ತುಮಕೂರು :
ಬೆಂಗಳೂರಿನ ಐಎಂಎ ಪ್ರಕರಣ ಮಾದರಿಯಲ್ಲಿ ತುಮಕೂರಿನಲ್ಲೂ ಸಾರ್ವಜನಿಕರಿಂದ ಕೋಟ್ಯಾಂತರ ರೂ ಸಂಗ್ರಹಿಸಿ ವಂಚಿಸಿರುವ ಪ್ರಕರಣ ಬಯಲಿಗೆ ಬಂದಿದೆ. ನಗರದ ಹೆಚ್‍ಎಂಎಸ್ ಶಾದಿ ಮಹಲ್ ಕಾಂಪ್ಲೆಕ್ಸ್‍ನಲ್ಲಿ ಈಝಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್ ಎಂಬ ಹೆಸರಿನ ಕಛೇರಿ ತೆರೆದು ಅಸ್ಲಾಂ ಪಾಷಾ ಎಂಬುವವರು ಸಾರ್ವಜನಿಕರಿಂದ 250ರಿಂದ 300 ಕೋಟಿ ರೂ ಸಂಗ್ರಹಿಸಿ ನಾಪತ್ತೆಯಾಗಿದ್ದಾರೆ.
ಆತ ದುಬಾಯ್‍ನಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಹಣ ತೊಡಗಿಸಿರುವ ಯಾರೂ ಈವರೆಗೆ ಪೊಲೀಸರಿಗೆ ದೂರು ನೀಡಿಲ್ಲ. 3-4 ತಿಂಗಳಿನಿಂದ ಕಛೇರಿ ಬಾಗಿಲು ತೆರೆದಿಲ್ಲ. ಹಣ ಹೂಡಿಕೆ ಮಾಡಿದವರು ದಿಕ್ಕು ತೋಚದೆ ಕಚೇರಿ ಬಳಿ ಬಂದು ಹೋಗುತ್ತಿದ್ದಾರೆ. ಶುಕ್ರವಾರ ಕೂಡಾ ನೂರಾರು ಜನ ಈ ಕಛೇರಿ ಮುಂದೆ ಜಮಾಯಿಸಿದ್ದರು
ತುಮಕೂರು ನಿವಾಸಿಯಾದ ಅಸ್ಲಾಂ ಪಾಷಾ 3-4 ವರ್ಷದಿಂದ ಹೆಚ್‍ಎಂಎಸ್ ಶಾದಿ ಮಹಲ್ ಕಾಂಪ್ಲೆಕ್ಸ್‍ನಲ್ಲಿ ಈಝಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್ ಕಛೇರಿ ಆರಂಭಿಸಿ, ತಾನು ವಿವಿಧ ವಾಹನ ಕಂಪನಿಗಳ ಜೊತೆ ಬಂಡವಾಳ ಹೂಡಿಕೆಯ ಒಡಂಬಡಿಕೆ ಮಾಡಿಕೊಂಡಿದ್ದು, ತಮ್ಮೊಂದಿಗೆ ಹಣ ಹೂಡಿಕೆ ಮಾಡುವವರಿಗೆ ಬರುವ ಲಾಭಾಂಶ ಹಂಚುವುದಾಗಿ ಪ್ರಚಾರ ಮಾಡಿದ್ದರು, ಅದನ್ನು ನಂಬಿ ಹಲವರು ಹಣ ಹೂಡಿಕೆ ಮಾಡಿದ್ದರು ಎಂದು ಮುಖಂಡ ನಿಸಾರ್ ಅಹಮದ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಣ ಹೂಡಿಕೆ ಮಾಡಿದವರಿಗೆ ಒಂದೂವರೆ ವರ್ಷ ಕಾಲ ಒಂದು ತಿಂಗಳಿಗೆ ಒಂದು ಲಕ್ಷ ರೂ.ಗೆ 5ರಿಂದ 7 ಸಾವಿರ ರೂ. ನಂತೆ ಲಾಭದ ಹಣ ಎಂದು ವಿತರಿಸಿದರು. ಸರಳವಾಗಿ ಹಣ ಮಾಡಬಹುದು ಎಂದು ನಂಬಿ 500ರಿಂದ 600 ಜನ ಈಝಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್‍ನಲ್ಲಿ ಹೂಡಿಕೆ ಮಾಡಿದರು.
