ಮಧುಗಿರಿ:
ಎಚ್.ಡಿ.ದೇವೇಗೌಡರ ಪರ ಮಾಜಿ ಸಿಎಂ ಸಿದ್ದರಾಮಯ್ಯ ಮೂರು ತಾಲೂಕುಗಳಲ್ಲಿ ಬುಧವಾರ ಪ್ರಚಾರ ನಡೆಸುವ ಮೂಲಕ ಜೆಡಿಎಸ್ ವಲಯದಲ್ಲಿ ಸ್ವಲ್ಪ ಸಮಾಧಾನ ಮೂಡಿಸಿದರು.
ದೇವೇಗೌಡರ ರಾಜಕೀಯ ವಿರೋಧಿಗಳಾಗಿರುವ ಸಿದ್ದರಾಮಯ್ಯ ಪ್ರಚಾರ ನಡೆಸುವ ಬಗ್ಗೆ ಜಿಲ್ಲೆಯ ಜನರಲ್ಲಿ ಕುತೂಹಲವಿತ್ತು. ಮೈತ್ರಿ ಅಭ್ಯರ್ಥಿ ದೇವೇಗೌಡರನ್ನು ಗೆಲ್ಲಿಸಿ ಎಂದು ಮನವಿ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.
ಯುವಕರೇ ನಿಮ್ಮಲ್ಲಿ ಕೈ ಜೋಡಿಸಿ ಪ್ರಾರ್ಥಿಸುತ್ತೇನೆ. ಮೋದಿ, ಮೋದಿ ಎಂದು ಹೇಳ್ಬೇಡಿ. ಅವರು ನಿಮಗೇ ಟೋಪಿ ಹಾಕಿದ್ದಾರೆ. ಬಿಜೆಪಿ ಸೋಲಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸಿ ಎಂದು ಮನವಿ ಮಾಡಿದರು.
ಕೊಡುಗೆ ಹೇಳಲು ಏನೂ ಇಲ್ಲದೆ ಚಿತ್ರದುರ್ಗ, ಮೈಸೂರಲ್ಲಿ ಮಾಡಿದ ಭಾಷಣ ಸುಬ್ಬರಾಯನ ಕೆರೆ ಥರ ಇತ್ತು. ಅಭಿವೃದ್ಧಿ ಕೆಲಸಗಳ ಬಗ್ಗೆ ಒಂದೂ ಮಾತನಾಡಲಿಲ್ಲ ಎಂದು ವ್ಯಂಗ್ಯವಾಡಿದರು.
ಮೋದಿಯವರು ಏನು ಮಾಡಿದ್ದಾರೆ? ಉದ್ಯೋಗ ಕೇಳಿದ ಯುವಕರ ಬಳಿ ಪಕೋಡಾ ಮಾರಲು ಹೋಗಿ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಬಿಜೆಪಿಯವರು ಮತ ಕೇಳಲು ಹೋದಲ್ಲೆಲ್ಲ ನಮ್ಮ ಮುಖ ನೋಡಬೇಡಿ. ಮೋದಿಗಾಗಿ ವೋಟು ಹಾಕಿ ಎನ್ನುತ್ತಾರೆ ಎಂದು ಲೇವಡಿ ಮಾಡಿದರು.
