ತುಮಕೂರು:
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಗಳ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶೇ. 100ರಷ್ಟು ಪಾಸು ಆಗುವ ರೀತಿಯಲ್ಲಿ ಕಲಿಕಾ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್ ಅವರು ನಿಲಯಪಾಲಕರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವ್ಯಾಪ್ತಿಯ ವಸತಿಯ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ನಿಲಯಾರ್ಥಿಗಳ ಹತ್ತನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಸತಿ ನಿಲಯಗಳಲ್ಲಿರುವ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವ್ಯಾಸಂಗ ಮಾಡುವ ಎಲ್ಲಾ ನಿಲಯಾರ್ಥಿಗಳು ಪಾಸು ಆಗಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶೇ. 100ರಷ್ಟು ಫಲಿತಾಂಶ ಬರಬೇಕು. ಆ ನಿಟ್ಟಿನಲ್ಲಿ ವಿಸ್ತರಣಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ವಾರ್ಡನ್‍ಗಳು ಗಮನಹರಿಸಬೇಕು ಎಂದರು.
ವಸತಿ ನಿಲಯದಲ್ಲಿರುವ ನಿಲಯಾರ್ಥಿ ಯಾವ ಪಠ್ಯ ವಿಷಯದಲ್ಲಿ ಹಿಂದುಳಿದಿರುತ್ತಾರೆ. ಆ ವಿಷಯಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಅಲ್ಲದೆ ಬಹುತೇಕ ವಸತಿ ನಿಲಯಗಳಲ್ಲಿರುವ ನಿಲಯಪಾಲಕರು ಸ್ನಾತಕೋತ್ತರ ಪದವೀಧರರು ಮತ್ತು ಬಿಇಡ್ ಪದವಿಯನ್ನು ಪಡೆದಿರುವವರು ಆಗಿರುತ್ತಾರೆ. ಇಂತಹ ನಿಲಯ ಪಾಲಕರು ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ, ವಿಷಯ ಬೋಧನೆ ಮಾಡಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಸುಬ್ರನಾಯ್ಕ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಜಾವೇದ್ ಕರಂಗಿ ಸೇರಿದಂತೆ ವಿವಿದ ವಸತಿ ನಿಲಯಗಳ ನಿಲಯಪಾಲಕರು, ಮೇಲ್ವಿಚಾರಕರು, ವಿಸ್ತರಣಾಧಿಕಾರಿಗಳು ಭಾಗವಹಿಸಿದ್ದರು.