ತುರುವೇಕೆರೆ:
ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರನ್ನು ಸೋಲಿಸಿದ ಅಪಕೀರ್ತಿ ತುಮಕೂರು ಜಿಲ್ಲೆಗೆ ಬಂದಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ಮನೆಯ ಬಳಿಯಲ್ಲಿ ಸೋಮವಾರ ತಾಲೂಕು ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಲೋಕಸಭಾ ಹಾಗೂ ಪಟ್ಟಣ ಪಂಚಾಯ್ತಿ ಚುನಾವಣೆಯ ಆತ್ಮಾವಲೋಕನ ಕಾರ್ಯಕರ್ತರ ಸಭೆಯಲ್ಲಿ ಹಾಗೂ ಯುವ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ತಮ್ಮ 68 ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೋಲೆಯಾಗಿದೆ. ಚುನಾವಣೆಯ ಮೌಲ್ಯ ಕುಸಿಯುತ್ತಿದೆ. ಹಣ ಇದ್ದವರು ಗೆಲ್ಲುತ್ತಾರೆ, ಇಲ್ಲದವರು ಸೋಲುತ್ತಿದ್ದಾರೆ ಪ್ರಾಮಾಣಿಕ ಸೇವೆ ಮಾಡುವರಿಗೆ ಅವಕಾಶ ಸಿಗದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ.ದೇವೇಗೌಡರಿಗೆ ತಾಲೂಕಿನಿಂದ ಅಧಿಕ ಮತಗಳನ್ನು ನೀಡಿದ್ದಾರೆ. ಆದರೆ ಇನ್ನು ಹತ್ತು ಸಾವಿರ ಮತಗಳನ್ನು ನಿರೀಕ್ಷಿಸಲಾಗಿತ್ತು. ಹೆಚ್ಚು ಮತ ಬೀಳದೇ ಸೋಲುಂಟಾಯಿತು. ಕಾಂಗ್ರೇಸ್-ಜೆಡಿಎಸ್ ಜೊತೆ ಮೈತ್ರಿಯಿಂದ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಸಾದ್ಯವಾಯಿತು.
ಜೆಡಿಎಸ್-ಕಾಂಗ್ರೇಸ್‍ನ ತಳ ಮಟ್ಟದ ಕಾರ್ಯಕರ್ತರು ಒಂದಾಗದ್ದರಿಂದ ದೇವೇಗೌಡರ ಸೋಲಿಗೆ ಕಾರಣವಾಯಿತು. ನಾನು ಸೋತಾಗ ನೋವಾಗಿರಲಿಲ್ಲ. ಆದರೆ ದೇವೇಗೌಡರ ಸೋಲು ನನಗೆ ಅತ್ಯಂತ ನೋವು ತಂದಿದೆ. ಮಾಜಿ ಪ್ರದಾನಿಗಳಿಗೆ ಇದೊಂದು ಬಾರಿ ಮತ ಹಾಕಲು ಅವಕಾಶ ಇತ್ತು. ದೇವೇಗೌಡರು ಗೆದ್ದಿದ್ದರೆ 10 ಸಾವಿರ ಕೋಟಿ ಜಿಲ್ಲೆಗೆ ತಂದು ಜಿಲ್ಲೆಯನ್ನು ಅಭಿವೃದ್ದಿ ಪಡಿಸುತ್ತಿದ್ದರು ಎಂದರು.
