ಮಧುಗಿರಿ :
ಡಿಸಿಎಂ ಡಾ.ಜಿ. ಪರಮೇಶ್ವರ್‍ರವರು ಸಂಸದ ಮುದ್ದಹನುಮೇಗೌಡರನ್ನು ಪ್ರಚಾರದಿಂದ ದೂರವಿಟ್ಟು ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಆರೋಪಿಸಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸಂಸದ ಮುದ್ದಹನುಮೇಗೌಡರ ಕ್ಷೇತ್ರವನ್ನು ಜೆಡಿಎಸ್‍ನವರು ಪಡೆದುಕೊಂಡಿರುವುದು ಮೈತ್ರಿ ಧರ್ಮಕ್ಕೆ ವಿರುದ್ದ. ಇದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಅತೃಪ್ತಿ ತಂದಿದೆ. ಇಂದಿನ ಕಾಂಗ್ರೆಸ್-ಜೆಡಿಎಸ್ ಸಭೆಗೆ ಅವರನ್ನು ಸೇರಿಸದೇ ಮೂಲೆ ಗುಂಪು ಮಾಡುತ್ತಿರುವುದಕ್ಕೆ ಕಾರ್ಯಕರ್ತರಿಗೆ ಅಸಮಾಧಾನವಾಗಿದೆ. ಇಂದಿನ ಸಭೆಗೆ ಕರೆದುಕೊಂಡು ಬಂದರೆ ಮಾತ್ರ ನಾನು ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದೆ. ಆದರ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಬರುತ್ತಿಲ್ಲ.
ಮೈಸೂರಿನಲ್ಲಿ ಸಚಿವ ಜಿ.ಟಿ. ದೇವೇಗೌಡ ಸಭೆ ಕರೆದು ನಾವು ಕಾಂಗ್ರೆಸ್‍ಗೆ ಮತ ಚಲಾಯಿಸುವುದಿಲ್ಲ ಬಿಜೆಪಿಗೆ ಮತ ಚಲಾಯಿಸುತ್ತೇವೆ ಎಂಬುದಾಗಿ ಹೇಳಿಕೆ ನೀಡಿದ್ದು, ತುಮಕೂರು ಜಿಲ್ಲೆಯಲ್ಲಿ ನಾವು ಜೆಡಿಎಸ್‍ಗೆ ಏಕೆ ಮತ ನೀಡಬೇಕು ಎಂದು ಪ್ರಶ್ನಿಸಿದ ಅವರು ಮೈಸೂರಿನಲ್ಲಿ ಕಾಂಗ್ರೆಸ್ ನಿಂದ ಹಿಂದುಳಿದ ವರ್ಗದವರು ಸ್ಪರ್ಧಿಸಿದ್ದು, ಅಲ್ಲಿನ ಶಾಸಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮಾತನಾಡುತ್ತಿದ್ದಾರೆ. ಇದು ಯಾವ ಮೈತ್ರಿ ಧರ್ಮ. ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಜೆಡಿಎಸ್‍ನವರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್ ಜೊತೆ ಏಕೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಇವರ ಸಾರ್ಥಕ್ಕಾಗಿ ಜೆಡಿಎಸ್ ನವರು ಏನು ಬೇಕಾದರೂ ಮಾಡುತ್ತಾರೆ ಎಂದರು.
ಮೈತ್ರಿಗೆ ವೈಯಕ್ತಿಕವಾಗಿ ಒಪ್ಪಿಗೆಯಿಲ್ಲದಿದ್ದರೂ ಹೈಕಮಾಂಡ್ ಆದೇಶದಂತೆ ನಡೆಯುವುದು ನನ್ನ ಜವಾಬ್ದಾರಿ. ಮಾ. 8 ರಂದು ಪಟ್ಟಣದ ಎಂ.ಎನ್.ಕೆ ಸಮುದಾಯಭವನದಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಮತ ಯಾಚಿಸಲು ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಜನಪ್ರತಿನಿಧಿಗಳಿಗೇ ಬುದ್ದಿ ಹೇಳುವ ಜಾಗರೂಕತೆಯನ್ನು ಬೆಳೆಸಿಕೊಂಡಿದ್ದು, ಮತದಾರರಿಗೆ ಮೈತ್ರಿಯ ಅವಶ್ಯಕತೆಯ ಬಗ್ಗೆ ವಿವರಿಸಬೇಕಿದೆ. ಮಾ. 10 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧುಗಿರಿಗೆ ಪ್ರಚಾರಕ್ಕೆ ಆಗಮಿಸುವ ಮಾಹಿತಿಯಿದ್ದು, ಅವರು ಬಂದರೆ ಅವರ ಸಭೆಗೆ ನಾವೆಲ್ಲರೂ ಹಾಜರಾಗುತ್ತೇವೆ ಎಂದರು.
ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯುಂಟಾಗಿದ್ದು, ಪಟ್ಟಣಕ್ಕೆ ಹೇಮಾವತಿ ನೀರು ಸಿದ್ದಾಪುರ ಕೆರೆಗೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿಯದಿರುವುದರಿಂದ ಪಟ್ಟಣದ ಜನತೆಗೆ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ. ಹಿಂದೆ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಗೆ ಹೇಮೆ ಹರಿಯದಿದ್ದರೂ ನಮ್ಮ ಭಾಗದ ನೀರನ್ನು ಪಡೆದು ಸಿದ್ದಾಪುರ ಕೆರೆಯನ್ನು ತುಂಬಿಸಲಾಗುತ್ತಿತ್ತು. ಈ ಬಾರಿ ಜಿಲ್ಲೆಗೆ ಅಗತ್ಯವಿರುವಷ್ಟು ಹೇಮಾವತಿ ನೀರು ಹರಿದಿದ್ದರೂ ಮಧುಗಿರಿಗೆ ಹೇಮೆಯನ್ನು ಹರಿಸದೇ ಇಲ್ಲಿನ ಶಾಸಕರು ಜವಾಬ್ದಾರಿಯನ್ನು ನಿರ್ವಹಿಸಲು ವಿಫಲರಾಗಿದ್ದಾರೆ. ಇದರಿಂದ ರೈತರಿಗೆ ಮತ್ತು ನಾಗರೀಕರಿಗೆ ತೀವ್ರ ತೊಂದರೆಯುಂಟಾಗಿದೆ ಎಂದರು.
ಕೆಎನ್‍ಆರ್ ಭೇಟಿಯಾದ ಜೆಡಿಎಸ್ ಸದಸ್ಯ : ಹಿಂದೆ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಿ ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಜಯಗಳಿಸಿದ್ದ ಪುರಸಭಾ ಸದಸ್ಯ ತಿಮ್ಮರಾಮಪ್ಪ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಂದು ಮಾಜಿ ಶಾಸಕ ಕೆ. ಎನ್. ರಾಜಣ್ಣನವರನ್ನು ಭೇಟಿ ಮಾಡಿ ಚರ್ಚಿಸಿದರು.