ತಿಪಟೂರು :
ತಾಲ್ಲೂಕು ಆಡಳಿತ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಲ್ಲಿನ ಶಾಸಕರು ಬಿಜೆಪಿ ಕಾರ್ಯಕರ್ತರಿಗೆ ಹಾಗೂ ತಮ್ಮ ಹಿಂಬಾಲಕರಿಗೆ ನೀಡಿದ್ದು, ಪ್ರಶಸ್ತಿ ಆಯ್ಕೆಯಲ್ಲಿ ಸರಿಯಾದ ಮಾನದಂಡ ಬಳಕೆಯಾಗಿಲ್ಲ ಎಂದು ಜಯ ಕರ್ನಾಟಕ ಸಂಘಟನೆ ತಾ. ಅಧ್ಯಕ್ಷ ಬಿ.ಟಿ. ಕುಮಾರ್ ಗಂಭೀರ ಆರೋಪ ಮಾಡಿದರು.
ಈ ಸಂಬಂಧ ನಗರದಲ್ಲಿ ಗುರುವಾರ ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿ ಎಲ್ಲಾ ಕ್ಷೇತ್ರಗಳನ್ನು ಗುರುತಿಸಿ ತಾಲ್ಲೂಕು ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಆದರೆ ಈ ಬಾರಿ ಕ್ರೀಡೆ, ಪತ್ರಿಕೋದ್ಯಮ, ವೈದ್ಯಕೀಯ, ಕನ್ನಡಪರ ಹೋರಾಟಗಾರ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಬಿಟ್ಟು ಕೇವಲ ಜಾತಿ ರಾಜಕಾರಣದ ಆಧಾರದ ಮೇಲೆ ತಾ. ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಆಯ್ಕೆ ಸಂದರ್ಭದಲ್ಲಿ ಶಾಸಕರು ತಮಗೆ ಬೇಕಾದವರ ಹೆಸರನ್ನು ಸೇರಿಸಿ ಪ್ರಶಸ್ತಿ ನೀಡಲು ಸಹಕರಿಸಿದ್ದಾರೆ. ಪ್ರಶಸ್ತಿ ಪಡೆದವರು ಬಹುತೇಕ ಶಾಸಕರ ಹಿಂಬಾಲಕರಾಗಿದ್ದಾರೆ. ಶಾಸಕರೇ ಸಾಧನೆ ಮಾಡದ ಹಾಗೂ ಜನರ ನಡುವೆ ಗುರ್ತಿಸಿಕೊಳ್ಳದ ವ್ಯಕ್ತಿಗಳಿಗೆ ಹೇಗೆ ಪ್ರಶಸ್ತಿ ನೀಡಿದ್ದೀರಿ?. ಇಂತಹ ಪ್ರಶಸ್ತಿಗಳನ್ನು ನೀಡುವಾಗ ನಿಮ್ಮ ಜಾತಿ ರಾಜಕೀಯವನ್ನು ಬೆರಸಬೇಡಿ. ತಾಲ್ಲೂಕಿನಲ್ಲಿ ಸಾಕಷ್ಟು ಮಂದಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸೇವೆ ಮಾಡಿದವರಿದ್ದಾರೆ. ಅವರನ್ನೆಲ್ಲ ಬಿಟ್ಟು ನಿಮಗೆ ಬೇಕಾದವರನ್ನು ಆಯ್ಕೆ ಮಾಡುವುದಕ್ಕೆ ಇದು ನಿಮ್ಮ ಪಕ್ಷದ ಕಾರ್ಯಕ್ರಮವಲ್ಲ. ಪ್ರಶಸ್ತಿಯ ಸಂಖ್ಯೆ ಕೂಡ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ ಎಂದು ಪ್ರಶ್ನಿಸಿದರು. ಈ ಬಾರಿಯ ಆಯ್ಕೆಯ ಮಾನದಂಡ ಸರಿಯಾಗಿಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿಯುತ್ತದೆ. ನಮ್ಮ ಸಂಘಟನೆಯು ಕನ್ನಡ ರಾಜ್ಯೋತ್ಸವದಂದು ಕಪ್ಪು ಬಾವುಟ ಪ್ರದರ್ಶನ ಮಾಡಿ ಶಾಸಕರ ಆಯ್ಕೆ ಪಟ್ಟಿ ವಿರುದ್ದ ಪ್ರತಿಭಟನೆ ಮಾಡಬೇಕೆಂಬ ತೀರ್ಮಾನ ಮಾಡಿದ್ದೇವು. ಆದರೆ ಕನ್ನಡಾಂಬೆಗೆ ಅಗೌರವ ತೋರಿಸಬಾರದೆಂಬ ಉದ್ದೇಶಕ್ಕಾಗಿ ಪ್ರತಿಭಟನೆ ಮಾಡಲಿಲ್ಲ. ಆಯ್ಕೆ ಮಾಡಿರುವ ಸಾಧಕರ ಸಾಧನೆಯ ವಿವರವನ್ನು ಶಾಸಕರು ಮತ್ತು ತಾಲ್ಲೂಕು ಆಡಳಿತ ಬಹಿರಂಗ ಪಡಿಸಲಿ. ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಛಲವಾದಿ ಮಹಾಸಭಾದ ತಾ. ಅಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ, ತಾಲ್ಲೂಕಿನಲ್ಲಿ ಅನೇಕರು ಸಾಧಕರು ಇದ್ದರೂ ಕೂಡ ಶಾಸಕರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದು, ತಾಲ್ಲೂಕಿಗೆ ಮಾಡಿದ ಅವಮಾನ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಂಚಿತ ಕ್ರೀಡಾಪಟು ಜಗದೀಶ್, ಸಂಘಟನೆಯ ಪದಾಧಿಕಾರಿಗಳಾದ ಮೋಹನ್‍ಬಾಬು, ಖಲಂದರ್, ಕಾಂತರಾಜ್, ದೇವರಾಜು, ರಾಜೇಶ್, ಸೋಮಶೇಖರ್, ಕುಮಾರಯ್ಯ, ಯೋಗೀಶ್, ರಾಕೇಶ್, ಪ್ರಶಾಂತ್ ಮತ್ತಿತರರಿದ್ದರು.