ತುಮಕೂರು:
ಹುಳಿಯಾರು ಹೋಬಳಿ ಪೋಚಕಟ್ಟೆ ಗ್ರಾಮದ ಪೋಚಕಟ್ಟೆ ಗೇಟ್‍ನಿಂದ ಉತ್ತರಕ್ಕೆ ಪೋಚಕಟ್ಟೆ ಗ್ರಾಮ, ಹುಳಿಯಾರು ಅಮಾನಿಕೆರೆ ಮತ್ತು ಕಸಬಾ ಗ್ರಾಮಗಳ ಆಯ್ದ ಸರ್ವೆ ನಂಬರ್‍ನ ಜಮೀನುಗಳಲ್ಲಿ ಹಾದು ಹೋಗುವ ನಿಯೋಜಿತ 150ಎ ಬೈಪಾಸ್ ರಸ್ತೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತ ಮುಖಂಡರಾದ ಸತೀಶ್ ಕೆಂಕೆರೆ ನೇತೃತ್ವದಲ್ಲಿ ಈ ಭಾಗದ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹುಳಿಯಾರಿನ ನಿವಾಸಿಗಳ ಪೈಕಿ ನಾಲ್ಕು ಮಂದಿ ಮಾತ್ರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಈ ಸಂಬಂಧ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ಅವರಿಗೆ ಮನವಿ ಅರ್ಪಿಸಿದರು.
ಬೈಪಾಸ್ ಆರಂಭಗೊಂಡಿರುವ ಪೋಚಕಟ್ಟೆ ಗ್ರಾಮ ಹುಳಿಯಾರು ಕಸಬಾ ಗಡಿಯಲ್ಲಿದ್ದು, ಈ ಎರಡು ಗ್ರಾಮಗಳ ಮಧ್ಯೆ ಪೂರ್ವಕ್ಕೆ ಹರಿಯುವ ವೇದಾವತಿ ಹಾಗೂ ಸುವರ್ಣಮುಖಿ ನದಿಗಳ ಉಪನದಿಯಿದ್ದು, ಪೋಚಕಟ್ಟೆ ಹಾಗೂ ಹುಳಿಯಾರು ಗ್ರಾಮದ ತೊರೆದಂಡೆಯಲ್ಲಿರುವ ಜಮೀನುಗಳು ತೆಂಗು, ಅಡಿಕೆ, ಬಾಳೆ ಮುಂತಾದ ಆರ್ಥಿಕ ಬೆಳೆಗಳ ಮೂಲ ತಾಣವಾಗಿದ್ದು, ಈ ಎರಡು ಗ್ರಾಮಗಳ ಭೂಮಿ ಅತಿ ಉತ್ಕೃಷ್ಟ, ಫಲವತ್ತಾದ, ಬೆಲೆ ಬಾಳುವ ಭೂಮಿಯಾಗಿರುವುದರಿಂದ ತೋಟಗಾರಿಕಾ ಪ್ರದೇಶವಾಗಿದೆ. ಈ ಉಪನದಿಗೆ ಹೊಸದಾಗಿ ಸೇತುವೆ ನಿರ್ಮಾಣ ಮಾಡಬೇಕಾಗಿದೆ ಎಂದು ನಿವಾಸಿಗಳು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಅಮಾನಿಕೆರೆ ಮೂಲಕ ಹಾದು ಹೋಗಿರುವ ನಿಯೋಜಿತ ಬೈಪಾಸ್ ರಸ್ತೆ ಪ್ರದೇಶ ತಗ್ಗುಪ್ರದೇಶವಾಗಿದ್ದು, ಭವಿಷ್ಯದಲ್ಲಿ ಮರಳು ಮಣ್ಣಿನಿಂದ ಕೂಡಿ ಎಷ್ಟು ಆಳ ಬಗೆದಷ್ಟು ಗಟ್ಟಿ ಮಣ್ಣು ಸಿಗಲಾರದು. ಆಳಕ್ಕೆ ಬಗೆದಷ್ಟು ಲಘು ಮಣ್ಣು ಮರಳು ದೊರೆತು ರಸ್ತೆ ಭದ್ರತೆಗೆ ಯೋಗ್ಯವಲ್ಲದಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಇನ್ನು ಹುಳಿಯಾರು ಗ್ರಾಮದ ಜಮೀನುಗಳು ಪಿತ್ರಾರ್ಜಿತವಾದ ನೂರಾರು ವರ್ಷಗಳಿಂದ ಸಾಗುವಳಿಗೆ ಒಳಪಟ್ಟಿದ್ದು, ಉತ್ತಮ ಗುಣಮಟ್ಟದ ವ್ಯವಸಾಯಕ್ಕೆ ಯೋಗ್ಯವಾದ ಫಲವತ್ತಾದ ಭೂಮಿಯಾಗಿದ್ದು, ಪಿತ್ರಾರ್ಜಿತ ಜಮೀನುಗಳಾದ್ದರಿಂದ ಸಣ್ಣ, ಅತಿ ಸಣ್ಣ ರೈತಾಪಿ ಕುಟುಂಬಗಳ ಪಾಲಿಗೆ ಸರ್ವಸ್ವವಾಗಿದ್ದು, ಈ ಮಣ್ಣಿನೊಂದಿಗೆ ಜನತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ದಿನ ಕಳೆದಂತೆ ಈ ಪ್ರದೇಶಗಳು ಜನವಸತಿ ಪ್ರದೇಶವಾಗಲಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹುಳಿಯಾರಿನ ಮುಂದಿನ ಭವಿಷ್ಯದ ದೃಷ್ಠಿಯಿಂದ ಈ ನೆಲದ ರೈತಾಪಿ ಜನರ ಭಾವನಾತ್ಮಕ ಬದುಕಿನ ಹುಳಿಯಾರು ವ್ಯಾಪ್ತಿಯ ಜಮೀನುಗಳನ್ನು ಉಳಿಸಿ ನಿಯೋಜಿತ ರಸ್ತೆಯಷ್ಟೆ ಉದ್ದವುಳ್ಳ ಕಡಿಮೆ ವೆಚ್ಚದ ಯೋಜನೆಗೆ ಮನ್ನಣೆ ನೀಡಿ ಈ ಮೊದಲ ನಿಯೋಜನೆ 150ಎ ಬೈಪಾಸ್ ರಸ್ತೆಯನ್ನು ರದ್ದುಗೊಳಿಸಿ ಬಡವರ ಬದುಕಿಗೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹೆಚ್.ಎಂ. ಶಿವಕುಮಾರ್, ಕುಮಾರ್, ಹೆಚ್.ಪಿ. ಕೃಷ್ಣಮೂರ್ತಿ, ಪಂಚಾಕ್ಷರಿ, ಮೈಲಾರಯ್ಯ, ಸುನೀಲ್‍ಕುಮಾರ್, ನಟರಾಜು, ಸಿದ್ದಪ್ಪ, ದುರ್ಗಯ್ಯ, ಲತಾ ಮತ್ತಿತರರು ಉಪಸ್ಥಿತರಿದ್ದರು.