ತುಮಕೂರು:
ಚುನಾವಣೆಯಲ್ಲಿ ಮತ ಚಲಾಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು 18 ವರ್ಷ ತುಂಬಿದ ಪತ್ರಿಯೊಬ್ಬ ಯುವಕ/ಯುವತಿಯರು ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ತಪ್ಪದೇ ಮತಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಅವರು ತಿಳಿಸಿದರು.
ಮತದಾನ, ಮತಕ್ಷೇತ್ರ, ಮತಪಟ್ಟಿ ಮತ್ತಿತರ ಮಾಹಿತಿಯನ್ನು ಪಡೆಯಲು ಚುನಾವಣಾ ಆಯೋಗವು “ಚುನಾವಣೆ” ಎಂಬ ನೂತನ ಮೊಬೈಲ್ ಆ್ಯಪ್ ಸೃಜಿಸಲಾಗಿದೆ. ಗೂಗಲ್ ಪ್ಲೇಸ್ಟೋರ್ ಮೂಲಕ ಈ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಚುನಾವಣಾ ಮಾಹಿತಿಯನ್ನು ಪಡೆಯಬಹುದಾಗಿದೆ ಅಥವಾ ಉಚಿತ ಸಹಾಯವಾಣಿ 1950 ಕರೆ ಮಾಡುವ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದರ ಜೊತೆಗೆ ಸಾರ್ವಜನಿಕ ದೂರುಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಆಮಿಷಗಳನ್ನೊಡ್ಡುವ, ನೀತಿ ಸಂಹಿತೆ ಉಲ್ಲಂಘನೆ ಮಾಡುವ ಬಗ್ಗೆ ದೂರುಗಳಿದ್ದಲ್ಲಿ “ಸಿವಿಜಿಲ್” ಎಂಬ ನೂತನ ಮೊಬೈಲ್ ಆ್ಯಪ್ ಮೂಲಕ ಸಲ್ಲಿಸಬಹುದು ಎಂದರು.
ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಎಪಿಕ್ ಕಾರ್ಡ್ ಇಲ್ಲದಿದ್ದರೂ ಆಧಾರ್ ಕಾರ್ಡ್, ಪಾನ್‍ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಮತ್ತಿತರ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ಮತ ಚಲಾಯಿಸಲು ಅವಕಾಶವಿರುತ್ತದೆ. ಪ್ರತಿಯೊಬ್ಬರು ಈ ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದಕ್ಕೂ ಮುನ್ನ ಬೆಳಿಗ್ಗೆ ವಿವಿ ಆವರಣದಲ್ಲಿ ಶಿಕ್ಷಕ ರಿಜ್ವಾನ್ ಪಾಷಾ ವಾಯು ವಿಹಾರಿಗಳಿಗೆ ಇವಿಎಂ ಹಾಗೂ ವಿವಿ ಪ್ಯಾಟ್‍ಗಳ ಕಾರ್ಯವೈಖರಿಯ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಸ್ವೀಪ್ ಸಮಿತಿಯ ಸದಸ್ಯ ಮಹಂಕಾಳಪ್ಪ, ರಾಜಶೇಖರ್, ಶ್ರೀನಿವಾಸ್, ಜ್ಯೋತಿಗಣೇಶ್, ಮತ್ತಿತರರು ಭಾಗವಹಿಸಿದ್ದರು.