ಯಾವುದೇ ಚುನಾವಣೆಯಲ್ಲಿ ಗೆಲ್ಲಲಿ ಸೋಲಲಿ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸು ಮಾತ್ರ ಕಡಿಮೆಯಾಗುವುದಿಲ್ಲ. ಇಂತ ನಿಷ್ಟಾವಂತ ಕಾರ್ಯಕರ್ತರು ಬೇರೆ ಯಾವ ಪಕ್ಷದಲ್ಲಿಯೂ ಇಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸೋಲಲು ನಮ್ಮವರೇ ಕಾರಣ. ಒಂದು ವೇಳೆ ನಾನು ಗೆಲವು ಸಾದಿಸಿದ್ದರೆ ಮಂತ್ರಿಯಾಗಿ 1 ಸಾವಿರ ಕೋಟಿ ಹಣ ತಂದು ಅಭಿವೃದ್ದಿ ಮಾಡುತ್ತಿದ್ದೆ ಎಂದರಲ್ಲದೆ ಮುಂದಿನ ಡಿಸೆಂಬರ್ಗೆ ವಿದಾನ ಸಭಾ ಚುನಾವಣೆ ಬರಲಿದ್ದು ಕಾರ್ಯಕರ್ತರು ಒಗ್ಗೂಡಿ ಗೆಲ್ಲಿಸಿ ಎಂದು ಭವಿಷ್ಯ ನುಡಿದರು.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಶಾಸಕರು ಗಮನ ಹರಿಸಲು ಶಾಸಕರು ವಿಫಲವಾಗಿದ್ದು. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಮಾತನಾಡಿದ್ದು ತಾಲ್ಲೂಕಿನ ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಪಟ್ಟಿ ಮಾಡಿ ಕೊಡಲು ತಿಳಿಸಿದ್ದಾರೆ.ಅದರಂತೆ ನೀರಿನ ಸಮಸ್ಯೆ ಇದ್ದ ಗ್ರಾಮಗಳ ಪಟ್ಟಿ ಕೊಡಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾದ ಹಿನ್ನಲೆ ಒಂದು ನಿಮಿಷ ಮೌನ ಆಚರಿಸಿದರು. ನಂತರ ಮಾಜಿ ಶಾಸಕ ದಂಪತಿಯೊಂದಿಗೆ ಕೇಕ್ ಕತ್ತರಿಸುವ ಮೂಲಕ ಕುಟುಂಬ ಹಾಗೂ ಕಾರ್ಯಕರ್ತರ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡರು. ಮುಖಂಡರು, ಕಾರ್ಯಕರ್ತರು ಶಾಲು ಹಾರ ತುರಾಯಿ ಹಾಕಿ ಶುಭಾಷಯ ಕೋರಿದರು. ಪಟ್ಟಣ ಪಂಚಾಯ್ತಿ ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಇದೇ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಬಂದಂತ ಕಾರ್ಯಕರ್ತರಿಗೆ ಸಿಹಿ ಬೂಂದಿ ಪಾಯಸದ ಊಟ ಉಣಬಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಜೆಡಿಎಸ್ ಅಧ್ಯಕ್ಷ ಸ್ವಾಮಿ, ಮುಖಂಡರಾದ ಶಂಕರೇಗೌಡ, ವಕೀಲ ಧನಪಾಲ್, ಎ.ಬಿ.ಜಗದೀಶ್, ದೊಡ್ಡಘಟ್ಟಚಂದ್ರೇಶ್, ನಾಗರಾಜಯ್ಯ, ಆರ್.ಮಲ್ಲಿಕಾರ್ಜುನ (ರಾಜು), ವಂಕಟೇಶ್‍ಮೂರ್ತಿ, ಎಂ.ಎನ್. ಚಂದ್ರೇಗೌಡ, ಜೆಡಿಎಸ್ ಯುವ ಅಧ್ಯಕ್ಷ ರಮೇಶ್, ಯೋಗಾನಂದ, ರಾಜೀವ್, ವೆಂಕಟೇಶ್, ನರಸೇಗೌಡ, ಹನುಮಂತಯ್ಯ, ಗಂಗಾದರ್, ಇಂದ್ರಮ್ಮ, ಲೀಲಾವತಿ ಗಿಡ್ಡಯ್ಯ, ಎನ್.ಆರ್.ಸುರೇಶ್, ಮಧು, ಸ್ವಪ್ನನಟೇಶ್ ಸೇರಿದಂತೆ ಪ.ಪಂ. ಜೆಡಿಎಸ್ ಸದಸ್ಯರು, ವಿಜೇಂದ್ರಕುಮಾರ್, ಕುಶಾಲ್ ಕುಮಾರ್, ಶ್ರೀನಿವಾಸ್, ರಾಮಚಂದ್ರ, ಬಸವೇಗೌಡ ಹಾಗೂ ತಾ.ಪಂ, ಗ್ರಾ.ಪಂ ಅಧ್ಯಕ್ಷರು ಸದಸ್ಯರು ಸೇರಿದಂತೆ ಅಪಾರ ಕಾರ್ಯಕರ್ತರು ಇದ್ದರು.