ತುಮಕೂರು:
ಜಿಲ್ಲೆಗೆ ದೇವೇಗೌಡರು ಹೇಮಾವತಿ ನೀರು ಕೊಡುತ್ತಿಲ್ಲ ಎಂಬ ವಿರೋಧಿಗಳ ಹೇಳಿಕೆಯಲ್ಲಿ ಸತ್ವವಿಲ್ಲ. ಮನಸ್ಸಿಗೆ ಬಂದಂತೆ ಪ್ರಚಾರ ಮಾಡುವವರನ್ನು ಸಮಾಧಾನಪಡಿಸಲು ಆಗುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಹೇಳಿದರು.
ತುಮಕೂರಿಗೆ ಬರಬೇಕಾದ ನೀರನ್ನು ದೇವೇಗೌಡರು ಹಿಡಿದಿಟ್ಟುಕೊಳ್ಳುತ್ತಿದ್ದಾರೆ ಎಂಬ ಕೆಲವರ ಹೇಳಿಕೆಗೆ ನಾನು ಹೆಚ್ಚು ಮಹತ್ವ ಕೊಡುವುದಿಲ್ಲ. ನೀರಾವರಿ ವಿಷಯದ ಬಗ್ಗೆ ಮಾತನಾಡುವವರು ತಿಳಿದುಕೊಂಡು ಮಾತನಾಡಬೇಕು. ಪ್ರಚಾರಕ್ಕಾಗಿ ಹೇಳಿಕೆ ನೀಡಿದರೂ ಅದರಲ್ಲಿ ಸತ್ವ ಇರಬೇಕು ಎಂದು ಗುಡುಗಿದರು.ನಗರದಲ್ಲಿ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿಗೆ ನನ್ನ ಮೊದಲ ಆದ್ಯತೆ, ಜಿಲ್ಲೆಯ ಹಳ್ಳಿಗಳಿಗೆ ನೀರು ಒದಗಿಸಲು ಹೆಚ್ಚು ಆಸಕ್ತಿ ವಹಿಸಬೇಕು. ಇದಕ್ಕಾಗಿ ನಾನು ಶ್ರಮಿಸುತ್ತಾ ಬಂದಿದ್ದೇನೆ ಎಂದರು.
ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ನಾನು ರಾಜ್ಯದಲ್ಲಿ ನೀರಾವರಿ ಮಂತ್ರಿಯಾಗಿದ್ದೆ. ಆಗ ನೀರಿನ ಬಳಕೆ ಹಾಗೂ ನದಿ ಜೋಡಣೆ ಬಗ್ಗೆ ಒಂದು ಸಮಿತಿಯನ್ನು ರಚಿಸಿದ್ದು, ಅದರ ಅಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸಿದ್ದೆ. ಇಂದಿರಾಗಾಂಧಿ ಅವರಿಂದಲೇ ಘಟಪ್ರಭಾವನ್ನು ಲೋಕಾರ್ಪಣೆ ಮಾಡಿಸಿದ್ದೆ ಎಂದರು. ನೀರು ರಾಷ್ಟ್ರೀಯ ನೀತಿಯ ಅಡಿ ಬರುತ್ತದೆ. ಅದಕ್ಕಾಗಿ ಕೆಲವು ನೀತಿ ರೂಪಿಸಲಾಗಿದೆ. ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ನಾನು ನೀರಾವರಿ ಮಂತ್ರಿಯಾದಾಗಿನಿಂದಲೂ ಕರ್ನಾಟಕದ ನೀರಾವರಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದರು. ಕೇಂದ್ರ ನೀರಾವರಿ ಸಚಿವ ನಿತಿನ್ ಗಡ್ಕರಿ ಅವರು ಈಗ ಮೊದಲ ಹಂತವಾಗಿ ಮಹಾನದಿ ನೀರನ್ನು ಕಾವೇರಿ ಕಣಿವೆಗೆ ಹರಿಸಲು ಯೋಜನೆ ರೂಪಿಸಿದ್ದಾರೆ. ಈ ಕುರಿತು ತಾವು ಪತ್ರ ವ್ಯವಹಾರ ಮಾಡಿದ್ದು, ರಾಜ್ಯಕ್ಕೆ 24 ಟಿಎಂಸಿ ನೀರು ಒಗದಿಸುವಂತೆ ಆಗ್ರಹಿಸಿರುವುದಾಗಿ ಹೇಳಿದರು.ಪರಿಸ್ಥಿತಿ ಹೀಗಿರುವಾಗ ದೇವೇಗೌಡರು ಹೇಮಾವತಿ ನದಿ ನೀರನ್ನು ತುಮಕೂರಿಗೆ ಹರಿಸಲು ಅಡ್ಡಿಪಡಿಸುತ್ತಿದ್ದಾರೆ ಎಂಬ ಪ್ರಚಾರ ಅರ್ಥವಿಲ್ಲದ್ದ ಎಂದು ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಎಸ್.ಆರ್. ಶ್ರೀನಿವಾಸ್, ಮುರುಳೀಧರ ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.