ತುಮಕೂರು:
ಲೋಕಸಭಾ ಚುನಾವಣೆ-2019ರ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಇಲ್ಲಿಯವರೆಗೂ ತುಮಕೂರು ಜಿಲ್ಲೆಯಲ್ಲಿ 95,13,736 ರೂ. ಮೌಲ್ಯದ 25,015.68 ಲೀ. ಮದ್ಯ, 16,67,760 ರೂ. ನಗದು ಹಾಗೂ 47 ದ್ವಿಚಕ್ರ ವಾಹನಗಳು ಸೇರಿದಂತೆ 44.47 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾದ್ಯಂತ ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದ್ದು, ಚೆಕ್‍ಪೋಸ್ಟ್ ಸಿಬ್ಬಂದಿ ಹಾಗೂ ಇವರ ಜೊತೆಗೆ ಎಸ್‍ಎಸ್‍ಟಿ ತಂಡಗಳ ಕಟ್ಟುನಿಟ್ಟಿನ ತಪಾಸಣೆಯಿಂದಾಗಿ ಜಿಲ್ಲೆಯಲ್ಲಿ 16,67,760 ರೂ.ಗಳ ನಗದನ್ನು ವಶಪಡಿಸಿಕೊಂಡಿದ್ದು, ತೀವ್ರ ಪರಿಶೀಲನೆಯ ನಂತರ 1,47,760 ರೂ.ಗಳನ್ನು ಸಂಬಂಧಿಸಿದ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಉಳಿದಂತೆ 15,20,000 ರೂ.ಗಳನ್ನು ಆದಾಯ ತೆರಿಗೆ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ.
ಜಿಲ್ಲೆಯಲ್ಲಿ ಅಕ್ರಮ ಮದ್ಯವನ್ನು ತಡೆಗಟ್ಟಲು 14 ಅಬಕಾರಿ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ದಿನದ 24 ಗಂಟೆಗಳು ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದಾಗಿ ತುಮಕೂರು ಜಿಲ್ಲೆಯಲ್ಲಿ 24,063.02 ಲೀಟರ್ ದೇಶೀಯ ನಿರ್ಮಿತ ಮದ್ಯ, 826.66 ಲೀ. ಬಿಯರ್, 126 ಲೀ. ಸೇಂದಿ ಸೇರಿದಂತೆ ಒಟ್ಟು 25,015.68 ಲೀಟರ್ ಮದ್ಯವನ್ನು ವಶಪಡಿಸಿಕೊಂಡು 362 ಅಬಕಾರಿ ಅಕ್ರಮ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ 47 ದ್ವಿಚಕ್ರ ವಾಹನಗಳು, 1 ಹೆವಿ ವಾಹನ, ನಾಲ್ಕು ಚಕ್ರದ 4 ವಾಹನಗಳು ಸೇರಿದಂತೆ 44.47 ಲಕ್ಷ ರೂ. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ ತುಮಕೂರು ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ತಿಳಿಸಿದ್ದಾರೆ.