ಮಧುಗಿರಿ:

      ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಬರಗಾಲವನ್ನು ಎದುರಿಸಲು ವಿಫಲವಾಗಿದ್ದಾರೆ ಹಾಗೂ ಅಧಿಕಾರಿಗಳು ಈ ಮೊದಲೇ ಮುಂಜಾಗ್ರತ ಕ್ರಮ ಕೈಗೊಂಡಿಲ್ಲದೇ ಇರುವುದರಿಂದ ತಾಲ್ಲೂಕಿನಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

      ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಸರಕಾರವಿರಲಿ ಜನರ ಯೋಗ ಕ್ಷೇಮವನ್ನು ವಿಚಾರಿಸುವಂತಹ ಶಾಸಕರಿರಬೇಕು. ಆದರೆ ತಾಲ್ಲೂಕಿನ ಚಿತ್ರಣವೇ ಬೇರೆಯಾಗಿದೆ. ಈ ಹಿಂದೆ ನಾನು ಶಾಸಕನಾಗಿದ್ದಾಗ ನೀರಿನ ಬವಣೆ ಅಷ್ಟಾಗಿ ಕಂಡುಬಂದಿರಲಿಲ್ಲ ಕಳೆದ ಬಾರಿಗಿಂತ ಈ ಬಾರಿ ಅವಧಿಗೂ ಮುಂಚೆಯೇ ಹೆಚ್ಚಾಗಿ ಹೇಮಾವತಿ ನೀರು ಹರಿದಿದೆ.

      ಹೇಮಾವತಿ ನೀರನ್ನು ಸಿದ್ದಾಪುರ ಕೆರೆಗೆ ಹರಿಸಿ ಅಲ್ಲಿಂದ ಬಿಜವರದ ಕೆರೆಗೆ ನೀರು ಹರಿಸಲಾಗಿತ್ತು ಆದರೂ ಈಗ ನೀರಿನ ಬವಣೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.

      ಲೋಕಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಜಿಪಂ-ತಾಪಂ ಚುನಾವಣೆ ಎದುರಾಗಲಿದ್ದು ನನ್ನ ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೆ.ಎನ್ ರಾಜಣ್ಣ ತಿಳಿಸಿದರು.

      ಹೈಕಮಾಂಡ್ ಸೂಚನೆಯಂತೆ ನಾವು ಲೋಕಸಭೆಯ ಚುನಾವ ಣೆಯನ್ನು ನಡೆಸಲಿದ್ದೇವೆ ಈಗಾಗಲೇ ಕೆಲವು ನಿರ್ಧಾರಗಳನ್ನು ಸಹ ಕೈಗೊಳ್ಳಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರ ಕೊಡುವ ಚುನಾವಣೆಗಳು ನಡೆಯುವ ದೃಷ್ಟಿಯಿಂದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವ ಅವಶ್ಯಕತೆ ಇದೆ ಎಂದ ಅವರು, ಏಪ್ರಿಲ್ 8ರಂದು ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ 11 ಘಂಟೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯನವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಮೈತ್ರಿ ಪಕ್ಷದವರನ್ನು ಆಹ್ವಾನಿಸುವುದಿಲ್ಲ ಆ ಪಕ್ಷದವರು ಆಯೋಜಿಸುವ ಸಭೆಗೆ ನಾವ್ಯಾರು ಹೋಗುವುದಿಲ್ಲ ಎಂದರು.

       ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಚರ್ಚಿಸಿ ಮೈತ್ರಿಯಂತೆ ನಿರ್ಧಾರವಾಗಿರುವ ಲೋಕಸಭೆಯ ಚುನಾವಣೆಯ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದರು.

     ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಎನ್.ಗಂಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಮಲ್ಲಿಕಾರ್ಜುನಯ್ಯ, ಎಸ್.ಆರ್.ರಾಜಗೋಪಾಲ್, ಪುರಸಭಾ ಸದಸ್ಯರಾದ ಎಂ.ವಿ.ಗೋವಿಂದರಾಜು, ಆಲೀಂ, ಹಿರಿಯ ವಕೀಲರಾದ ಹೆಚ್.ಕೆ.ವಿ.ರೆಡ್ಡಿ, ಮುಖಂಡರಾದ ಬಾಬಾಫಕ್ರುದ್ಧಿನ್, ಪ್ರೆಸ್ ಕರಿಯಣ್ಣ, ಕೃಷ್ಣಮೂರ್ತಿ, ಸಿದ್ದಪ್ಪ ಮುಂತಾದವರು ಇದ್ದರು.

(Visited 8 times, 1 visits today)