ತುಮಕೂರು:
ಜಿಲ್ಲೆಯ 10 ತಾಲ್ಲೂಕುಗಳು ಬರಪೀಡಿತವಾಗಿರುವುದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಮೇವಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಬೇಕೆಂದು ಯೋಜನೆ ಮತ್ತು ಸ್ಯಾಂಖಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ತುಮಕೂರು ಜಿಲ್ಲೆಯಲ್ಲಿ ಬರಪರಿಹಾರ ಹಾಗೂ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬರವಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇರುತ್ತದೆ. ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಮಾಡಬೇಕು. ಅಲ್ಲದೆ ಜನರ ಬಳಿಗೆ ಧಾವಿಸಿ ಅವರ ಸಮಸ್ಯೆಗಳನ್ನು ಆಲಿಸಿ ಅವರ ಸಮಸ್ಯೆಗೆ ಸ್ಪಂದಿಸಬೇಕು. ಜಾನುವಾರುಗಳಿಗೂ ನೀರು ಮತ್ತು ಮೇವು ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ಡಿಸೆಂಬರ್ 2018ರ ಅಂತ್ಯಕ್ಕೆ ವಾಡಿಕೆ ಮಳೆ 697 ಮಿ.ಮೀ. ಆಗಬೇಕಾಗಿತ್ತು. ಆದರೆ ವಾಸ್ತವಿಕವಾಗಿ 617 ಮಿ.ಮೀ. ಮಳೆಯಾಗಿ 12 ಮಿ.ಮೀ. ಕೊರತೆಯಾಗಿದೆ. ಜಿಲ್ಲೆಯಲ್ಲಿ 10 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಮಧುಗಿರಿ ತಾಲ್ಲೂಕಿನ ಕಸಬಾ, ಐಡಿಹಳ್ಳಿ, ಬಡವನಹಳ್ಳಿ, ಕೊಡಿಗೇನಹಳ್ಳಿ, ಮಿಡಿಗೇಶಿ, ಪುರವರ, ಕೊರಟಗೆರೆ ತಾಲ್ಲೂಕಿನ ಕಸಬಾ, ಕ್ಯಾಮೇನಹಳ್ಳಿ, ತೋವಿನಕೆರೆ, ಪಾವಗಡ ತಾಲ್ಲೂಕಿನ ಸಿಕೆಪುರ, ನಾಗಲಮಡಿಕೆ, ವೈ.ಎನ್.ಹೊಸಕೋಟೆ, ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ, ಪಟ್ಟನಾಯಕನಹಳ್ಳಿ, ತಿಪಟೂರು ತಾಲ್ಲೂಕಿನ ಬಾಗವಾಳೂ ಹಾಗೂ ಚಿಕ್ಕನಾಯಕನಹಳ್ಳಿಯ ಕಸಬಾದಲ್ಲಿ 16 ಮೇವು ಬ್ಯಾಂಕ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಮೇವು ವಿತರಿಸಲು ಮೇವು ವಿತರಣೆ ಕಾರ್ಡುಗಳನ್ನು ರೈತರಿಗೆ ವಿತರಿಸಿದ್ದು, ಮೇವು ವಿತರಣೆಗೆ ಜಿಲ್ಲೆಯಲ್ಲಿ ಸಹಕಾರಿಯಾಗಿವೆ. ಮೇವನ್ನು ಸಣ್ಣಸಣ್ಣಗೆ ಕತ್ತರಿಸಿ ನೀಡುವಂತೆ ಜನರಿಂದ ಬೇಡಿಕೆ ಇದೆ. ಈ ಬಗ್ಗೆ ಕ್ರಮವಹಿಸುವುದಾಗಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ 708185 ಜಾನುವಾರು(ದನ ಮತ್ತು ಎಮ್ಮೆ) ರೈತರ ದಾಸ್ತಾನಿನಲ್ಲಿ 281482 ಟನ್ ಒಣ ಮೇವು ಲಭ್ಯವಿದ್ದು, 11 ವಾರಗಳಿಗೆ ಸಾಕಾಗುತ್ತದೆ. ಮೇವು ಕಿರುಪೊಟ್ಟಣಗಳನ್ನು ರೈತರಿಗೆ ವಿತರಿಸಿದ್ದು, 5,99,117 ಟನ್ ಹಸಿರು ಮೇವು ಉತ್ಪಾದನೆಯಾಗುವುದೆಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ 128 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಕೊಳವೆ ಬಾವಿ ಬತ್ತಿ ಹೋಗಿರುವ ಕಡೆ ಖಾಸಗಿ ಬೋರ್‍ವೆಲ್‍ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ನೀರು ಒದಗಿಸಲು ಕೊಳವೆ ಬಾವಿ ಮಾಲೀಕರನ್ನು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇಂಜಿನಿಯರ್‍ಗಳು ಮನವೊಲಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಇನ್‍ಪುಟ್ ಸಬ್ಸಿಡಿಗಾಗಿ 1.70ಲಕ್ಷ ರೈತರ ಭಾಗಶಃ ಡೇಟಾಎಂಟ್ರಿ ಕಾರ್ಯವನ್ನು ಒಂದು ವಾರದೊಳಗೆ ಪೂರ್ಣಗೊಳಿಸುವುದಾಗಿ ಅವರು ತಿಳಿಸಿದರು.