ಚಿಕ್ಕನಾಯಕನಹಳ್ಳಿ:
ತಾಲ್ಲೂಕಿನ ಭೂ ಸ್ವರೂಪ ಅರೆ ಮಲೆನಾಡು ಹಾಗೂ ಬಯಲುಸೀಮೆಯನ್ನು ಕೂಡಿಸುವ ಕೊಂಡಿಯಂತಿದೆ. ಕೃಷ್ಣ ಹಾಗೂ ಕಾವೇರಿ ಕೊಳ್ಳಗಳ ನಡುವೆ ವಿಭಾಗಿಸಿದೆ.
ಆದ್ದರಿಂದ ತಾಲ್ಲೂಕಿನ ರೈತರು ತೆಂಗಿಗೂ ಸೈ ಹಾಗೂ ಸಿರಿಧಾನ್ಯಕ್ಕೂ ಜೈ ಎನ್ನುತ್ತಾರೆ. ಆದರೆ ಕಳೆದ ಎರಡು ದಶಕಗಳಿಂದ ತಾಲ್ಲೂಕಿನಲ್ಲಿ ಚಾಲ್ತಿಯಲ್ಲಿರುವ ಕಬ್ಬಿಣದ ಅದಿರು ಗಣಿಗಾರಿಕೆ, ಅಕ್ರಮ ಮರಳು ಮಾಫಿಯಾ ಹಾಗೂ ಅಕ್ರಮ ಇಟ್ಟಿಗೆ ಕಾರ್ಖಾನೆಗಳು ತಾಲ್ಲೂಕಿನ ಭೂ ಸ್ವರೂಪ ಹಾಳುಗೆಡವಿವೆ. ರೈತರ ಬದುಕನ್ನು ಮೂರಾಬಟ್ಟೆ ಮಾಡಿವೆ.
ತಾಲ್ಲೂಕಿನ ಉದ್ದಕ್ಕೂ ಚಾಚಿಕೊಂಡಿದ್ದ ಅಬ್ಬಿಗೆ, ಮದನಿಂಗನಕಣಿವೆ ಹಾಗೂ ಕುದುರೆ ಕಣಿವೆಯ ಬೆಟ್ಟಸಾಲುಗಳು ಹಾಗೂ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆಯಿಂದ ಬೋರನಕಣಿವೆ ವರೆಗೆ ಚಾಚಿಕೊಂಡಿರುವ ಸುವರ್ಣಮುಖಿ ಹಳ್ಳ ತಾಲ್ಲೂಕಿನ ಭೂ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದವು. ಕಬ್ಬಿಣದ ಅದಿರು ಗಣಿಗಾರಿಕೆ ಹಾಗೂ ಅಕ್ರಮ ಮರಳು ಗಣಿಗಾರಿಕೆ ನೇರವಾಗಿ ಈ ಎರಡು ಪ್ರಾಕೃತಿಕ ವೈವಿಧ್ಯದ ಮೇಲೆ ಹೊಡೆತ ಕೊಟ್ಟಿದೆ. ಶತಮಾನಗಳಿಂದ ಮದನಿಂಗನ ಕಣಿವೆಯ ಬೆಟ್ಟಗಳು ಮಳೆಯ ಮಾರುತಗಳನ್ನು ತಾಲ್ಲೂಕಿಗೆ ಕರೆ ತರುತ್ತಿದ್ದವು. ಆದರೆ ಗಣಿಗಾರಿಕೆ ಪ್ರಾರಂಭವಾದ ಬಳಿಕ ತಾಲ್ಲೂಕಿನ ಹವಾಗುಣದಲ್ಲಿ ಏರುಪೇರು ಪ್ರಾರಂಭವಾಯಿತು.
ಇದಕ್ಕೆ ಸಾಕ್ಷಿ ಎಂಬಂತೆ 90ರ ದಶಕದವರೆಗೂ ಸಿಂಗದಹಳ್ಳಿ ಹಾಗೂ ದೊಡ್ಡಎಣ್ಣೆಗೆರೆ ಗ್ರಾಮದ ಮಳೆ ಮಾಪನ ಕೇಂದ್ರಗಳು ಅತಿ ಹೆಚ್ಚು ಮಳೆ ದಾಖಲಿಸುತ್ತಿದ್ದವು. ಆದರೆ ಈಗ ಅತಿ ಕಡಿಮೆ ಮಳೆ ದಾಖಲಾಗುತ್ತಿರುವುದು ಈ ಎರಡು ಮಾಪನಗಳಲ್ಲಿ ಎಂಬುದು ಜಿಜ್ಞಾಸೆಗೆ ಗ್ರಾಸವಾಗಿರುವ ವಿಷಯ. ಈ ಸ್ಥಿತ್ಯಂತರಕ್ಕೆ ತಾಲ್ಲೂಕಿನಲ್ಲಿ ನಡೆದ ಗಣಿಗಾರಿಕೆಯೇ ಕಾರಣ ಎಂಬುದು ನಿಸ್ಸಂಶಯ.
