ತುರುವೇಕೆರೆ:
ಜ್ಞಾನದ ಸಂಪತ್ತಿಗಿಂತ ಮಿಗಿಲಾದುದು ಬೇರಾವುದೇ ಸಂಪತ್ತಿಲ್ಲ ಎಂದು ತುರುವೇಕೆರೆ ವಿರಕ್ತ ಮಠದ ಶ್ರೀ ಶ್ರೀ ಕರಿವೃಷಭ ದೇಶೀಕೇಂದ್ರ ಮಹಾ ಸ್ವಾಮಿಗಳು ಅಭಿಪ್ರಾಯಪಟ್ಟರು.
ಮೈಸೂರಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಕ್ರಾಫರ್ಡ್ ಭವನದಲ್ಲಿ ಆಯೋಜಿಸಿದ್ದ ತೊಂಬತ್ತೊಂಬತ್ತನೇ ವಾರ್ಷಿಕ ಘಟಿಕೋತ್ಸವ ಪದವಿ ಪ್ರಧಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸ್ವೀಕರಿಸಿ ಮಾತನಾಡಿದ ಅವರು ಇಂದು ನನ್ನನ್ನು ಆಯ್ಕೆ ಮಾಡಿ ಗೌರವ ಡಾಕ್ಟರೇಟ್ ಕೊಟ್ಟಿರುವುದು ನನಗೆ ಹಾಗು ನನ್ನ ಸಮಾಜದ ಸಧ್ಬಕ್ತರಿಗೆ ಗೌರವ ತಂದುಕೊಟ್ಟಿದೆ. ಮೈಸೂರು ವಿಶ್ವವಿಧ್ಯಾನಿಲಯ ಇಡೀ ದೇಶದಲ್ಲಿಯೇ ಆರನೆಯ ವಿಶ್ವವಿಧ್ಯಾಲಯವಾಗಿದ್ದು ಕರ್ನಾಟಕ ರಾಜ್ಯದ ಮೊದಲನೆಯ ವಿಶ್ವವಿದ್ಯಾಲಯವಾಗಿದೆ. ಕಳೆದ 99 ವರ್ಷಗಳಲ್ಲಿ ವಿಶ್ವವಿದ್ಯಾಲಯ ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಸೇವೆ ಸಲ್ಲಿಸಿದೆ. ಆ ನಿಟ್ಟಿನಲ್ಲಿ ಇಂದು ಶ್ರೀ ಮಠಕ್ಕೆ ಗೌರವ ನೀಡಿ ನಮ್ಮನ್ನು ಸತ್ಕರಿಸಿರುವುದು ನಮ್ಮ ಬದುಕಿನ ಯಾತ್ರೆಯಲ್ಲಿ ಬಹು ಮಹತ್ವದ ಯಾತ್ರೆಯಾಗಿದೆ. ಮೂಲ ರಚನೆ, ಗ್ರಂಥಾಲಯ ಸಂಪನ್ಮೂಲ, ಭೋಧನೆ-ಕಲಿಕೆ, ಸಂಶೋಧನೆ ಮತ್ತು ನಾವೀನ್ಯತೆ ಈ ಎಲ್ಲಾ ಕ್ಷೇತ್ರಗಳಲ್ಲೂ ಉನ್ನತ ಮಟ್ಟವನ್ನು ಕಾಯ್ದುಕೊಂಡಿರುವ ಈ ವಿಶ್ವವಿದ್ಯಾನಿಲಯ ಮುಂದೆ ನೂರಾರು ವರ್ಷ ಅತ್ಯುತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ. ಅನಿಲ್ ಡಿ. ಸಹಸ್ರಬುಧೆ ಘಟಿಕೋತ್ಸವ ಭಾಷಣ ಮಾಡಿ ಶ್ರೀಗಳು ಸಾಮಾಜಿಕ ಹಾಗು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಾಗಲೇ ಅನೇಕ ಪದವಿಗಳನ್ನು ಅವರು ಪಡೆದಿದ್ದು ಅಂತಹ ಮಹಾನುಭಾವರಿಗೆ ನಾವಿಂದು ಪದವಿ ಪ್ರಧಾನ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.