ತುಮಕೂರು:
ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಭಿಮಾನಿಗಳು ಗುರುವಾರ ಸಂಭ್ರಮಾಚರಿಸಿದರು.
ನಗರದ ಟೌನ್‌ಹಾಲ್ ವೃತ್ತದಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಿ, ಸಾರ್ವಜನಿಕರು ಮೋದಿ ಪ್ರಮಾಣ ವಚನ ಸ್ವೀಕರಿಸುವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಬಿಜೆಪಿ ಅವಕಾಶ ಮಾಡಿಕೊಟ್ಟಿತ್ತು. ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಇಲ್ಲಿ ಕಾರ್ಯಕ್ರಮ ವೀಕ್ಷಿಸಿದರು. ಇದೇ ವೇಳೆ ಕಾರ್ಯಕರ್ತರು ಟೌನ್‌ಹಾಲ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಹಬ್ಬದಂತೆ ಸಂಭ್ರಮಿಸಿದರು. ಗುಬ್ಬಿ ತಾಲೂಕಿನ ಎಂ.ಎನ್. ಕೋಟೆಯ ಹೊಸಕೆರೆಯಲ್ಲಿ ಹಾಗೂ ತುಮಕೂರು ನಗರದ ಹಲವೆಡೆ ಮೋದಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.
ಟೀ ಹಂಚಿದ ಅಭಿಮಾನಿ:
ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಲಕ್ಷ್ಮಿವೆಂಕಟೇಶ್ವರ ಟೀ ಸ್ಟಾಲ್ ಮಾಲೀಕ ರಾಜಣ್ಣ ಅವರು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾದ ಕ್ಷಣವನ್ನು ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದರು. ಸಾರ್ವಜನಿಕರಿಗೆ ಉಚಿತವಾಗಿ ಟೀ ಮತ್ತು ಬಿಸ್ಕತ್ತು ನೀಡಿ ಮೋದಿ ಪ್ರಮಾಣವಚನ ಕ್ಷಣವನ್ನು ಆನಂದಿಸಿದರು.
ಲಡ್ಡು ಹಂಚಿದ ಅಭಿಮಾನಿ:
ಸಿರಾ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸಮೀಪದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ಕಾರ್ಯಕರ್ತರು 30 ಸಾವಿರ ಲಾಡು ಹಂಚಿ ಪ್ರಧಾನಿ ಮೋದಿಯವರ ಪ್ರಮಾಣ ವಚನ ಕ್ಷಣವನ್ನು ಸಂಭ್ರಮಿಸಿದರು.