ತುಮಕೂರು:
ಅಕ್ರಮವಾಗಿ ಬೇಡಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವ 178 ಮಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಯ ಕಛೇರಿಯಲ್ಲಿ ನಡೆದ ಪ.ಜಾತಿ/ಪ.ಪಂಗಡ ಸಮುದಾಯಗಳ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಗೆ ಸೇರಿದ ಬೇಡಜಂಗಮ ಜಾತಿ ಪ್ರಮಾಣ ಪತ್ರವನ್ನು ಜಿಲ್ಲೆಯಲ್ಲಿ 178 ಮಂದಿ ಅಕ್ರಮವಾಗಿ ಪಡೆದು ಕೊಂಡಿದ್ದಾರೆ. ಇಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಲ್ಲದೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನಿಯಮ ಅನುಸಾರ ಕ್ರಮ ಕೈಗೊಳ್ಳಬೇಕು. ರದ್ದು ಮಾಡಿರುವ ಜಾತಿ ಪ್ರಮಾಣ ಪತ್ರ ಹೊಂದಿರುವರು. ಕೆಲವರು ಕೋರ್ಟ್ ಮರೆ ಹೋಗಿದ್ದಾರೆ. ಈ ಪ್ರಕರಣಗಳ ಬಗ್ಗೆಯೂ ಸೂಕ್ತ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ನಿರ್ದೇಶನ ನೀಡಿದರು. ಬೇಡಜಂಗಮ ಜಾತಿ ಪ್ರಮಾಣ ಪತ್ರಗಳನ್ನು ರದ್ದುಪಡಿಸಿರುವುದಾಗಿ ತಹಶೀಲ್ದಾರ್‍ರವರು ಅನುಪಾಲನಾ ವರದಿ ನೀಡಿದ್ದಾರೆ. ಕೆಲವರು ಇದೇ ಜಾತಿ ಪ್ರಮಾಣ ಆಧಾರದ ಮೇಲೆ ಕೆ.ಐ.ಡಿ.ಬಿ.ಯಿಂದ ಪರಿಹಾರ ಪಡೆದಿದ್ದಾರೆ. ಅಲ್ಲದೆ ಇಬ್ಬರೂ ವ್ಯಕ್ತಿಗಳು ಸರ್ಕಾರಿ ಕೆಲಸಕ್ಕೆ ಸೇರಿದ್ದಾರೆ ಎಂದು ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯ ರಂಗಯ್ಯ ಸಭೆಗೆ ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಎಂ.ಬಿ.ಬಿ.ಎಸ್. ಹಾಗೂ ಬಿ.ಇ.ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆಗೆ 64ಲಕ್ಷ ರೂ. ಮೀಸಲಿರಿಸಿದೆ. ಆದರೆ 64ಲಕ್ಷ ರೂ. ಅನುದಾನದಲ್ಲಿ ತುಮಕೂರು ಮಹಾನಗರಪಾಲಿಕೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜೊತೆ ಇತರೆ ವರ್ಗದವರಿಗೂ ಇದೇ ಅನುದಾನ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಪರಿಶೀಲಿಸುವಂತೆ ರಂಗಯ್ಯಯವರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿರುವ ಅನುದಾನವನ್ನು ಇತರೆ ವರ್ಗಕ್ಕೆ ಬಳಸಿಕೊಳ್ಳಲು ಅವಕಾಶವಿಲ್ಲ. ಈ ಬಗ್ಗೆ ಪಾಲಿಕೆಯ ಆಯುಕ್ತರು, ನಗರ ಯೋಜನಾ ನಿರ್ದೇಶಕರು, ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಂಡ ಈ ಬಗ್ಗೆ ಪರಿಶೀಲಿಸಿ ಮುಂದಿನ 10 ದಿನಗಳೊಳಗೆ ನನಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ತಾಲ್ಲೂಕುವಾರು ಅಂಕಿಅಂಶಗಳನ್ನು ಪೊಲೀಸ್ ಇಲಾಖೆ ಮುಂದಿನ ಸಭೆಯಲ್ಲಿ ಒದಗಿಸಬೇಕು. ಪೊಲೀಸ್ ಠಾಣೆವಾರು ಶಾಂತಿಸಭೆ, ಕುಂದುಕೊರತೆ ಸಭೆ ನಡೆಸಿರುವ ಬಗ್ಗೆ ಮಾಹಿತಿಯನ್ನು ಸಲ್ಲಿಸುವಂತೆ ಪೊಲೀಸ್ ಇಲಾಖೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಶುಭಾ ಕಲ್ಯಾಣ್ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯ ಕುಮಾರ್ ಮಾದರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ: ಜಿ.ಬಿ.ದೇವರಾಜ್, ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ ರಾಜ್‍ಕುಮಾರ್ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಎಸ್.ಸಿ.ಪಿ./ಟಿಎಸ್‍ಪಿ ಯೋಜನೆ ಪ್ರಗತಿ :-
ಕಳೆದ 18-19ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಅನುಷ್ಠಾನದಲ್ಲಿ ಕ್ರಮವಾಗಿ ಶೇ. 97ರಷ್ಟು ಹಾಗೂ ಶೇ. 94ರಷ್ಟು ಪ್ರಗತಿ ಸಾಧಿಸಿದ್ದರು, 19-20ನೇ ಸಾಲಿನಲ್ಲಿ ಎಸ್.ಸಿ.ಪಿ ಹಾಗೂ ಟಿಎಸ್‍ಪಿ ಯೋಜನೆಯ ಅನುಷ್ಠಾನದಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಸೂಚಿಸಿದರು.
ಎಸ್‍ಸಿಪಿ/ಟಿಎಸ್‍ಪಿ ಯೋಜನೆಯ ಅನುಷ್ಠಾನಕ್ಕೆ ಹಣದ ಕೊರತೆ ಇರುವುದಿಲ್ಲ. ಒಂದು ವೇಳೆ ಹಣದ ಕೊರತೆ ಉಂಟಾದರೆ ನನ್ನ ಗಮನಕ್ಕೆ ತನ್ನಿ. ಪಶುಪಾಲನೆ ಹಾಗೂ ಮೀನುಗಾರಿಕೆ ಇಲಾಖೆಗಳು ಶೇ.100ರಷ್ಟು ಪ್ರಗತಿಯನ್ನು ಸಾಧಿಸಿವೆ. ಈ ಬಾರಿಯ ಕ್ರಿಯಾ ಯೋಜನೆ ರೂಪಿಸಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿ ಎಂದು ಅವರು ತಿಳಿಸಿದರು.