ಚಿಕ್ಕನಾಯಕನಹಳ್ಳಿ :

      ಶಾಸಕರಾಗಿರುವ ಮಾಧುಸ್ವಾಮಿರವರು ಮೂರು ತಿಂಗಳಲ್ಲಿ ತಾಲ್ಲೂಕಿಗೆ ನೀರು ಹರಿಸುತ್ತೇನೆ ಎಂದು ಹೇಳಿದ್ದರು ಒಂದು ವರ್ಷವಾಯಿತು ತಾಲ್ಲೂಕಿನಲ್ಲಿ ಇದುವರೆವಿಗೂ ಯಾವುದೇ ಅಭಿವೃದ್ದಿ ಮಾಡಿಲ್ಲ, ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ತಂದಂತಹ ಯೋಜನೆಗಳಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿರುವುದೇ ಅವರ ಅಭಿವೃದ್ದಿಯಾಗಿದೆ ಎಂದು ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಆರೋಪಿಸಿದರು.\

     ಪಟ್ಟಣದ ತಮ್ಮ ಗೃಹ ಕಛೇರಿಯಲ್ಲಿ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಅಭಿವೃದ್ದಿಯ ಕೆಲವು ಕಾಮಗಾರಿಗಳು ಶಂಕುಸ್ಥಾಪನೆ ಮಾಡಿದ್ದರೂ ಪುನಃ ಶಂಕಸ್ಥಾಪನೆ ಮಾಡಿ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಶಾಸಕರು ಪ್ರಯತ್ನಿಸುತ್ತಿದ್ದಾರೆ, ನನ್ನ ಅಭಿವೃದ್ದಿ ಕಾರ್ಯಗಳನ್ನು ತಮ್ಮ ಅಭಿವೃದ್ದಿ ಕಾರ್ಯಗಳೆಂದು ಬೆಂಬಲಿಸಲು ಶಾಸಕರು ಹೊರಟಿದ್ದಾರೆ ನಾನು ಒಂದು ವರ್ಷ ಏನು ಮಾತನಾಡಬಾರದು ಎಂದು ಸುಮ್ಮನಿದ್ದೆ ಎಂದ ಅವರು, ತಾಲ್ಲೂಕಿನ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ನಮ್ಮ ಕ್ಷೇತ್ರದ ಅಭಿವೃದ್ದಿ ಕಾಮಗಾರಿಗಳಿಗೆ ನನ್ನ ಬೆಂಬಲವಿದೆ, ಈಗಾಗಲೇ ತುಮಕೂರು ಜಿಲ್ಲೆಗೆ 5ಸಾವಿರ ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ.

ಹೇಮಾವತಿ ವಿರೋಧಿ ಮಾಧುಸ್ವಾಮಿ :

      ತಾಲ್ಲೂಕಿಗೆ ಹೇಮಾವತಿ ನಾಲೆಯಿಂದ ಇಷ್ಟು ಹೊತ್ತಿಗಾಗಲೇ ನೀರು ಹರಿಯಬೇಕಾಗಿತ್ತು, ಹಾಲಿ ಶಾಸಕರು ಹೇಮಾವತಿ ನಾಲೆಯಿಂದ ನೀರು ಹರಿಯುವುದಿಲ್ಲ, ಚೊಂಬಿನಲ್ಲಿ ನೀರು ತಂದು ಹಾಕಬೇಕು ಎಂದು ಹೇಳಿಕೆ ನೀಡಿದ್ದರು ಅಲ್ಲದೆ, ತಾಲ್ಲೂಕಿನ ಪಂಕಜನಹಳ್ಳಿಯಲ್ಲಿ ರೈತರು ಹೇಮಾವತಿ ನಾಲೆ ಕಾಮಗಾರಿಗೆ ಬಿಟ್ಟುಕೊಟ್ಟ ಭೂಮಿಗೆ ಪರಿಹಾರ ನೀಡಲು ಸಭೆ ಕರೆದಾಗ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮುಖಾಂತರ ಕರೆ ಮಾಡಿ ರೈತರಿಗೆ ಚೆಕ್ ವಿತರಣೆ ಮಾಡುವುದನ್ನು ತಡೆಹಿಡಿದು ಹೇಮಾವತಿ ಯೋಜನೆ ವಿರೋಧಿಯಾದರು ಎಂದು ಆಪಾದಿಸಿದರು.

      ಹೆಚ್.ಡಿ.ದೇವೇಗೌಡರವರು ತುಮಕೂರು ಜಿಲ್ಲೆಗೆ ನೀರು ಹರಿಸಲು ಅಡ್ಡಿ ಪಡಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ, ಇದರ ಬಗ್ಗೆ ಹೆಚ್.ಡಿ.ದೇವೇಗೌಡರು ನನ್ನ ಪಾತ್ರ ಏನು ಇಲ್ಲ ಎಂದಿದ್ದರು ಆದರೆ ಕೆಲವು ನಾಯಕರು ಈ ಬಗ್ಗೆ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

      ಏಪ್ರಿಲ್ 1ರಂದು ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ಪಕ್ಷದ ಜಂಟಿ ಸಭೆಯನ್ನು ಶಾವಿಗೆಹಳ್ಳಿ ಬಳಿ ಇರುವ ಜಿ.ಎಂ.ಆರ್ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದು ಅಂದಿನ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್, ಸಚಿವ ಶ್ರೀನಿವಾಸ್, ಸತ್ಯನಾರಾಯಣ್, ಟಿ.ಬಿ.ಜಯಚಂದ್ರ, ವೀರಭದ್ರಯ್ಯ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಕಾಂಗ್ರೆಸ್‍ನ ಹಾಗೂ ಜೆಡಿಎಸ್‍ನ ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವಂತೆ ಮನವಿ ಮಾಡಿದರು.

      ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಸದಸ್ಯರಾದ ಆರ್.ರಾಮಚಂದ್ರಯ್ಯ, ಬುಕ್ಕಾಪಟ್ಟಣ ಪ್ರಕಾಶ್, ತಾ.ಪಂ.ಅಧ್ಯಕ್ಷೆ ಚೇತನಗಂಗಾಧರ್, ಸದಸ್ಯರಾದ ಹುಳಿಯಾರುಕುಮಾರ್, ಯತೀಶ್, ಪುರಸಭಾ ಸದಸ್ಯರಾದ ರೇಣುಕಾಗುರುಮೂರ್ತಿ, ಲಕ್ಷ್ಮೀಪಾಂಡುರಂಗಯ್ಯ, ರಾಜಶೇಖರ್, ಮಾಜಿ ಪುರಸಭಾಧ್ಯಕ್ಷೆ ರೇಣುಕಮ್ಮ, ಜೆಡಿಎಸ್ ಮುಖಂಡ ಸಿ.ಎಸ್.ನಟರಾಜು ಮತ್ತಿತರರು ಉಪಸ್ಥಿತರಿದ್ದರು.

(Visited 20 times, 1 visits today)