ತುಮಕೂರು:
ಜಿಲ್ಲೆಯ ಮತದಾರರು ಈ ಬಾರಿ ನನ್ನ ಕೈ ಹಿಡಿದರೆ,ಅವರ ಋಣ ತೀರಿಸಿಯೇ ಜಿಲ್ಲೆಯಿಂದ ನಿಗರ್ಮಿಸುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಜಿಲ್ಲಾ ಕುಂಚಿಟಿಗರ ಸಮುದಾಯಭವನದಲ್ಲಿ ತುಮಕೂರು ಜಿಲ್ಲಾ ಮಡಿವಾಳ ಸಮಾಜ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಜಿಲ್ಲೆಯ ಮತದಾರರು ವಿರೋಧ ಪಕ್ಷದವರು ಮಾಡುವ ಅಪಪ್ರಚಾರಗಳಿಗೆ ಕಿವಿಗೊಡದೆ,ನನ್ನನ್ನು ಆರಿಸಿ ಕಳುಹಿಸಿಕೊಡಿ, ಜಿಲ್ಲೆಯ ನೀರಾವರಿ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಯೇ ಇಲ್ಲಿಂದ ನಿಗರ್ಮಿಸುತ್ತೇನೆ.ನನ್ನ 60 ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ಕೊಟ್ಟ ಮಾತಿಗೆ ತಪ್ಪಿ ನಡೆದಿಲ್ಲ.ನನ್ನ ಜೀವನದ ಕೊನೆಯ ವರೆಗೂ ಅದನ್ನು ಉಳಿಸಿಕೊಂಡು ಹೋಗಲಿದ್ದೇನೆ ಎಂದರು.
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ 16 ಲಕ್ಷ ಮತದಾರರಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಮತಗಳು ಸುಮಾರು 23 ಸಣ್ಣ ಸಣ್ಣ ಸಮುದಾಯಗಳಿಗೆ ಸೇರಿದ್ದು,ಅವರ ಸ್ಥಿತಿಗತಿಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ.ನೀರಾವರಿ ವಿಚಾರವಾಗಿ ಮೂರು ಬಾರಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.ನೀರಾವರಿ ವಿಚಾರದಲ್ಲಿ ನಾನು ಹುಟ್ಟು ಹೋರಾಟಗಾರ.ವಿರೋಧಪಕ್ಷಗಳ ಅಪಪ್ರಚಾರದ ನಡುವೆಯೂ ಈ ಜಿಲ್ಲೆಯ ಮತದಾರರು ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದ ದೇವೇ ಗೌಡರು,ನಾನು ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂರಿಗೆ,ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಲಾಯಿತು. ಸ್ಥಳೀಯ ಸಂಸ್ಥೆಗಳಲ್ಲಿ ಶೇ33ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗಿದೆ.ಇದರ ಫಲವಾಗಿ ಎಲ್ಲ ತಳ ಸಮುದಾಯ ಗಳು ರಾಜಕೀಯ ಅಧಿಕಾರ ಅನುಭವಿಸುವಂತಾಗಿವೆ ಎಂದು ದೇವೇಗೌಡರು ವಿಶ್ಲೇಷಿಸಿದರು.
ನನಗೀತ 87 ವರ್ಷ.ಚುನಾವಣೆಗೆ ನಿಲ್ಲಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೆ.ಆದರೆ ಕೆಲ ಹಿರಿಯ ನಾಯಕರು, ದೇಶದ ಕೆಟ್ಟ ರಾಜಕೀಯ ಪರಿಸ್ಥಿತಿಯ ವಿರುದ್ದ ಹೋರಾಡಲು ನಿಮ್ಮಂತ ಹಿರಿಯ ನಾಯಕರು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದೇನೆ. ಸಿದ್ದರಾಮಯ್ಯ ನಾನು ಒಗ್ಗೂಡಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಹೋರಾಟ ನಡೆಸುತ್ತಿದ್ದೇವೆ.ಮಡಿವಾಳ ಜನಾಂಗಕ್ಕೆ ಅರ್ಥಿಕ ಶಕ್ತಿ ತುಂಬಲು ಈಗಾಗಲೇ ಅಭಿವೃದ್ದಿ ನಿಗಮ ಸ್ಥಾಪಿಸಲಾಗಿದೆ. ಸಮುದಾಯದ ಮುಖಂಡರಾದ ಅಮರನಾಥ ಅವರಿಗೆ ರಾಜಕೀಯ ಶಕ್ತಿ ತುಂಬುವ ಕೆಲಸವನ್ನು ಮಾಡಲಿದ್ದೇವೆ.ನಿಮ್ಮ ಬೇಡಿಕೆಗಳ ಕಡೆಗೂ ಗಮನ ಹರಿಸಲಿದ್ದೇವೆ.ಇಂದು ಚಿತ್ರದುರ್ಗ ಪ್ರವಾಸ ಮಾಡುತಿದ್ದು, ಮುಂದಿನ ಎರಡು ದಿನ ಕ್ಷೇತ್ರದಲ್ಲಿದ್ದು, ಏ.18ರಂದು ಮತ ಚಲಾಯಿಸಲು ಹುಟ್ಟೂರಿಗೆ ತೆರಳುವುದಾಗಿ ಹೆಚ್.ಡಿ.ದೇಗೌಡರು ನುಡಿದರು.
ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ,ನಮ್ಮ ಎದುರಾಳಿ ಅಭ್ಯರ್ಥಿ ಜಿ.ಎಸ್.ಬಸವರಾಜು, ದೇವೇಗೌಡರು ನೀರು ತಡೆಹಿಡಿದಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ.ಹಾಗಾದರೆ ನಾಲ್ಕು ಬಾರಿ ಸಂಸದರಾದ ಇವರು ಜಿಲ್ಲೆಗೆ ನೀರು ತರುವಲ್ಲಿ ವಿಫಲರಾಗಿದ್ದಾರೆ. ಇವರಿಗೆ ಜಿಲ್ಲೆಯ ಜನತೆ ಪುನಃ ಮತ ನೀಡಬೇಕೆ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಮಡಿವಾಳ ಸಮಾಜದಿಂದ ಮಾಚಿದೇವ ಅಭಿವೃದ್ದಿ ನಿಗಮಕ್ಕೆ ನೀಡಿರುವ 25 ಕೋಟಿಗೆ ಬದಲು 50 ಕೋಟಿ ಮೀಸಲಿಡುವಂತೆ ಹಾಗೂ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಮನವಿ ಸಲ್ಲಿಸಿದರು.