ತುಮಕೂರು:
ರಂಗ ಕಲೆ ನಶಿಸುವ ಹಾದಿಯತ್ತ ಮುಖ ಮಾಡಿದ್ದು, ಪ್ರತಿಯೊಬ್ಬರು ರಂಗ ಕಲೆಯನ್ನು ಉಳಿಸಿ, ಬೆಳಸಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಕೆ.ಎನ್.ಗಂಗಾನಾಯಕ್ ಹೇಳಿದರು
ನಗರದ ಸಾಹಿತ್ಯ ಪರಿಷತ್ ಭವನದಲ್ಲಿ ನಾಟಕಮನೆ ತುಮಕೂರು ವತಿಯಿಂದ ಹೇಮಾದ್ರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಗುರುಶ್ರೀ ಕಾಲೇಜ್ ಆಫ್ ಕಾಮರ್ಸ್ ಅಂಡ್ ಸೋಷಿಯಲ್ ವರ್ಕ್, ರಾಜ್ಯ ಯುವ ಬರಹಗಾರರ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯನ್ನು ನಗಾರಿ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಜನತೆ ಸಿನಿಮಾ ಗೀಳಿನಲ್ಲಿ ಸಿಲುಕಿ ಒದ್ದಾಡುತ್ತಿದ್ದು, ಇದರಿಂದ ಹೊರಬಂದು ಪಠ್ಯೇತರ ಚಟುವಟಿಕೆಗಳಾದ ನಾಟಕ, ರಂಗಕಲೆ, ಮತ್ತಿತರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಕಲೆಗೆ ಮೂಲ ಗ್ರೀಕ್ ದೇಶ, ಸಾಹಿತ್ಯ, ರಂಗಕಲೆ, ನಾಟಕ ಹೀಗೆ ಬೇರೆ ಬೇರೆ ಕಲೆಗಳೂ ಸಹ ಗ್ರೀಕ್‍ನಲ್ಲೇ ಮೊದಲು ಹುಟ್ಟಿದ್ದು, ಅಲ್ಲಿಂದಲೇ ಮೊದಲು ಪ್ರಾರಂಭವಾಗಿದ್ದು, ಆದ್ದರಿಂದ ಗ್ರೀಕ್ ದೇಶವನ್ನು ನಾವೆಂದೂ ಮರೆಯಲಾಗುವುದಿಲ್ಲ ಎಂದರು.
ಜನರ ಮನರಂಜನೆಗಾಗಿ ನಮ್ಮಲ್ಲಿ ಹಲವಾರು ಕಲಾಪ್ರಕಾರಗಳಿವೆ. ಒಂದಕ್ಕಿಂತ ಒಂದು ವಿಶೇಷವಾಗಿರುವ ಈ ಕಲೆಗಳು ಜನರಿಗೆ ಮನರಂಜನೆ ನೀಡುವ ಜೊತೆಗೆ ಅವರಲ್ಲಿರುವ ಸೃಜನಶೀಲತೆಯನ್ನು ಅರಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಇಂತಹ ಕಲೆಗಳಲ್ಲಿ ನಾಟಕ ಅಥವಾ ರಂಗಭೂಮಿಯೂ ಒಂದು ಎಂದರು.
ಒಂದು ನಾಟಕ ಅಥವಾ ರಂಗ ಕಲೆಯು ಉತ್ತಮವಾದ ಸಾಮಾಜಿಕ ಸಂದೇಶಗಳನ್ನು ನೀಡುವುದರ ಜೊತೆಗೆ ಜನರನ್ನು ಒಂದು ಅದೃಶ್ಯವಾದ ಲೋಕಕ್ಕೆ ಕರೆದೊಯ್ಯುತ್ತದೆ. ಇಲ್ಲಿ ಬರುವ ಒಂದೊಂದು ಪಾತ್ರಗಳನ್ನು ಜನರು ತಮ್ಮ ಬದುಕಿಗೆ ಹೋಲಿಸಿ ನೋಡುತ್ತಾರೆ. ಕೆಲವು ಪಾತ್ರಗಳನ್ನು ತಮ್ಮ ಬದುಕಿಗೆ ಅನ್ವಯಿಸಿಕೊಂಡು ಬಿಡುತ್ತಾರೆ. ಜನರ ಯೋಚನಾ ಶಕ್ತಿಯನ್ನು ಬದಲಿಸುವ ಸಾಮರ್ಥ್ಯ ನಾಟಕಗಳಿಗಿವೆ. ಆದ್ದರಿಂದ ಇದು ಕಲೆಯ ಒಂದು ಸಮರ್ಥ ಮಾಧ್ಯವಾಗಿದೆ. ನಮ್ಮ ಜಗತ್ತಿನಲ್ಲಿ ರಂಗಭೂಮಿ ಅಥವಾ ನಾಟಕಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದು ಹಳೆಯ ಕಲಾ ಪ್ರಕಾರವಾಗಿದ್ದರೂ ಈಗಿನ ಆಧುನಿಕ ಪ್ರಪಂಚದಲ್ಲೂ ಒಂದು ಸಮರ್ಥವಾದ ಕಲಾ ಮಾಧ್ಯಮವಾಗಿ ಬೆಳೆದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ ರಂಗ ಕಲೆಗೆ ಯಾವುದೇ ರೀತಿಯ ಭೇದ ಭಾವವಿಲ್ಲ, ಕಲೆಯ ಮುಂದೆ ಯಾರು ಮೇಲು ಕೀಳು ಅಲ್ಲ. ರಂಗ ಕಲೆಯೂ ಸಂಕೀರ್ಣವಾದುದು ಎಂದರು.
