ತುಮಕೂರು :

      ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳು ಹೊರತರುವ ಪಕ್ಷದ ಪ್ರಣಾಳಿಕೆಯಲ್ಲಿ ಸಭೆ/ ಸಮಾರಂಭ/ ರ್ಯಾಲಿ/ ವೇದಿಕೆ ಕಾರ್ಯಕ್ರಮಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಂತಹ ಹಾಗೂ ಕೋಮು ಪ್ರಚೋದನಾಕಾರಿ ಭಾಷಣ/ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ತಿಳಿಸಿದರು.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇತ್ತೀಚೆಗೆ ಜರುಗಿದ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ಒಂದು ಕೋಮು/ಜಾತಿ/ಸಮಾಜದ ಘನತೆಗೆ ವೈಯಕ್ತಿಕವಾಗಿ ಘಾಸಿಯಾಗುವಂತಹ ಹೇಳಿಕೆಗಳನ್ನು ನೀಡಬಾರದು ಹಾಗೂ ಸಾಮಾಜಿಕ ಜಾಲತಾಣಾಗಳಾದ ಟ್ವೀಟರ್, ಫೇಸ್‍ಬುಕ್ ಮತ್ತು ವಾಟ್ಸ್‍ಆಪ್‍ಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡಬಾರದೆಂದು ತಿಳಿಸಿದರು.

  ತಹಶೀಲ್ದಾರ್ ವಶಕ್ಕೆ ಸರ್ಕಾರಿ ಅತಿಥಿ ಗೃಹ:-

      ಸರ್ಕಾರಿ/ವಸತಿ ಗೃಹಗಳನ್ನು ಆಯಾ ತಾಲ್ಲೂಕು ತಹಶೀಲ್ದಾರರ ವಶಕ್ಕೆ ಪಡೆಯಲಾಗಿದ್ದು, ಸರ್ಕಾರಿ ಅತಿಥಿ ಗೃಹಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಅವಕಾಶವಿರುವುದಿಲ್ಲ ಎಂದರು.

ಸರ್ಕಾರಿ ಕಛೇರಿ ಆವರಣದಲ್ಲಿ ಚುನಾವಣಾ ಪ್ರಚಾರ ನಿಷೇಧ:-

      ರಾಜ್ಯ ಸರ್ಕಾರಿ ಕಛೇರಿ ಹಾಗೂ ಸರ್ಕಾರಿ ಆವರಣದಲ್ಲಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಗೋಡೆ ಬರಹ, ಭಿತ್ತಿಪತ್ರ, ಕಟೌಟ್, ಹೋರ್ಡಿಂಗ್, ಬ್ಯಾನರ್‍ಗಳ ಅಳವಡಿಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಯಾವುದೇ ಪಕ್ಷಗಳಿಗೆ ಸೇರದ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಬರಹ, ಭಿತ್ತಿಪತ್ರ, ಕಟೌಟ್, ಹೋರ್ಡಿಂಗ್, ಬ್ಯಾನರ್‍ಗಳನ್ನು ಅಳವಡಿಸಲು ಶುಲ್ಕ ಪಾವತಿ ಮಾಡುವ ಮೂಲಕ ಸ್ಥಳೀಯ ಕಾನೂನಿನ ಅವಕಾಶವನ್ನು ಪರಿಶೀಲಿಸಿ ಮತ್ತು ನ್ಯಾಯಾಲಯದ ಆದೇಶಕ್ಕೊಳಪಟ್ಟು ಅನುಮತಿ ನೀಡಲಾಗುವುದೆಂದು ತಿಳಿಸಿದರು.

ಖಾಸಗಿ ವ್ಯಕ್ತಿಗಳಿಗೆ ಬೆದರಿಕೆ ಹಾಕುವಂತಿಲ್ಲ :-

      ಖಾಸಗಿ ವ್ಯಕ್ತಿಗೆ ಸೇರಿದಂತಹ ಸ್ಥಳದಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಅಳವಡಿಸಬೇಕಿದ್ದಲ್ಲಿ ಪಕ್ಷಗಳು ಸದರಿ ವ್ಯಕ್ತಿಯ ಅನುಮತಿಯನ್ನು ಪಡೆದುಕೊಳ್ಳುವುದು ಅಗತ್ಯ. ಪ್ರಚಾರ ಸಾಮಗ್ರಿ ಅಳವಡಿಸಲು ಖಾಸಗಿ ವ್ಯಕ್ತಿಗೆ ಯಾವುದೇ ಬೆದರಿಕೆ ಹಾಕಬಾರದು ಮತ್ತು ಅಳವಡಿಸಿದಂತಹ ಜಾಹೀರಾತಿನಿಂದಾಗಿ ಇತರರಿಗೆ ಯಾವುದೇ ಅನಾನುಕೂಲತೆ ಉಂಟಾಗಬಾರದು. ಖಾಸಗಿ ವ್ಯಕ್ತಿಯಿಂದ ಪಡೆದಂತಹ ಅನುಮತಿ ಪತ್ರದ ಜೆರಾಕ್ಸ್ ಪ್ರತಿಯನ್ನು ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗೆ ಜಾಹೀರಾತು ಅಳವಡಿಸಿದ ಮೂರು ದಿನದೊಳಗಾಗಿ ಸಲ್ಲಿಸಬೇಕು.

      ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಖಾಸಗಿ ಸ್ಥಳದಲ್ಲಿ ಜಾಹೀರಾತು ಅಳವಡಿಕೆಗೆ ಸಂಬಂಧಿಸಿದಂತೆ ತಗಲುವ ವೆಚ್ಚ, ಅನುಮತಿ ನೀಡಿದಂತಹ ಖಾಸಗಿ ಮಾಲೀಕರ ಹೆಸರು, ವಿಳಾಸ, ಜಾಹೀರಾತಿನಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುವಂತಹ ಯಾವುದೇ ಅಂಶ ಇರುವುದಿಲ್ಲವೆಂಬ ದೃಢೀಕರಣ ಪತ್ರ ಹಾಗೂ ಮತ್ತಿತರ ಮಾಹಿತಿಯನ್ನು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಸಹಾಯಕ ಚುನಾವಣಾಧಿಕಾರಿಗಳಿಗೆ ನಿಗಧಿತ ನಮೂನೆಯಲ್ಲಿ ನೀಡಬೇಕೆಂದು ಹೇಳಿದರು.

ಎಂ.ಸಿ.ಎಂ.ಸಿ.ಕಮಿಟಿ ಪ್ರಮಾಣೀಕರಣ ಕಡ್ಡಾಯ :-

      ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಚುನಾವಣಾ ಪ್ರಚಾರ ಜಾಹೀರಾತುಗಳನ್ನು ಜಿಲ್ಲಾ ಎಂ.ಸಿ.ಎಂ.ಸಿ., ಕಮಿಟಿಯಲ್ಲಿ ಪ್ರಮಾಣೀಕರಿಸಿದ ನಂತರವೇ ಪ್ರಕಟಣೆಗೆ ಅನುಮತಿ ನೀಡಲಾಗುವುದು. ಯಾವುದೇ ಅನುಮತಿ ಇಲ್ಲದೆ ಜಾಹೀರಾತು ಅಳವಡಿಕೆಯಿಂದ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದಲ್ಲಿ ಅಂತಹ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಮತ್ತು ಅಭ್ಯರ್ಥಿಗಳಿಗೆ ಆಯಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ನೋಟೀಸ್ ನೀಡಿ, ವಿರೂಪಗೊಳಿಸಿದ ಸ್ಥಳಕ್ಕೆ ತಗಲುವ ವೆಚ್ಚಕ್ಕೆ ದಂಡವನ್ನು ವಿಧಿಸಲಿದ್ದಾರೆ ಎಂದು ತಿಳಿಸಿದರು.

 ಅಕ್ರಮ ಮದ್ಯ ಸಂಗ್ರಹಣೆಗೆ ಕಡಿವಾಣ:-

      ಚುನಾವಣಾ ಆಯೋಗಕ್ಕೆ ಜಿಲ್ಲೆಯಲ್ಲಿ ಲಿಕ್ಕರ್ ಮಾರಾಟ, ಶೇಖರಣೆಯಂತಹ ಪೂರ್ಣ ಮಾಹಿತಿ ಇದ್ದು, ಎಲ್ಲಿಯೂ ಸಹ ಅಕ್ರಮ ಮದ್ಯ ಸಂಗ್ರಹಣೆ ಮತ್ತು ಮಾರಾಟಕ್ಕೆ ಅವಕಾಶ ನೀಡದೆ ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ಯಶಸ್ವಿಯಾಗಿ ನಡೆಸಲು ಸಹಕಾರ ನೀಡಬೇಕೆಂದು ರಾಜಕೀಯ ಪಕ್ಷಗಳ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.

ಕುಡಿಯುವ ನೀರು, ಬರ ಕಾಮಗಾರಿಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ :

      ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಬರ, ಕುಡಿಯುವ ನೀರು ಮತ್ತು ಉದ್ಯೋಗ ಖಾತ್ರಿಯಂತಹ ಕಾಮಗಾರಿಗಳು ಮುಂದುವರೆಯುವುದಕ್ಕೆ ಮಾದರಿ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಅದೇ ರೀತಿ ಯಾವುದೇ ಯೋಜನೆಯಡಿ ಈಗಾಗಲೇ ಪ್ರಾರಂಭಿಸಿರುವ ಕಾಮಗಾರಿಗಳನ್ನು ಮುಂದುವರೆಸಬಹುದು ಎಂದರಲ್ಲದೆ, ನೀತಿ ಸಂಹಿತೆ ಜಾರಿ ಅವಧಿಯಲ್ಲಿ ಹೊಸ ಅಭಿವೃದ್ಧಿ ಕಾರ್ಯ/ ಶಂಕು ಸ್ಥಾಪನೆ ಕಾರ್ಯ/ ಉದ್ಘಾಟನಾ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ ಎಂದು ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳಿಗೆ ತಿಳುವಳಿಕೆ ನೀಡಲಾಗಿದೆ ಎಂದು ತಿಳಿಸಿದರು.

      ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಾಮಾನ್ಯ(ಜನರಲ್) ವೀಕ್ಷಕರು, ವೆಚ್ಚ ವೀಕ್ಷಕರು, ಪೊಲೀಸ್ ವೀಕ್ಷಕರುಗಳನ್ನು ನೇಮಿಸಲಿದ್ದು, ಸದರಿ ವೀಕ್ಷಕರು ಚುನಾವಣೆಯ ಪ್ರತಿ ಹಂತದ ಚಟುವಟಿಕೆಗಳು ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ತೀವ್ರ ನಿಗಾ ಇಡಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮವಹಿಸಬೇಕೆಂದರು.

ವಿಡಿಯೋ ಚಿತ್ರೀಕರಣ ತಂಡ ನೇಮಕ :

      ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪ್ರತಿಯೊಂದು ಹಂತಗಳನ್ನು ಚಿತ್ರೀಕರಿಸಲು ವಿಡಿಯೋಗ್ರಾಫರ್ ತಂಡಗಳನ್ನು ನೇಮಕ ಮಾಡಲಾಗುವುದು. ನಾಮಪತ್ರ ಸಲ್ಲಿಸುವಿಕೆ, ಪರಿಶೀಲನೆ, ಚಿಹ್ನೆಗಳ ಹಂಚಿಕೆ, ಎಫ್‍ಎಲ್‍ಸಿ ಪರಿಶೀಲನೆ, ಮತ್ತು ಭದ್ರತಾ ಕೊಠಡಿಗಳಲ್ಲಿ ಇವಿಎಂಗಳ ಶೇಖರಣೆ ಪ್ರಮುಖ ಸಾರ್ವಜನಿಕ ಸಭೆ/ ಮೆರವಣಿಗೆ/ ಚುನಾವಣಾ ಪ್ರಚಾರದ ಘಟನಾವಳಿಗಳು, ಮತದಾನದ ದಿನದ ಘಟನಾವಳಿಗಳು/ ಎಣಿಕೆ ಕಾರ್ಯದ ಘಟನಾವಳಿಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗುವುದೆಂದು ತಿಳಿಸಿದರು.

      ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸ್ ಸಿಬ್ಬಂದಿಯೊಂದಿಗೆ ಸಿಎಪಿಎಫ್ ಮತ್ತು ಎಸ್‍ಎಪಿ ತುಕಡಿಗಳನ್ನು ನಿಯೋಜಿಸಲಾಗುವುದೆಂದು ತಿಳಿಸಿದ ಅವರು, ಸಭೆಯಲ್ಲಿ ಹಾಜರಿದ್ದ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಂದ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಪಡೆದರು.

  ಮತಯಂತ್ರಗಳು, ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ :-

      ಸಭೆಯಲ್ಲಿ ಹಾಜರಿದ್ದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರುಗಳಿಗೆ ಮಾಸ್ಟರ್ ಟ್ರೈನರ್ ರಿಜ್ವಾನ್ ಪಾಷಾ ಅವರು ಮತಯಂತ್ರ, ವಿವಿಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರವಾಗಿ ತಿಳುವಳಿಕೆ ನೀಡಿದರು.

      ಸಭೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿ ಗಿರೀಶ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)ದ ಕಾರ್ಯದರ್ಶಿ ಬಿ.ಉಮೇಶ, ಭಾರತೀಯ ಜನತಾ ಪಕ್ಷದ ಗುರುಪ್ರಸಾದ್ ಹಾಗೂ ಕೊಪ್ಪ ನಾಗರಾಜ್, ರಾಷ್ಟ್ರೀಯ ಕಾಂಗ್ರೇಸ್ ಸಮಿತಿಯ ರಾಜೇಶ್ ದೊಡ್ಡಮನೆ, ದರ್ಶನ್ ಹೆಚ್.ಡಿ., ಜಿಲ್ಲಾ ಜನತಾದಳ (ಜಾತ್ಯಾತೀತ)ದ ಜಯಣ್ಣ, ಮಂಜುನಾಥ್, ಮದನ್ ಹಾಗೂ ಬಹುಜನ ಸಮಾಜ ಪಕ್ಷದ ಬಿ.ಎ.ರಂಗಸ್ವಾಮಯ್ಯ ಮತ್ತಿತರರು ಹಾಜರಿದ್ದರು.

(Visited 19 times, 1 visits today)