ತುಮಕೂರು:
ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಕರ್ನಾಟಕದ ವಿವಿಗಳು ಕಾಣಿಸಿಕೊಳ್ಳಬೇಕಾದರೆ ಶೈಕ್ಷಣಿಕ ಪ್ರಗತಿಯೊಂದಿಗೆ ಮೂಲಭೂತ ಸೌಕರ್ಯಗಳನ್ನೂ ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ಎ. ಕೋರಿ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ರೂಸಾ ನೆರವಿನೊಂದಿದೆ ನವೀಕರಿಸಲಾದ ಸಭಾಂಗಣವನ್ನು ಹಾಗೂ ನ್ಯಾಕ್ ಮಾನ್ಯತೆ ಮಾನದಂಡಗಳ ಕುರಿತ ಕಾರ್ಯಾಗಾರವನ್ನು ಬುಧವಾದ ಉದ್ಘಾಟಿಸಿದ ಅವರು, ವಿಶ್ವವಿದ್ಯಾನಿಲಯಗಳು ಸರ್ಕಾರದಿಂದ ದೊರೆಯುವ ಹಣಕಾಸು ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.
ರಾಷ್ಟ್ರಮಟ್ಟದ 100 ಟಾಪ್ ವಿವಿಗಳ ಸಾಲಿನಲ್ಲಿ ಅಥವಾ ಪ್ರಪಂಚದ 500 ಟಾಪ್ ವಿವಿಗಳ ಸಾಲಿನಲ್ಲಿ ರಾಜ್ಯದ ವಿವಿಗಳು ಬರುತ್ತಿಲ್ಲ. ಅಂತರ ರಾಷ್ಟ್ರೀಯ ಮಾನದಂಡಗಳ ಪ್ರಕಾರ ನಮ್ಮಲ್ಲಿ ಯೋಜನೆಗಳು ಜಾರಿಗೆ ಬರದಿರುವುದೇ ಇದಕ್ಕೆ ಕಾರಣ ಎಂದರು.
ಕೇಂದ್ರ ಅನುದಾನಗಳನ್ನು ಪಡೆಯುವಲ್ಲಿ ಮತ್ತು ಬಳಸಿಕೊಳ್ಳುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಾಷ್ಟ್ರೀಯ ಉಚ್ಚತರ ಶಿಕ್ಷಣ ಅಭಿಯಾನ (ರೂಸಾ) ಯೋಜನೆಯ ಅನುದಾನಗಳನ್ನು ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನ್ಯಾಯಯುತವಾಗಿಯೂ ಪರಿಣಾಮಕಾರಿಯಾಗಿಯೂ ಬಳಸಿಕೊಳ್ಳಲಾಗಿದೆ ಎಂದರು.
ರೂಸಾ ಎರಡನೇ ಹಂತ ಪೂರ್ಣಗೊಳ್ಳುತ್ತಿದ್ದು, ಮೂರನೇ ಹಂತದ ಯೋಜನೆಯು ಸದ್ಯದಲ್ಲೇ ಆರಂಭವಾಗಲಿದೆ. ಈ ಬಾರಿ ನ್ಯಾಕ್ ಮಾನ್ಯತೆ ಪಡೆಯದ ಕಾಲೇಜುಗಳೂ ಹಣಕಾಸು ನೆರವನ್ನು ಪಡೆಯಲಿವೆ. ಆ ಮೂಲಕ ಅಂತಹ ಕಾಲೇಜುಗಳ ಮೂಲಸೌಕರ್ಯಗಳ ವೃದ್ಧಿಗೆ ಪ್ರಯತ್ನಿಸಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ತುಮಕೂರು ವಿವಿ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ, ಅಮೇರಿಕ ಹಾಗೂ ಚೀನಾದ ಬಳಿಕ ಭಾರತವೇ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅತಿದೊಡ್ಡ ದೇಶವಾಗಿದೆ. ಆದರೆ ಅಂತಾರಾಷ್ಟ್ರೀಯ ಗುಣಮಟ್ಟದ ವಿವಿಗಳನ್ನು ರೂಪಿಸುವಲ್ಲಿ ನಾವು ಹಿಂದುಳಿದಿದ್ದೇವೆ ಎಂದರು.
ವಿಶ್ವವಿದ್ಯಾನಿಲಯದಿಂದ ಹೊರಬರುವ ವಿದ್ಯಾರ್ಥಿಗಳ ಪೈಕಿ ಶೇ. 5 ಮಂದಿ ಮಾತ್ರ ಉದ್ಯೋಗಕ್ಕೆ ಅಗತ್ಯವಿರುವ ಕೌಶಲಗಳನ್ನು ಹೊಂದಿದ್ದಾರೆ ಎಂಬ ವರದಿಗಳಿವೆ. ಈ ಕೊರತೆಯನ್ನು ನಿವಾರಿಸಿ ಯುವ ಪದವೀಧರರು ವ್ಯಾಸಂಗ ಮಾಡುವ, ಬದುಕುವ ಹಾಗೂ ವಿವಿಧ ವೃತ್ತಿಗಳನ್ನು ಕೈಗೊಳ್ಳುವ ಕೌಶಲಗಳನ್ನು ಬೆಳೆಸಬೇಕಿದೆ ಎಂದರು.
ನ್ಯಾಕ್ ಉಪ ಸಲಹೆಗಾರ ಡಾ. ದೇವೇಂದರ್ ಕೌಡೆ, ತುಮಕೂರು ವಿವಿ ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕ ಪ್ರೊ. ಕೆ. ಜಿ. ಪರಶುರಾಮ, ರೂಸಾ ನೋಡಲ್ ಅಧಿಕಾರಿ ಡಾ. ಎಚ್. ರಾಜೇಂದ್ರ ಬಾಬುಉಪಸ್ಥಿತರಿದ್ದರು.