ಪಾವಗಡ:

      ತಾಲ್ಲೂಕಿನ ಗುಜ್ಜನಡು ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತರಾಯ ತಾವು ಮತ ಹಾಕಿದ ಚಿತ್ರವನ್ನು ಗುರುವಾರ ಫೇಸ್ ಬುಕ್‍ಗೆ ಅಪ್ ಲೋಡ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಆಕ್ಷೇಪ ವ್ಯಕ್ತವಾಗಿದೆ.

      ಜನಪ್ರತಿನಿಧಿ ಕಾಯ್ದೆ ಪ್ರಕಾರ ಮತದಾನವನ್ನು ಬಹಿರಂಗಪಡಿಸುವಂತಿಲ್ಲ. ಆದ್ದರಿಂದಲೇ ಗುಪ್ತ ಮತದಾನ ಎಂದು ಕರೆಯಲಾಗುತ್ತದೆ.
ಆದರೆ, ಗುಜ್ಜನಡು ಗ್ರಾಮದ ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತರಾಯ ಅವರು ತಾವು ಯಾರಿಗೆ ಮತ ಹಾಕಿದ್ದು ಎಂಬುದನ್ನು ಚಿತ್ರ ಸಹಿತ ಫೇಸ್ ಬುಕ್ ನಲ್ಲಿ ಬಹಿರಂಗಪಡಿಸಿದ್ದಾರೆ. ಓರ್ವ ಜನಪ್ರತಿನಿಧಿಯೇ ಕಾನೂನು ಉಲ್ಲಂಘಿಸಿರುವ ಬಗ್ಗೆ ಯುವ ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಮತಗಟ್ಟೆಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಆದರೂ ಮೈತ್ರಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರಿಗೆ ಮತ ಹಾಕಿದ ರೀತಿಯಲ್ಲಿ, ಲೈಟ್ ಬೆಳಗುತ್ತಿದ್ದಾಗಲೇ ಚಿತ್ರ ತೆಗೆಯಲಾಗಿದೆ. ಶುಭಾರಂಭ ಬಿ.ಎನ್. ಚಂದ್ರಪ್ಪ, ಜೈ ಚಂದ್ರಪ್ಪ ಎಂಬ ಹೇಳಿಕೆಯೊಂದಿಗೆ ಚಿತ್ರವನ್ನು ಅಪ್ ಲೋಡ್ ಮಾಡಲಾಗಿದೆ.
ಕೆಲ ಯುವಕರು ಈ ಬಗ್ಗೆ ಕಾಮೆಂಟ್ ಮಾಡಿ ತಾಲ್ಲೂಕಿಗೆ ನೀರು ಹರಿಸುವ ಸಂಬಂಧ ಪತ್ರಿಕೆಯಲ್ಲಿ ನೋಟಾ ಗೆ ಮತ ಹಾಕುವ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಸಹಾಯಕ ಚುನಾವಣಾ ಅಧಿಕಾರಿ ಕಾರಣ ಕೇಳಿ ಸಾಮಾನ್ಯ ಜನತೆಗೆ ನೋಟೀಸ್ ನೀಡಿದ್ದರು.

      ಇದೀಗ ಅಧಿಕಾರಿಗಳು ಜನಪ್ರತಿನಿಧಿಯ ತಪ್ಪಿಗೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೊಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(Visited 28 times, 1 visits today)