ತುಮಕೂರು:
ತುಮಕೂರು ಲೋಕಸಭಾ ಕ್ಷೇತ್ರ ರಾಷ್ಟ್ರ ರಾಜಕಾರಣದ ಕೆಂಗಣ್ಣಿಗೆ ಗುರಿಯಾಗುವಂತೆ ಕಂಡುಬರುತ್ತಿದೆ. ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ತುಮಕೂರು ಸ್ಪರ್ಧಿಸುವ ನಿರ್ಧಾರ ಅಂತಿಮಗೊಂಡಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಹೆಚ್.ಡಿ.ದೇವೇಗೌಡರು ಜೆಡಿಎಸ್ ನ ಪಾಬಲ್ಯ ಅತ್ಯಧಿಕವಾಗಿರುವ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದರೆ, ಅನಾಯಾಸವಾಗಿ ಜಯಗಳಿಸಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ.
ಕಳೆದ ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ನ ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಟಾಂಗ್ ನೀಡಿ ಜೆಡಿಎಸ್ ಪಕ್ಷವು ತನ್ನ ವಶಕ್ಕೆ ತುಮಕೂರು ಕ್ಷೇತ್ರವನ್ನ ಪಡೆದುಕೊಂಡಿರುವುದರಿಂದ ಸಂಸದ ಮುದ್ದಹನುಮೇಗೌಡರ ಆಕ್ರೋಶಕ್ಕೂ ಹೊರತಾಗಿಲ್ಲ. ಬೇರೆ ಕ್ಷೇತ್ರಗಳ ರೀತಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನ ಹೊಂದಾಣಿಕೆ ಎರಡೂ ಪಕ್ಷಗಳ ಸ್ಪಷ್ಟ ನಿಲುವು ಒಮ್ಮತವಾಗಿ ಕಂಡುಬರುತ್ತಿಲ್ಲ. ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನರಾಗ ಹೆಚ್ಚಾಗುತ್ತಿದೆ. ಹೇಮಾವತಿ ನೀರನ್ನು ತುಮಕೂರಿಗೆ ಸಮರ್ಪಕವಾಗಿ ಹರಿಸಿಲ್ಲವೆಂಬ ಕೂಗು ಉಲ್ಬಣಗೊಂಡಿದೆ.
ಬಿಜೆಪಿ ಪಕ್ಷದಲ್ಲಿ ಮಾಜಿ ಶಾಸಕ ಬಿ.ಸುರೇಶ ಗೌಡ ಮತ್ತು ಜಿ.ಎಸ್.ಬಸವರಾಜು ರವರ ಹೆಸರು ದೆಹಲಿ ವಲಯ ತಲುಪಿದ್ದು, ಅಲ್ಲಿ ಬಹುತೇಕವಾಗಿ ಸುರೇಶ್ ಗೌಡರ ಹೆಸರು ಅಂತಿಮಗೊಳ್ಳುವ ಸಾಧ್ಯತೆಗಳಿವೆ. ಜೆಡಿಎಸ್ ನಿಂದ ಹೆಚ್.ಡಿ.ದೇವೇಗೌಡರು ಸ್ಪರ್ಧೆಗಿಳಿದರೆ, ಬಿಜೆಪಿಯಿಂದ ಮಾಜಿ ಶಾಸಕ ಸುರೇಶ್ ಗೌಡ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿರುವುದರಿಂದ ತುಮಕೂರು ಕ್ಷೇತ್ರ ವಿಶೇಷ ತಿರುವು ಪಡೆಯಲಿದ್ದು, ಗೌಡರುಗಳ ಗದ್ದುಗೆ ಗುದ್ದಾಟ ಮತದಾರರಿಗೆ ಹೊಸ ಹುರುಪು ನೀಡಲಿದೆ.