ತುಮಕೂರು :
ತುಮಕೂರು ಜಿಲ್ಲೆ ತೀವ್ರ ಬರದಿಂದ ತತ್ತರಿಸಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನರೇಗಾ ಯೋಜನೆಯಡಿ ದುಡಿಯಲು ಕೆಲಸವನ್ನು ಒದಗಿಸಲು ತುರ್ತು ಕ್ರಮ ಕೈಕೊಳ್ಳುವಂತೆ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ.ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸಮಪರ್ಕವಾಗಿ ಬರನಿರ್ವಹಣೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಇರುವ ಕಡೆ, ಹೊಸದಾಗಿ ಬೋರ್‍ವೆಲ್‍ಗಳನ್ನು ಕೊರೆಯಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಿ, ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ 74 ಗ್ರಾಮ ಪಂಚಾಯಿತಿಗಳ 122 ಗ್ರಾಮಗಳಿಗೆ 455 ಟ್ರಿಪ್‍ಗಳಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 182 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿದ್ದು, ಪ್ರತಿ ಕೊಳವೆಬಾವಿಗೆ ಮಾಸಿಕ 16 ಸಾವಿರ ರೂ.ಗಳಿಂದ 18 ಸಾವಿರ ರೂ.ಗಳವರೆಗೆ ಬಾಡಿಗೆ ಹಣ ಪಾವತಿಸಿ ನೀರು ಪಡೆಯಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಪ್ರತಿ ವ್ಯಕ್ತಿಗೆ 40 ಲೀಟರ್‍ನಂತೆ ಪ್ರತಿನಿತ್ಯ ನೀರು ಪೂರೈಕೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಆರ್.ಓ. ಪ್ಲಾಂಟ್‍ಗಳ ಕಾರ್ಯನಿರ್ವಹಣೆಯ ಬಗ್ಗೆ ಪ್ರತಿನಿತ್ಯ ಇಂಜಿನಿಯರ್‍ಗಳು ಪರಿಶೀಲನೆ ನಡೆಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು ಮತ್ತು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿರುವ ಎಲ್ಲಾ ಆರ್.ಓ. ಪ್ಲಾಂಟ್‍ಗಳನ್ನು ಸುಸ್ಥಿತಿಯಲ್ಲಿಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ 7,08,175(ದನ ಮತ್ತು ಎಮ್ಮೆ) ಜಾನುವಾರುಗಳಿದ್ದು, ರೈತರ ದಾಸ್ತಾನಿನಲ್ಲಿ 2,64,519 ಟನ್ ಒಣಮೇವು ಲಭ್ಯವಿದೆ. ಲಭ್ಯವಿರುವ ಮೇವು ಇನ್ನೂ 11 ವಾರಗಳಿಗೆ ಸಾಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಬರಪೀಡಿತ ಜಿಲ್ಲೆಯೆಂದು ಘೋಷಣೆಯಾಗುವ ಮುನ್ನವೇ ರೈತರಿಗೆ ಮೇವಿನ ಕಿರು-ಪೊಟ್ಟಣಗಳನ್ನು ವಿತರಿಸಲಾಗಿತ್ತು. ಇದರಿಂದ 7,35,237 ಟನ್‍ಗಳಷ್ಟು ಹಸಿರು ಮೇವು ಉತ್ಪಾದನೆಯಾಗಿದೆ. ಪ್ರತಿ ವಾರ ಜಿಲ್ಲೆಯಲ್ಲಿ ಮೇವು ಲಭ್ಯತೆಯ ಬಗ್ಗೆ ಅಂದಾಜಿಸಿ ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 21 ಮೇವು ಬ್ಯಾಂಕ್‍ಗಳನ್ನು ಪ್ರಾರಂಭಿಸಿ ಮೇವನ್ನು ವಿತರಿಸಲಾಗುತ್ತಿದೆ ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ|| ಪ್ರಕಾಶ್ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯರುವ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೂ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು. ಕುಡಿಯುವ ನೀರಿಗೆ ಸಮಸ್ಯೆ ಉಂಟಾದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ನೀರು ಪೂರೈಸಬೇಕು. ಯಾವುದೇ ಅನುಮತಿಗಾಗಿ ಕಾಯಬಾರದು. ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬರದ ಸಮಸ್ಯೆಗಳ ಬಗ್ಗೆ ದೂರುಗಳನ್ನು ಸಲ್ಲಿಸಲು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಸಹಾಯ ವಾಣಿಯ ನೋಡಲ್ ಅಧಿಕಾರಿಗಳಾಗಿರುತ್ತಾರೆ. ಈ ಸಹಾಯವಾಣಿ ಮೂಲಕ ನಿಯಂತ್ರಣಾ ಕೊಠಡಿಗೆ ಬರುವ ದೂರುಗಳ ಬಗ್ಗೆ ಪ್ರತ್ಯೇಕ ವಹಿಗಳನ್ನು ನಿರ್ವಹಿಸಬೇಕು. ಈ ವಹಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದ ಕಚೇರಿಗೆ ತೆರಳಿ ಬರ ಪರಿಹಾರ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು 2 ಪ್ರತ್ಯೇಕ ಪ್ರವಾಸ ಡೈರಿಗಳನ್ನು ನಿರ್ವಹಿಸಬೇಕು. ಈ ಡೈರಿಗಳನ್ನು ಮುಂದಿನ ಸಭೆಗಳಲ್ಲಿ ಪರಿಶೀಲನೆಗೆ ಹಾಜರುಪಡಿಸಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲೆಯ ಜನರು ಕೆಲಸವಿಲ್ಲದೆ ಗೂಳೆ ಹೋಗುವುದನ್ನು ತಪ್ಪಿಸಲು, ನರೇಗಾ ಯೋಜನೆಯಡಿ ಕೆಲಸವನ್ನು ನೀಡಬೇಕು. ಕಳೆದ 2018-19ನೇ ಸಾಲಿನಲ್ಲಿ ಜಿಲ್ಲೆಗೆ ನೀಡಿದ್ದ 50 ಲಕ್ಷ ಮಾನವ ದಿನಗಳಿಗೆ ಎದುರಾಗಿ 51 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.102ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 206 ಕೋಟಿ ರೂ.ಗಳಷ್ಟು ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ಈ ಪೈಕಿ 80 ಕೋಟಿ ರೂ.ಗಳಷ್ಟು ಮಾತ್ರ ಬಿಡುಗಡೆಯಾಗಬೇಕಿದೆ. ಇದರಲ್ಲಿ ಕೂಲಿ ಹಣ 30 ಕೋಟಿ ರೂ.ಗಳನ್ನು ಇನ್ನೆರಡು ದಿನಗಳಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ 3820 ಕೋಟಿ ರೂ. ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಈವರೆಗೂ ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ. ಆದರೂ ರಾಜ್ಯ ಸರ್ಕಾರ ನರೇಗಾ ಯೋಜನೆಗೆ 1200 ಕೋಟಿ ರೂ.ಗಳನ್ನು ಎಲ್ಲ ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದರು.
ಬರ ನಿರ್ವಹಣೆಗೆ ಸಿಆರ್‍ಎಫ್ ಟಾಸ್ಕ್ ಫೋರ್ಸ್ ಮತ್ತಿತರ ಕಾರ್ಯಕ್ರಮದಡಿ ಒಟ್ಟು 45 ಕೋಟಿ ರೂ.ಗಳನ್ನು ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ 13.40 ಕೋಟಿ ರೂ. ಹಣವನ್ನು ಬರಪರಿಹಾರ ಕಾಮಗಾರಿಗೆ ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದ ಮೇವು ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ 94 ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆ ನಡೆಯುತ್ತಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಪಾಲಿಕೆ ಆಯುಕ್ತ ಟಿ. ಭೂಬಾಲನ್, ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.