ತುಮಕೂರು:
ಜಿಲ್ಲೆಯ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ 36196 ವಿದ್ಯಾರ್ಥಿಗಳು ಮಾರ್ಚ್ 21ರಿಂದ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಡಿಡಿಪಿಐ ಎಂ.ಆರ್.ಕಾಮಾಕ್ಷಿ ತಿಳಿಸಿದ್ದಾರೆ.
141 ಪರೀಕ್ಷಾ ಕೇಂದ್ರ :-
ಜಿಲ್ಲೆಯ 141(ತುಮಕೂರು-83, ಮಧುಗಿರಿ-58)ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ತುಮಕೂರಿನ 23751(ಬಾಲಕರು-13156, ಬಾಲಕಿಯರು-10595) ಹಾಗೂ ಮಧುಗಿರಿಯ 12445(ಬಾಲಕರು-6572, ಬಾಲಕಿಯರು-5873) ಸೇರಿ ಒಟ್ಟು 36,196 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಜಿಲ್ಲೆಯಲ್ಲಿ 141 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಪೈಕಿ 62 ಕ್ಲಸ್ಟರ್ ಸಹಿತ, 76 ಕ್ಲಸ್ಟರ್ ರಹಿತ ಹಾಗೂ 3 ಖಾಸಗಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ತುಮಕೂರು ನಗರದ ವಿದ್ಯಾನಿಕೇತನ ಶಾಲೆ, ಎಸ್.ಐ.ಟಿ.ಯ ವಾಸವಿ ಪ್ರೌಢಶಾಲೆ ಹಾಗೂ ಮಧುಗಿರಿಯ ಜ್ಯೂಪಿಟರ್ ಪಬ್ಲಿಕ್ ಶಾಲೆ ಸೇರಿ 3 ಖಾಸಗಿ ಕೇಂದ್ರಗಳಲ್ಲಿ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಅಕ್ರಮಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಎಲ್ಲಾ 141 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿಯನ್ನು ಅಳವಡಿಸಲಾಗಿದೆ. ಅಲ್ಲದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುವಾಗುವಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿ ಪರೀಕ್ಷಾ ಕೇಂದ್ರಗಳಿಗೂ ತಲಾ ಒಬ್ಬ ಆರೋಗ್ಯ ಸಹಾಯಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಹಂತಗಳಲ್ಲಿ ಜಾಗೃತ ದಳಗಳನ್ನು ರಚಿಸಲಾಗಿದೆ. ಅಲ್ಲದೆ ಪ್ರತಿ ಪರೀಕ್ಷಾ ಕೇಂದ್ರಗಳಿಗೂ ಸ್ಥಾನಿಕ ಜಾಗೃತ ದಳಗಳನ್ನು ನಿಯೋಜಿಸಲಾಗಿದೆ.
ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಾಗದಂತೆ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಹಾಗೂ ನಿರಂತರ ವಿದ್ಯುತ್ ಕಲ್ಪಿಸಲು ಬೆಸ್ಕಾಂ ಸಂಸ್ಥೆಗೆ ಮನವಿ ಮಾಡಲಾಗಿದೆ. ವಿಕಲಚೇತನ ಮಕ್ಕಳಿಗೆ ನೆಲಹಂತದಲ್ಲಿಯೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಗಳು ಯಾವುದೇ ರೀತಿಯ ಭಯ-ಭೀತಿಗೊಳಗಾಗದೆ ಪರೀಕ್ಷೆಯನ್ನು ಶಾಂತ ರೀತಿಯಿಂದ ಬರೆಯಬೇಕು. ಪರೀಕ್ಷಾ ಅವಧಿಯಲ್ಲದೆ ಪ್ರಶ್ನೆ ಪತ್ರಿಕೆಯನ್ನು ಓದಲು 15 ನಿಮಿಷ ಕಾಲಾವಕಾಶವನ್ನು ನಿಗಧಿಪಡಿಸಲಾಗಿದೆ. ಪ್ರಶ್ನೆ ಪತ್ರಿಕೆಯನ್ನು ಓದಿ ಅಂಕಗಳನ್ನು ಆಧರಿಸಿ ಉತ್ತರವನ್ನು ಬರೆಯಬೇಕು. ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಯಾರೊಬ್ಬರಿಗೂ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಸ್ಮಾರ್ಟ್ ವಾಚ್/ ಎಲೆಕ್ಟ್ರಾನಿಕ್ ವಾಚ್‍ಗಳನ್ನು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತರುವಂತಿಲ್ಲ.
