ತುಮಕೂರು:
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಸಂಘಟನೆ, ಎಐಟಿಯುಸಿ ನೇತೃತ್ವದಲ್ಲಿ ನಗರದ ಕೇಂದ್ರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು.
ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ 6ನೇ ಸಮ್ಮೇಳನದ ತೀರ್ಮಾನದಂತೆ ರಾಜ್ಯ ಸರ್ಕಾರ ಕೆಎಸ್‍ಆರ್‍ಟಿಸಿ ಬೇಡಿಕೆಗಳನ್ನು ಈಡೇರಿಸಬೇಕು, ಕಾರ್ಮಿಕರ ಸಮಸ್ಯೆಗಳ ಬಗ್ಗೆ, ವೈದ್ಯಕೀಯ ಸೌಲಭ್ಯ, ಸಂಘದ ಮಾನ್ಯತಾ ಚುನಾವಣೆ ಹಾಗೂ ಕೆಎಸ್‍ಆರ್‍ಟಿಸಿ ನಿಗಮಗಳನ್ನು ಒಂದು ಮಾಡುವ ಮೂಲಕ ಕೆಎಸ್‍ಆರ್‍ಟಿಸಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತಪಡಿಸಲಾಯಿತು.
ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಜಿಲ್ಲಾ ಗೌರವಾಧ್ಯಕ್ಷ ಗಿರೀಶ್ ಮಾತನಾಡಿ, ಕೆಎಸ್‍ಆರ್‍ಟಿಸಿಯನ್ನು ನಾಲ್ಕು ವಿಭಾಗಗಳಾಗಿ ವಿಭಜಿಸಿದ ನಂತರ ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದ್ದು, ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕರಿಗಾಗಲಿ, ಪ್ರಯಾಣಿಕರಿಗಾಗಲಿ ಇದರಿಂದ ಯಾವುದೇ ಉಪಯೋಗವಾಗಿಲ್ಲ, ಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ಕಾರ್ಮಿಕರು ಹೆಚ್ಚುವರಿ ಕೆಲಸ ಮಾಡಬೇಕಿದೆ. ಇದು ಸರ್ಕಾರದ ಅವೈಜ್ಞಾನಿಕ ನೀತಿಯೇ ಕಾರಣ ಎಂದು ಆರೋಪಿಸಿದರು.
ನಾಲ್ಕು ನಿಗಮಗಳ ಹಣಕಾಸಿನ ಪರಿಸ್ಥಿತಿ ಶೋಚನೀಯವಾಗಿದ್ದು, ಕೆಎಸ್‍ಆರ್‍ಟಿಸಿಗೆ ಪುನಶ್ಚೇತನ ಕಲ್ಪಿಸಲು ಮೋಟಾರ್ ವೆಹಿಕಲ್ ತೆರಿಗೆ ರಿಯಾಯಿತಿ ನೀಡುವುದರ ಜೊತೆಗೆ ಡಿಸೇಲ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು, ಹೆದ್ದಾರಿಯ ಟೋಲ್ ಶುಲ್ಕವನ್ನು ರದ್ದುಗೊಳಿಸಬೇಕು, ಸರ್ಕಾರ ಪ್ರತಿ ವರ್ಷ ಒಂದು ಸಾವಿರ ಕೋಟಿ ಅನುದಾನ ನೀಡಬೇಕು, ಸಾಮಾಜಿಕ ಹೊಣೆಗಾರಿಕೆ ಬಾಬ್ತು ನೀಡುವುದರ ಜೊತೆಗೆ ನೌಕರರ ವೇತನವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಹತ್ತಾರು ವರ್ಷಗಳಿಂದ ಸಾರಿಗೆ ನಿಗಮಗಳಲ್ಲಿ ಕಾರ್ಯಸ್ಥಳದಲ್ಲಿ ಹಿಂಸೆ, ಕಿರುಕುಳಗಳನ್ನು ತಾಳಲಾರದೇ ಹತಾಶರಾಗಿ ಆತ್ಮಹತ್ಯೆಗೆ ಅನೇಕ ನೌಕರರು ಶರಣಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರ ಮೇಲೆ ಶಿಸ್ತುಕ್ರಮದ ಹೆಸರಿನಲ್ಲಿ ಮತ್ತಷ್ಟು ಹಿಂಸೆ ನೀಡಲಾಗುತ್ತಿದೆ. ಆಡಳಿತ ವರ್ಗಗಳು ಇಂತಹ ಕೃತ್ಯಗಳನ್ನು ಇಲ್ಲಿಸಬೇಕು, ಕಿರುಕುಳ ಪ್ರಕರಣ ದಾಖಲಾದ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು, ಆತ್ಮಹತ್ಯೆಗೆ ಶರಣಾದ ನೌಕರರಿಗೆ 25 ಲಕ್ಷ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.