ಮಾತೆತ್ತಿದರೆ ನನಗೆ 56 ಇಂಚು ಎದೆ ಇದೆ ಎನ್ನುತ್ತಾರೆ. ಬಾಡಿ ಬಿಲ್ಡರ್?ಗಳಿಗೆ 90 ಇಂಚಿನ ಎದೆ ಇರುತ್ತದೆ. ಆದರೆ, ಅಷ್ಟು ದೊಡ್ಡ ಎದೆ ಇದ್ದರೆ ಸಾಲದು, ತಾಯಿ ಹೃದಯ ಮುಖ್ಯ. ರೈತರು ಕಷ್ಟದಲ್ಲಿದ್ದಾಗ ಸಾಲಮನ್ನಾ ಮಾಡಿ ಎಂದರೆ ಅವರ ಕಲ್ಲು ಹೃದಯ ಕರಗಲಿಲ್ಲ ಎಂದು ಟೀಕಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವ ಎಸ್.ಆರ್.ಶ್ರೀನಿವಾಸ್, ಶಾಸಕ ಸಿ.ಎಂ.ಇಬ್ರಾಹಿಂ, ತಿಪಟೂರಿನಲ್ಲಿ ಕೆ.ಷಡಕ್ಷರಿ, ಲೋಕೇಶ್ವರ್, ಸಿ.ಬಿ.ಶಶಿಧರ್, ಶಾಸಕರಾದ ಬಾಲಕೃಷ್ಣ, ಬೆಮೆಲ್ ಕಾಂತರಾಜು, ತೂಪಲ್ಲಿ ಚೌಡರೆಡ್ಡಿ, ಮಡೇನೂರು ಕಾಂತರಾಜು, ಸೊಪ್ಪು ಗಣೇಶ್, ಜಿಪಂ ಸದಸ್ಯ ಜಿ.ನಾರಾಯಣ, ಚಿಕ್ಕನಾಯಕನಹಳ್ಳಿಯಲ್ಲಿ ಸಿ.ಬಿ.ಸುರೇಶ್ ಬಾಬು, ಟಿ.ಬಿ.ಜಯಚಂದ್ರ, ಸಾಸಲು ಸತೀಶ್, ಟಿ.ಜೆ.ಸಂತೋಷ್, ವೈ.ಸಿ.ಸಿದ್ದರಾಮಯ್ಯ ಮತ್ತಿತರರು ಇದ್ದರು.
ಸಿದ್ದರಾಮಯ್ಯ ಜತೆ ಬಂದರು:
ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಟ್ಟ ನಂತರ ಸಂಸದ ಎಸ್.ಪಿ.ಮುದ್ದಹನುಮೇಗೌಡ ಜತೆ ಗುರುತಿಸಿಕೊಂಡು ಪಕ್ಷೇತರರಾಗಿ ಅರ್ಜಿ ಸಲ್ಲಿಸುವಾಗ ಮುಂಚೂಣಿಯಲ್ಲಿದ್ದ ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಚಿಕ್ಕನಾಯಕನಹಳ್ಳಿಯ ಸಾಸಲು ಸತೀಶ್, ತುಮಕೂರು ಗ್ರಾಮಾಂತರದ ರಾಯಸಂದ್ರ ರವಿಕುಮಾರ್, ತಿಪಟೂರಿನ ಶಶಿಧರ್, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಮತ್ತಿತರ ಮುಖಂಡರು ಸಿದ್ದರಾಮಯ್ಯ ಜತೆ ಕಾಣಿಸಿಕೊಂಡರು. ಮೈತ್ರಿ ಪಕ್ಷದ ಅಭ್ಯರ್ಥಿಗೆ ತಲೆನೋವಾಗಿರುವ ಜಿಲ್ಲೆಯ ಮುಖಂಡರು ಸಿದ್ದರಾಮಯ್ಯ ಜತೆ ವೇದಿಕೆಗಳಲ್ಲಿ ಕಾಣಿಸಿದ್ದು ಜೆಡಿಎಸ್ ವಲಯದಲ್ಲಿ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ನಾಂದಿಯಾಯಿತು.
ಮಧುಗಿರಿಯಲ್ಲಿ ಕಂಡ ಸಂಸದ ಎಸ್ಪಿಎಂ!:
ಕ್ಷೇತ್ರ ಕೈತಪ್ಪಿರುವ ಬೇಸರದಿಂದ ಹೊರಬರದ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಧುಗಿರಿಯಲ್ಲಿ ನಡೆದ ಸಭೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಳ್ಳುವ ಸೂಚನೆ ರವಾನಿಸಿದರು.