ಏಪ್ರಿಲ್ 10 ರಿಂದ ಮೌಲ್ಯಮಾಪನ ಕಾರ್ಯ :-
ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಮುಗಿದ ನಂತರ ನಗರದ 6 ಕೇಂದ್ರಗಳಲ್ಲಿ ಏಪ್ರಿಲ್ 10 ರಿಂದ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜಿಸಲಾಗಿರುವ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಬೇಕು. ಸುಮಾರು 2500 ಶಿಕ್ಷಕರನ್ನು ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮೌಲ್ಯ ಮಾಪನ ಕೇಂದ್ರದಲ್ಲಿ ಈ ಬಾರಿ “ಆನ್‍ಲೈನ್ ಪೋರ್ಟಿಂಗ್” ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ 15 ಲ್ಯಾಪ್‍ಟಾಪ್‍ಗಳನ್ನು ಅಳವಡಿಸಲಾಗುವುದು. ಮೌಲ್ಯ ಮಾಪನದ ಪ್ರತಿ ದಿನದ ಮಾಹಿತಿಯನ್ನು ಆನ್‍ಲೈನ್ ಪೋರ್ಟಿಂಗ್ ಮೂಲಕ ಮಂಡಳಿಗೆ ನೀಡಲಾಗುವುದು.
ಪರೀಕ್ಷಾ ವೇಳಾ ಪಟ್ಟಿ:-
ಜಿಲ್ಲೆಯಲ್ಲಿ ಮಾರ್ಚ್ 21ರಂದು ಪ್ರಥಮ ಭಾಷೆ(ಕನ್ನಡ, ಉರ್ದು, ಇಂಗ್ಲೀಷ್, ಸಂಸ್ಕೃತ; ಮಾ.23ರಂದು ಅರ್ಥಶಾಸ್ತ್ರ; ಮಾ.25ರಂದು ಗಣಿತ ಹಾಗೂ ಸಮಾಜಶಾಸ್ತ್ರ; ಮಾ.27ರಂದು ದ್ವಿತೀಯ ಭಾಷೆ (ಕನ್ನಡ, ಇಂಗ್ಲೀಷ್); ಮಾ. 29ರಂದು ಸಮಾಜ ವಿಜ್ಞಾನ; ಏಪ್ರಿಲ್ 2ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ ಹಿಂದೂಸ್ಥಾನಿ ಸಂಗೀತ; ಏಪ್ರಿಲ್ 4ರಂದು ತೃತೀಯ ಭಾಷೆ(ಹಿಂದಿ, ಕನ್ನಡ, ಸಂಸ್ಕೃತ)ಪರೀಕ್ಷೆ ಹಾಗೂ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್ ವಿಷಯದಲ್ಲಿ ಎನ್‍ಎಸ್‍ಕ್ಯೂಎಫ್(ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಮ್ ವರ್ಕ್) ಪರೀಕ್ಷೆಗಳು ನಡೆಯಲಿವೆ. ತೃತೀಯ ಭಾಷೆ ಬದಲಿಗೆ ಎನ್‍ಎಸ್‍ಕ್ಯೂಎಫ್ ಪರೀಕ್ಷೆ ಬರೆಯುವವರಿಗಾಗಿ ತುಮಕೂರು ನಗರದ ಎಂಪ್ರೆಸ್ ಹಾಗೂ ಸರ್ಕಾರಿ ಜ್ಯೂನಿಯರ್ ಕಾಲೇಜು, ತಿಪಟೂರು ತಾಲ್ಲೂಕಿನ ನೊಣವಿನಕೆರೆ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.