ನಾಲ್ಕು ಸಾರಿಗೆ ನಿಗಮಗಳಲ್ಲಿ ಒಂದು ಲಕ್ಷ ಹದಿನೈದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಾರಿಗೆ ನಿಗಮಗಳಲ್ಲಿ ಕಾರ್ಮಿಕರಿಗೆ ಒದಗಿಸಿರುವ ವೈದ್ಯಕೀಯ ವ್ಯವಸ್ಥೆಯು ಅಸಮರ್ಪಕವಾಗಿದ್ದು, ಒತ್ತಡದಲ್ಲಿ ಕೆಲಸ ಮಾಡುವ ನೌಕರರಿಗೆ ಸಹಜವಾಗಿ ಕಾಯಿಲೆಗೆ ಒಳಗಾಗುತ್ತಿದ್ದು,ಕೈಗಾರಿಕಾ ನ್ಯಾಯಾಧಿಕರಣದ ಅನ್ವಯ ವೈದ್ಯಕೀಯ ಖರ್ಚುಗಳನ್ನು ಆಡಳಿತ ಮಂಡಳಿಗಳೇ ನೀಡಬೇಕು, ನೌಕರರು ಹಾಗೂ ಅವರ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಮಗ್ರ ಯೋಜನೆಯನ್ನು ರೂಪಿಸುವಂತೆ ಒತ್ತಾಯಿಸಿದರು.
ಮಧುಗಿರಿ ಡಿಪೋ ಎಐಟಿಯುಸಿ ಕಾರ್ಯದರ್ಶಿ ಬಿ.ಟಿ.ನಾಗರಾಜು ಮಾತನಾಡಿ ಮಧುಗಿರಿ ಡಿಪೋನಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ನಿಗದಿತ ರಜೆಗಳನ್ನು ನೀಡುತ್ತಿಲ್ಲ, ಡಿಪೋ ಮ್ಯಾನೇಜರ್ ನೌಕರರಿಗೆ ಡಬಲ್ ಡ್ಯೂಟಿ ಮಾಡಿಸುವ ಮೂಲಕ ಅಧಿಕ ಕಾರ್ಯ ಒತ್ತಡವನ್ನು ಹಾಕುತ್ತಿದ್ದು, ಕೆಲಸಕ್ಕೆ ತಕ್ಕಂತೆ ಸಂಬಳವನ್ನು ನೀಡದೇ ತಾರತಮ್ಯವನ್ನು ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೂ ಸ್ಪಂದಿಸುತ್ತಿಲ್ಲ, ಕಾರ್ಮಿಕರ ಮುಖಂಡರನ್ನು ಗುರಿಯಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ರಾಜಗೋಪಾಲ್, ತುರುವೇಕೆರೆ ಅನಂತ್, ತಿಪಟೂರು ನಿರ್ವಾಹಕ ಮಹದೇವ್, ಕುಣಿಗಲ್ ಬೈರಪ್ಪ, ಕೆ.ಎಚ್.ದೇವರಾಜು, ಘಟಕ ಅಧ್ಯಕ್ಷ ಅಪ್ಸರ್‍ಪಾಷ, ಅಬ್ದುಲ್ ವಾಜೀದ್, ಈಶ್ವರಚಾರಿ, ಕೆ.ಎಂ.ನಾಗರಾಜು, ಮಧುಗಿರಿ ಘಟಕದ ಉಪಾಧ್ಯಕ್ಷ ಭೀಮಣ್ಣ ಸೇರಿದಂತೆ ಇತರರಿದ್ದರು.