ತುಮಕೂರು:
ತಂಬಾಕು ಸೇವನೆ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಕಠಿಣ ಕಾನೂನು ಜಾರಿಯಾದಾಗ ಮಾತ್ರ ತಂಬಾಕು ಉತ್ಪನ್ನಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಶಾಸಕ ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್, ಶಿಕ್ಷಣ, ಮಹಾನಗರ ಪಾಲಿಕೆ, ಸಾರಿಗೆ, ಕೆ.ಎಸ್.ಆರ್.ಟಿ.ಸಿ., ಐ.ಎಂ.ಎ., ಉಚಿತ ಕಾನೂನು ಸೇವಾ ಪ್ರಾಧಿಕಾರ, ತುಮಕೂರು ಹಾಲು ಒಕ್ಕೂಟ, ಫುಡ್ ಪಾರ್ಕ್, ವಿವಿಧ ನರ್ಸಿಂಗ್ ಕಾಲೇಜುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿಂದು “ವಿಶ್ವ ತಂಬಾಕು ರಹಿತ ದಿನಾಚರಣೆ ಹಾಗೂ ತಂಬಾಕು ಮುಕ್ತ ತುಮಕೂರು ನಗರ ಘೋಷಣಾ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ತಂಬಾಕು ಸೇವನೆಯನ್ನು ಚಟವಾಗಿ ರೂಢಿಸಿಕೊಂಡಿದ್ದು, ತಂಬಾಕು ಉತ್ಪನ್ನಗಳಾದ ಧೂಮಪಾನ, ಗುಟ್ಕಾ ಸೇವನೆಯಿಂದ ತಮ್ಮ ಅತ್ಯಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಶೇಕಡ 100ರಷ್ಟು ತಂಬಾಕು ನಿರ್ಮೂಲನೆ ಮಾಡಲು ಸಾದ್ಯವಾಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಮೇ 31 ರಂದು ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧನೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ ಎಂದರಲ್ಲದೆ ತುಮಕೂರನ್ನು ರಾಜ್ಯದ ಮೊದಲ ತಂಬಾಕು ರಹಿತ ಜಿಲ್ಲೆ ಎಂದು ಘೋಷಣೆ ಮಾಡುವುದರಲ್ಲಿ ತಮಗೆ ಹೆಮ್ಮೆಯಾಗುತ್ತಿದೆ. ತಂಬಾಕು ಸೇವನೆಯಿಂದ ಆಗುವಂತಹ ಬಾಯಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶಕ್ಕೆ ಸಂಬಧಿಸಿದ ಖಾಯಿಲೆಗಳು ಪ್ರಾಣಹಾನಿ, ಆರೋಗ್ಯ ಹಾನಿಯುಂಟಾಗುತ್ತದೆ. ತಂಬಾಕು ಉತ್ಪನ್ನಗಳನ್ನು ಸರ್ಕಾರಿ/ ಖಾಸಗಿ ಬಸ್ ನಿಲ್ದಾಣಗಳು, ಶಾಲಾ-ಕಾಲೇಜು ಆವರಣ, ದೇವಾಲಯಗಳು, ಸಿನಿಮಾ ಥಿಯೇಟರ್, ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಉಪಯೋಗ ಮಾಡಬಾರದು ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದು ಅವರು ತಿಳಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ಜಿ. ಕುಲಕರ್ಣಿ ಮಾತನಾಡಿ ಭಾರತದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಧೂಮರಹಿತ ತಂಬಾಕನ್ನು ಶೇ.10.7ರಷ್ಟು ಉಪಯೋಗ ಮಾಡುತ್ತಿದ್ದು, ಈ ಪೈಕಿ ಯುವಕರು ವಾಸದ ಸ್ಥಳದಲ್ಲಿ ಪರೋಕ್ಷವಾಗಿ ಧೂಮಪಾನ ಸೇವನೆ ಮಾಡುತ್ತಿದ್ದಾರೆ. ತಂಬಾಕುಯುಕ್ತ ಉತ್ಪನ್ನಗಳು 4 ಸಾವಿರ ವಿಷಯುಕ್ತ ರಾಸಾಯನಿಕ ವಸ್ತುಗಳಿಂದ ಕೂಡಿರುತ್ತದೆ. ಇದರಿಂದ ಪುರುಷರಲ್ಲಿ ಶೇ.50ರಷ್ಟು ಹಾಗೂ ಮಹಿಳೆಯರಲ್ಲಿ ಶೇ. 25ರಷ್ಟಯ ಕ್ಯಾನ್ಸರ್ ಕಂಡುಬರುವ ಸಾಧ್ಯತೆಯಿರುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ 9.30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಜಾಥ ಕಾರ್ಯಕ್ರಮಕ್ಕೆ ಜಿಲ್ಲಾ ಹೆಚ್ಚುವರಿ ನ್ಯಾಯಧೀಶರಾದ ಬಿ. ದಶರಥ ಚಾಲನೆ ನೀಡಿದರು.
ತಂಬಾಕು ನಿಯಂತ್ರಿಸಲು ಸಹಕರಿಸಿದ ನಗರದ ಪೊಲೀಸ್ ಠಾಣೆ ಪಿ.ಎಸ್.ಐ ರಾಘವೇಂದ್ರ, ಜಿಲ್ಲಾ ಸಂಚಾರಿ ನಿಯಂತ್ರಣಾಧಿಕಾರಿ ಫ್ರಕೃದ್ದೀನ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಲಲಿತಾ ಕುಮಾರಿ, ತಿಲಕ್ ಪಾರ್ಕ್ ಪೊಲೀಸ್ ಠಾಣೆ ಎ.ಎಸ್.ಐ ಶೋಭ, ಮಹಾನಗರ ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ|| ನಾಗೇಶ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ ಬಿ.ಆರ್, ಈಶ್ವರಿ ವಿಶ್ವವಿದ್ಯಾಲಯದ ಸುಜಾತ ಬ್ರಹ್ಮಕುಮಾರಿ, ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆಯ ಸಿಬ್ಬಂದಿಗಳು, ಮತ್ತಿತರರು ಹಾಜರಿದ್ದರು.