ಚಿಕ್ಕನಾಯಕನಹಳ್ಳಿ:

      ಗ್ರಾಮೀಣ ಭಾಗದಿಂದಲೂ ಮರೆಯಾಗುತ್ತಿರುವ ಶ್ರಮಸಂಸ್ಕೃತಿಯನ್ನು, ಈಗಿನ ಸಮಾಜಕ್ಕೆ ಪರಿಚಯುಸುವಲ್ಲಿ ತಾಲ್ಲೂಕಿನ ಶೆಟ್ಟಿಕೆರೆಯ ಜನತಾಯುವ ಕ್ರೀಡಾಸಂಘ ಪ್ರಯತ್ನ ಶ್ಲಾಘನೀಯ ಕಾರ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸಮೂರ್ತಿ ತಿಳಿಸಿದರು.

      ತಾಲ್ಲೂಕಿನ ಶೆಟ್ಟಿಕೆರೆಯ ಜನತಾ ಪ್ರೌಢಶಾಲಾ ಆವರಣದಲ್ಲಿ ಅಂತರ್‍ರಾಷ್ಟ್ರೀಯ ಮಹಿಳಾದಿನದ ಅಂಗವಾಗಿ ನಡೆದ ರಾಗಿಬೀಸುವ ಸ್ಪರ್ಧೆ ಹಾಗೂ ಮೂರು ಬಿಂದಿಗೆ ನೀರು ಹೊರವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೆ ಜಾನಪದಗಳ ಹುಟ್ಟಿಗೆ ಕಾರಣವಾಗಿದ್ದ ಧಾನ್ಯಗಳನ್ನು ಬೀಸುವ ಹಾಗೂ ಕುಟ್ಟುವ ಸಂಸ್ಕೃತಿ ಇಂದು ಮರೆಯಾಗಿದೆ. ಅಂದು ರೈತರು ಕೊಟ್ಟಿಗೆ ಗೊಬ್ಬರವನ್ನು ತಮ್ಮ ಹೊಲಕ್ಕೆ ಬಳಸಿ ಯಾವುದೇ ರಾಸಾಯನಿಕ ಆಂಶದಿಂದ ಹೊರತಾದ ಧಾನ್ಯವನ್ನು ಬೆಳೆಯುತ್ತಿದ್ದರು. ನಂತರ ಕಣದಲ್ಲಿ ಸಂಸ್ಕರಿಸಿದ ಧಾನ್ಯವನ್ನು ಮನೆಗೆ ತಂದು ಕೆಡದಂತೆ ತಮ್ಮದೆ ವ್ಯವಸ್ಥೆಯಲ್ಲಿ ಇಡುತ್ತಿದ್ದರು. ಇಂತಹ ಧಾನ್ಯವನ್ನು ಪುಡಿಮಾಡಿ ಬಳಸುವಲ್ಲಿ ಬೀಸುವ ಕಲ್ಲುಗಳು , ಒರಳಕಲ್ಲು ಮತ್ತು ಒನಕೆಗಳ ಬಳಕೆ ಎಲ್ಲಾ ಮನೆಯಲ್ಲಿಯೂ ಇರುತ್ತಿತ್ತು. ಇದರ ಬಳಕೆಯಿಂದ ಧಾನ್ಯದಲ್ಲಿನ ಸತ್ವ ಹಾಗೂ ಸಾರದ ಅಂಶಗಳು ಪುಡಿಮಾಡಿದಾಗಲೂ ಹಾಗೆಯೇ ಉಳಿಯುತ್ತಿತ್ತು. ಆದರೆ ಕ್ರಮೇಣ ರೈಸ್‍ಮಿಲ್ ಹಾಗೂ ಗ್ರೈಂಡರ್‍ಗಳ ಪರಿಪಾಟ ಎಲ್ಲಡೆ ಬಂದಾಗ ರೈಸ್‍ಮಿಲ್‍ನಿಂದ ಧಾನ್ಯ ಪುಡಿಯಾಗುತ್ತಿದ್ದಾಗಲೇ ವಿಪರೀತ ಶಾಖದ ಪರಿಣಾಮದಿಂದ ಧಾನ್ಯದಲ್ಲಿನ ಸಾರ ಹಾಗೂ ಸತ್ವದ ಪ್ರಮಾಣ ಗಣನೀಯವಾಗಿ ವ್ಯವವಾಗುತ್ತದೆ. ಇಂತಹ ಆಹಾರದ ಬಳಕೆಯಿಂದ ನಮ್ಮ ದೇಹಕ್ಕೆ ಸಿಗಬೇಕಾದ ಪೌಷ್ಟಿಕಾಂಶದ ಕೊರತೆಯಿಂದ ಕ್ರಮೇಣ ದೇಹದ ಆರೋಗ್ಯ ಏರುಪೇರಾಗುತ್ತಿದೆ. ಇದರ ಅರಿವು ಬಹುತೇಕರಿಗೆ ಇರುವುದಿಲ್ಲವೆಂದ ಅವರು ಗ್ರಾಮೀಣ ಭಾಗದಲ್ಲಿ ರಾಗಿ ಬೀಸುವ ವಿಧಾನ ಇನ್ನೂ ಜೀವಂತವಾಗಿದೆ. ಈಗಿನ ಯುವಜನತೆ ಇಂತಹ ಪಾರಂಪರಿಕ ಶ್ರಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಬೇಕಿದೆ ಎಂದರು.