ಹಿಂದಿನ ನಾಟಕ ಕಲೆಗಳು ಪ್ರೇಕ್ಷಕನ ಕಲ್ಪನೆಯ ಶಕ್ತಿಯನ್ನು ವೃದ್ಧಿಗೊಳಿಸುತ್ತಿತ್ತು, ಪ್ರತಿಯೊಂದು ದೃಶ್ಯದ ತನ್ನ ಕಲ್ಪನೆಯ ಮೂಲಕ ತನ್ನ ಮನಸಿನಲ್ಲಿ ಬಿಂಬಿಸಿಕೊಳ್ಳುತ್ತಿದ್ದ. ಆದರೆ ಇಂದಿನ ನಾಟಕಗಳಲ್ಲಿ ನೈಜತೆಯನ್ನು ತರುವ ನಿಟ್ಟಿನಲ್ಲಿ ಪ್ರೇಕ್ಷಕನ ಕಲ್ಪನ ಶಕ್ತಿಗೆ ಬಹುದೊಡ್ಡ ಹೊಡೆತ ಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ ಮಾತನಾಡಿ, ರಂಗಭೂಮಿಯಲ್ಲಿ ಅಭಿನಯಿಸುವ ನಾಟಕಗಳು ಜನರಿಗೆ ಮನರಂಜನೆ ನೀಡುವುದರ ಜತೆಗೆ ನೈತಿಕ ಮೌಲ್ಯಗಳನ್ನು ತುಂಬುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಸಂಘಟಕ ನಾಟಕಮನೆ ಮಹಾಲಿಂಗು ಮಾತನಾಡಿ, ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶದ ಜನರಲ್ಲಿ ರಂಗಕಲೆಯನ್ನು ಪುನಶ್ಚೇತನಗೊಳಿಸುವ ಕಾರ್ಯದಲ್ಲಿ ನಾಟಕಮನೆ ತೊಡಗಿದೆ. ಯುವಕರಿಗಾಗಿ ರಂಗಶಿಬಿರಗಳನ್ನು ಆಯೋಜಿಸಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ. ಯುವಕರಲ್ಲಿ ರಂಗಕಲೆಯ ಬಗ್ಗೆ ಆಸಕ್ತಿ ಬೆಳೆಸಲು ಪೂರಕವಾದ ಅಂಶಗಳನ್ನು ಪಠ್ಯಕ್ರಮದಲ್ಲೂ ಅಳವಡಿಸುವುದು ಹೆಚ್ಚು ಸೂಕ್ತ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ಸಮಾಜದ ಅನೇಕ ಸ್ಥಿತ್ಯಂತರಗಳಿಗೆ ರಂಗಭೂಮಿ ಕಾರಣವಾಗಿದೆ. ಉತ್ತಮ ಸಮಾಜ ನಿರ್ಮಾಣಗೊಳ್ಳಲು ಆಳುವ ವ್ಯವಸ್ಥೆಯ ಲೋಪದೋಷಗಳನ್ನು ಜನರಿಗೆ ತಲುಪಿಸುವಾಗ, ಸಮಾಜದ ದುಷ್ಟ ವ್ಯಕ್ತಿಗಳ ದಬ್ಬಾಳಿಕೆಯನ್ನು ಎಚ್ಚರಿಸುವಾಗ, ವೈಜ್ಞಾನಿಕ ಸತ್ಯಗಳನ್ನು ತಿಳಿಸುವಾಗ, ಮೌಢ್ಯತೆಗಳನ್ನು ಧಿಕ್ಕರಿಸುವಾಗ, ಶಿಕ್ಷಣ ಪದ್ಧತಿಯನ್ನು ಸಾರ್ವತ್ರೀಕರಿಸುವಾಗ, ಜಾತಿ ಪದ್ಧತಿ-ಧರ್ಮಾಂಧತೆಯ ದುಷ್ಪರಿಣಾಮ ತಿಳಿಸುವಾಗ, ಯುದ್ಧದ ಭೀಕರತೆಯ ಬಗ್ಗೆ ಎಚ್ಚರಿಸುವಾಗ ಪಾತ್ರಗಳ ಮೂಲಕ ಸಮಾಜವನ್ನು ಕಟ್ಟಿಕೊಡುವ ರಂಗಭೂಮಿಯ ಕೊಡುಗೆ ಅಪಾರವಾಗಿದೆ ಎಂದರು.
ನಾಟಕಗಳ ರಚನೆ, ಪ್ರದರ್ಶನಗಳಲ್ಲಿ ದೇಶದಲ್ಲಿಯೇ ರಾಜ್ಯವು ವಿಶಿಷ್ಟವಾದ ಸ್ಥಾನ ಹೊಂದಿದ್ದು, ಪರಂಪರೆಯನ್ನು ಉಳಿಸಿ, ಬೆಳೆಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದರಿಂದ ನಾಡಿನ ಕಲೆ, ಸಂಸ್ಕೃತಿಯೊಂದಿಗೆ ಕಲಾವಿದರಿಗೂ ಸಹ ನೈತಿಕ ಬೆಂಬಲ ದೊರಕಲು ಸಾಧ್ಯವಾಗಲಿದೆ ತಿಳಿಸಿದರು.
ಕಾರ್ಯಕ್ರಮದ ನಂತರ ಯುವಜನತೆ ಮತ್ತು ರಂಗಭೂಮಿ ಕುರಿತು ವಿಚಾರ ಸಂಕಿರಣ, ನಂತರ ರಂಗಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.