಣವನ್ನು ನಮ್ಮ ತಂದೆಯವರು ತಮ್ಮ ಸ್ವಂತ ಜಾಗದಲ್ಲಿ ಸ್ವಂತ ಕರ್ಚಿನಲ್ಲಿ ನಿರ್ಮಿಸಿದ್ದರು. ನಾವು ಮೂವರು ಸಹೋದರರು ಆದರೆ ನನ್ನನ್ನು ಹೊರತುಪಡಿಸಿ ದೇವಾಲಯದ ಜಾಗವನ್ನು ನನ್ನ ಸಹೋದರರು ಖಾತೆ ಮಾಡಿಸಿಕೊಂಡಿರುವ ಸಂಶಯ ನನ್ನಲಿದೆ. ದೇವಾಲಯದ ಪೂಜಾಕೈಂಕರ್ಯಗಳಿಂದ ನನ್ನನ್ನು ಹೊರಗಿಟ್ಟಿರುವುದು ಒಂದೆಡೆಯಾದರೆ ದೇವಾಲಯದ ಖಾತೆ ನಕಲನ್ನು ಮಾಹಿತಿ ಹಕ್ಕಿನ ಅಧಿನಿಯಮದಡಿ ಸ್ಥಳೀಯ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಮಾಹಿತಿ ಹಕ್ಕು ನಿಯಮದ ಪ್ರಕಾರ 30ದಿನಗೊಳೊಳಗಾಗಿ ದಾಖಲೆ ನೀಡಬೇಕು ಆದರೆ ಪಿ.ಡಿ.ಒ. 30ದಿನಗಳ ನಂತರ ನಾನು ಕೇಳಿರುವ ದಾಖಲೆ ನೀಡದೆ ಬೇರ್ಯಾವುದೋ ದಾಖಲೆ ನೀಡಿ ಮಾಹಿತಿ ಹಕ್ಕು ಅಧಿನಿಯಮಕ್ಕೆ ಅಗೌರವ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ತಾಲೂಕು ಕಾರ್ಯನಿರ್ವಾಹಾಣಾಧಿಕಾರಿಗಳ ಬಳಿ ಮೇಲ್ಮನವಿ ಸಲ್ಲಿಸಿದಾಗ ಕೇವಲ ಪಿ.ಡಿ.ಒ.ಗೆ ಮಾಹಿತಿ ನೀಡುವಂತೆ ನಿರ್ದೇಶನದ ಪತ್ರವೊಂದನ್ನು ಹೊರತು ಪಡಿಸಿದರೆ ಮತ್ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ತದನಂತರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೂ ಮೇಲ್ಮನವಿ ಸಲ್ಲಿಸಿದಾಗ ಅವರು ಮಾಹಿತಿ ಹಕ್ಕಿನಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳನ್ನು ವಿಚಾರಣೆ ಮಾಡುವ ಅಧಿಕಾರ ನಮಗಿಲ್ಲ. ನೀವು ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿ ಎಂದು ತಿಳಿಸಿರುತ್ತಾರೆ. ಒಂದು ದೇವಾಲಯದ ಖಾತ ನಕಲು ಪಡೆಯಲು 2018 ನವೆಂಬರ್ ತಿಂಗಳಿಂದಲೂ ಪ್ರಯತ್ನ ಪಡುತ್ತಿದ್ದರೂ ಇಲ್ಲಿಯವರೆಗೂ ಪಡೆಯಲು ಸಾಧ್ಯವಾಗಿಲ್ಲ ಬೇಸರದಿಂದು ಖುದ್ದು ಪಂಚಾಯಿತಿ ಕಚೇರಿಗೆ ತೆರಳಿ ಮಾಹಿತಿ ಕೇಳಲು ಹೋದಾಗ ನನ್ನನ್ನು ಪಿ.ಡಿ.ಒ. ಕಚೇರಿ ಸಿಬ್ಬಂದಿಯೊಟ್ಟಿಗೆ ಅಪಹಾಸ್ಯ ಮಾಡಿದರು. ಮಾಹಿತಿ ಹಕ್ಕು ಅಧಿನಿಯಮಕ್ಕೆ ಬೆಲೆ ಕೊಡದ ಪಿ.ಡಿ.ಒ. ವಿರುದ್ದ ಪಂಚಾಯಿತಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.