ತುಮಕೂರು:
ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ ತಿಪಟೂರು ನಗರಸಭೆ, ಕುಣಿಗಲ್ ಹಾಗೂ ಪಾವಗಡ ಪುರಸಭೆ, ತುರುವೇಕೆರೆ ಪಟ್ಟಣ ಪಂಚಾಯತಿ ಹಾಗೂ ತುಮಕೂರು ಮಹಾನಗರಪಾಲಿಕೆಯ 22ನೇ ವಾರ್ಡ್‍ಗೆ ಮೇ 29ರಂದು ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ.
ವೇಳಾಪಟ್ಟಿ :-
ಚುನಾವಣೆಗೆ ಸಂಬಂಧಿಸಿದಂತೆ ಮೇ 9ರಂದು ನೋಟೀಸನ್ನು ಹೊರಡಿಸಲಾಗುವುದು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಮೇ 16 ಕಡೆಯ ದಿನವಾಗಿದ್ದು, ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ 20 ಕಡೆಯದಿನವಾಗಿದೆ. ಮತದಾನದ ಅವಶ್ಯವಿದ್ದರೆ ಮೇ 29ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮರು ಮತದಾನ ಇದ್ದಲ್ಲಿ ಮೇ 30ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮತ ಎಣಿಕೆ ಮೇ 31ರಂದು ಬೆಳಿಗ್ಗೆ 8 ಗಂಟೆಗೆ ಆಯಾ ತಾಲ್ಲೂಕು ಕೇಂದ್ರ ಸ್ಥಳಗಳಲ್ಲಿ ನಡೆಯಲಿದೆ.
ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಮೇ 2 ರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಮೇ 31ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅಭ್ಯರ್ಥಿಗಳು ಮೇ 11ರಂದು 2ನೇ ಶನಿವಾರವೂ ಸಹ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಸದಾಚಾರ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗದಂತೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.