ಒಣಗುತ್ತಿರುವ ತೋಟಗಳನ್ನು ಉಳಿಸಿಕೊಳ್ಳಲು ಮೇಲಿಂದ ಮೇಲೆ ಕೊಳವೆ ಬಾವಿಗಳನ್ನು ಕೊರೆಸುತ್ತಿರುವ ರೈತರು ಸಾಲದ ಶೂಲಕ್ಕೆ ಕೊರಳು ಕೊಡುತ್ತಿದ್ದಾರೆ. ಭೂ ತಾಯಿಯ ನೀರ ಬಳ್ಳಿಗಳಾದ ಪುಟ್ಟ ನದಿ, ಹಳ್ಳ ಹಾಗೂ ಕೆರೆಗಳ ಒಡಲು ಬಗೆದು ಮರಳು ದೋಚಿದ್ದರಿಂದ ಈ ದುರ್ಗತಿ ತಾಲ್ಲೂಕಿಗೆ ಎದುರಾಗಿದೆ.
ಸುವರ್ಣಮುಖಿ ನದಿ ಪಾತ್ರ ತಾಲ್ಲೂಕಿನಲ್ಲಿ ಹರಡಿಕೊಂಡಿದೆ. ಸುವರ್ಣಮುಖಿ ಪಾತ್ರದಲ್ಲಿ ಇರುವ ಸಾಲು ಕೆರೆಗಳು ಕೋಡಿ ಬಿದ್ದು ಬೋರನ ಕಣಿವೆ ಜಲಾಶಯ ಭರ್ತಿಯಾಗುತ್ತಿತ್ತು. ನದಿ ಪಾತ್ರದ ರೈತರು ಕೊಳವೆಬಾವಿ ತೆಗೆಸಿಯೇ ಗೊತ್ತಿರಲಿಲ್ಲ. ಹೆಚ್ಚೆಂದರೆ ಹಳ್ಳದ ದಡದಲ್ಲಿ 25 ಅಡಿ ಆಳದ ಮುದ್ದೆ ಬೋರು ಹಾಕಿಸುತ್ತಿದ್ದರು. ಅದರಿಂದ ಹತ್ತಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಪಡೆಯುತ್ತಿದ್ದರು. ಆದರೆ ನದಿ ಪಾತ್ರದ ಉದ್ದಕ್ಕೂ ಅಕ್ರಮ ಮರಳು ಗಣಿಗಾರಿಕೆ ಅಡೆ ತಡೆಯಿಲ್ಲದೆ ಸಾಗುತ್ತಿದ್ದು ನದಿಯ ಅಸ್ಮಿತೆಯೇ ಅಳಿಸಿಹೋಗಿದೆ. ನೂರಾರು ಮುದ್ದೆ ಬೋರುಗಳು ಕಣ್ಣು ಮುಚ್ಚಿವೆ.
ಸುವರ್ಣಮುಖಿ ಹಳ್ಳದ ಸಾಲಿನ ಅಣೆಕಟ್ಟೆ, ಅಂಕಸಂದ್ರ ಹಳ್ಳ, ಬರಗೂರು ಹಳ್ಳ, ಗೂಬೆಹಳ್ಳಿ, ನಂದಿಹಳ್ಳಿ ಭಾಗದಲ್ಲಿ ಸುತ್ತಾಡಿದರೆ ಅಕ್ರಮ ಮರಳುಗಣಿಗಾರಿಕೆಯ ಕರಾಳ ಮುಖ ಕಣ್ಣಿಗೆ ರಾಚುತ್ತದೆ.
ರೈತರು ಒಂದು ಹೆಜ್ಜೆ ಮುಂದೆ ಹೋಗಿ ಪಾತ್ರದ ನೂರಾರು ಎಕರೆ ತೆಂಗಿನ ತೋಟಗಳಲ್ಲಿ ಮರಳೆತ್ತಲು ದಂಧೆಕೋರರಿಗೆ ಅನುವು ಮಾಡಿಕೊಡುತ್ತಿದ್ದಾರೆ. ಇಷ್ಟಕ್ಕೆ ತೃಪ್ತರಾಗದ ಮರಳು ಮಾಫಿಯಾ ಕುಳಗಳು ಹಾಗೂ ಇಟ್ಟಿಗೆ ಕಾರ್ಖಾನೆಗಳ ಮಾಲೀಕರು ಬತ್ತಿರುವ ಕೆರೆ ಕಟ್ಟೆಗಳನ್ನೂ ಬಿಡದೆ ಆಪೆರೇಷನ್ ತೆಗೆದುಕೊಳ್ಳುತ್ತಿದ್ದಾರೆ.
ಸಂಬಂಧಿಸಿದ ಇಲಾಖೆಗಳು, ಜಾಗೃತಿ ಸಮಿತಿಗಳು ಎಚ್ಚೆತ್ತು ಕೊಳ್ಳದಿದ್ದರೆ ಈ ಮರಳು ದಂಧೆಯಿಂದ ಆಗುವ ಅನಾಹುತವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಜಿಲ್ಲಾ ವಿಜ್ಞಾನ ಸಂಘದ ಕಾರ್ಯದರ್ಶಿ ಯಗಚಿಹಳ್ಳಿ ರಾಮಕೃಷ್ಣಪ್ಪ ಆತಂಕ ವ್ಯಕ್ತಪಡಿಸುತ್ತಾರೆ.