      ನಂತರ ನಡೆದ ರಾಗಿ ಬೀಸುವ ಸ್ಪರ್ಧೆಗೆ 20 ಮಂದಿ ಭಾಗವಹಿಸಿದ್ದರೆ, ಮೂರು ಬಿಂದಿಗೆ ನೀರನ್ನು ಹೊತ್ತು ತರುವ ಸ್ಪರ್ಧೆಯಲ್ಲಿ 15 ಮಂದಿ ಸ್ಪರ್ಧಿಸಿದ್ದರು.
ರಾಗಿ ಬೀಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರಲ್ಲಿ ಕೆಲವರು ಜಾನಪದ ಹಾಡುಗಳನ್ನಾಡುತ್ತಾ ಬೀಸುತ್ತಿದ್ದರೆ ಮತ್ತೆ ಕೆಲವರು ಭರದಿಂದ ಬೀಸುತ್ತಿದ್ದರು. ಆದರೆ ನಿಯಮಿತ ಅವಧಿಯಲ್ಲಿ ನುಣ್ಣಗೆ ಬೀಸಿದ ರಾಗಿಹಿಟ್ಟಿನ ಲೆಖ್ಖವನ್ನು ಮಾತ್ರ ಪರಿಗಣನೆಗೆ ತೆಗದುಕೊಳ್ಳಲಾಗುತ್ತಿತ್ತು. ಅದರಂತೆ ಹೊಸಪಾಳ್ಯದ ಜಯಮ್ಮ ಅರ್ಧ ಗಂಟೆಯ ಅವಧಿಯಲ್ಲಿ 3.5 ಕೆ.ಜಿ. ರಾಗಿಹಿಟ್ಟನ್ನು ಬೀಸಿ ಪ್ರಥಮ ಬಹುಮಾನ ಪಡೆದರೆ. ಮಾಕುವಳ್ಳಿ ಸುನಂದ 2.75 ಕಿ.ಗ್ರಾಂ. ದ್ವಿತೀಯ ಹಾಗೂ ಶೆಟ್ಟಿಕೆರೆಯ ರಾಜಮ್ಮ 2.650 ಕಿ. ಗ್ರಾಂ ರಾಗಿಯನ್ನು ಬೀಸಿ ಮೂರನೆ ಬಹುಮಾನ ಪಡೆದರು. ಗೆದ್ದವರೆಲ್ಲರೂ 40 ವರ್ಷ ಮೇಲ್ಪಟ್ಟವರೇ ಆಗಿದ್ದರು.

      ಮೂರು ಬಿಂದಿಗೆಯಲ್ಲಿ ನೀರು ಹೊರುವ ಸ್ಪರ್ಧೆಯಲ್ಲಿ ತುಂಬಿದ ಬಿಂದಿಗೆಗಳನ್ನು ಹೊತ್ತು 100 ಮೀಟರ್ ದೂರವನ್ನು ಬೇಗನೆ ಕ್ರಮಿಸಿದ ಶೋಭ ಶೆಟ್ಟಿಕೆರೆ ಪ್ರಥಮ, ಸರೋಜಮ್ಮ ಸೋಮಲಾಪುರ ದ್ವಿತೀಯ ಹಾಗೂ ಜಯಮ್ಮ ಶೆಟ್ಟಿಕೆರೆ ಮೂರನೆ ಬಹುಮಾನ ಪಡೆದರು.

 

(Visited 167 times, 1 visits today)