ಅದಾಗಿ, ಕೆಲ ದಿನಗಳ ನಂತರ ಏಳು ತಿಂಗಳಿಗೆ ಹೂಡಿಕೆಯ ಎರಡರಷ್ಟು ಹಣ ನೀಡುವುದಾಗಿ ನಂಬಿಸಲಾಯಿತು, ಅದಾಗಿ ಆರು ತಿಂಗಳಾಗಿ, ಇನ್ನೊಂದು ತಿಂಗಳಲ್ಲಿ ಪಾವತಿಸಿದ ಹಣದ ಡಬಲ್ ಮೊತ್ತ ಪಡೆಯಬಹುದು ಎನ್ನುವಾಗ ಅಸ್ಲಾಂ ಪಾಷಾ ಹೊಸಾ ಸ್ಕೀಂ ತಂದು ಅದರ ಪ್ರಕಾರ 4ತಿಂಗಳ, 10 ದಿನದಲ್ಲಿ ಹಣ ಡಬಲ್ ನೀಡುವ ಆಫರ್ ಕೊಟ್ಟರು. ನಾಲ್ಕೇ ತಿಂಗಳಲ್ಲಿ ಎರಡರಷ್ಟು ಹಣ ಪಡೆಯಬಹುದು ಎಂದು ಆವರೆಗೆ ತೊಡಗಿಸಿದ್ದ ಪೂರ್ಣ ಹಣವನ್ನೂ ಅಲ್ಲೇ ಮುಂದುವರೆಸಿದ್ದರು ಎಂದು ನಿಸಾರ್ ಅಹಮದ್ ಹೇಳಿದರು.
ತುಮಕೂರು ಮಾತ್ರವಲ್ಲದೆ ಜಿಲ್ಲೆಯ ವಿವಿಧ ಭಾಗಗಳ ಮುಸ್ಲೀಂ ಬಾಂಧವರು ಇಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ. ತುಮಕೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಸ್ಲಾಂ ಪಾಷಾ ಈಗ ದುಬಾಯ್‍ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಹೆಂಡತಿ ಮಕ್ಕಳು ತುಮಕೂರಿನಲ್ಲಿದ್ದಾರೆ. ಆದರೆ ಅವರು ಈ ಬಗ್ಗೆ ತಮಗೇನೂ ತಿಳಿದಿಲ್ಲ ಎನ್ನುತ್ತಾರೆ, ಆದರೆ ಹಣ ಕಳೆದುಕೊಂಡವರು ಕಂಗಾಲಾಗಿದ್ದಾರೆ ಎಂದು ಹೇಳಿದರು.
ಕಳೆದ ಫೆಬ್ರವರಿ ತಿಂಗಳಿನಲ್ಲಿ ಅಸ್ಲಾಂ ಪಾಷಾ ಹಣ ತೆಗೆದುಕೊಂಡು ದುಬಾಯಿಗೆ ಹೋಗಿದ್ದಾರೆ. ಹಣ ಹೂಡಿಕೆ ಮಾಡಿದವರು ಆತಂಕಕ್ಕೊಳಗಾಗಿದ್ದಾರೆ. ಹೂಡಿಕೆದಾರರೆಲ್ಲಾ ಪೊಲೀಸರಿಗೆ ದೂರು ನೀಡಲಿದ್ದು, ಪೊಲೀಸರು ಆತನ್ನು ಪತ್ತೆ ಮಾಡಿ ಕರೆತಂದು ಸಾರ್ವಜನಿಕರ ಹಣ ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿದರು.
ಈ ನಡುವೆ ಅಸ್ಲಾಂ ಪಾಷಾ ಆಡಿಯೊ, ವೀಡಿಯೋ ಮೆಸೇಜ್ ಕಳುಹಿಸಿದ್ದು, ಆರ್ಥಿಕವಾಗಿ ತಾನು ತೊಂದರೆಗೊಳಗಾಗಿದ್ದು, ಸದ್ಯ ದುಬಾಯಿನಲ್ಲಿದ್ದೀನಿ, 2-3 ತಿಂಗಳು ಅವಕಾಶ ಮಾಡಿಕೊಟ್ಟರೆ ಹೂಡಿಕೆದಾರರಿಗೆ ಹಣ ನೀಡುವುದಾಗಿ ಹೇಳಿದ್ದಾರೆ, ಅಲ್ಲದೆ, ಈಝಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್ ಕಛೇರಿಯ ಮೇನೇeರ್ ಶುಮಾಸ್ ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದ ಅಸದ್ ಎಂಬುವವರಿಗೆ 5 ಕೋಟಿ ರೂ ಕೊಟ್ಟಿದ್ದೇನೆ ಅವರಿಂದ ಹಣ ಪಡೆಯುವುದು ಎಂದು ಮೆಸೇಜ್‍ನಲ್ಲಿ ತಿಳಿಸಿದ್ದಾರೆ ಎಂದು ನಿಸಾರ್ ಅಹಮದ್ ಹೇಳಿದರು.
ಇದೊಂದು ವಂಚನೆ ಪ್ರಕರಣ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರವಾಗಿ ತನಿಖೆ ನಡೆಸಿದರೆ, ಎಷ್ಟು ಜನ, ಎಷ್ಟು ಹಣವನ್ನು ಇಲ್ಲಿ ತೊಡಗಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಹಣ ತೊಡಗಿಸಿದ ಅಮಾಯಕರಿಗೆ ನ್ಯಾಯ ದೊರಕಿಸಬೇಕು, ಆರೋಪಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು.ಮುಖಂಡರಾದ ವಜೀರ್ ಸಾಬ್, ಅಬೀಬುಲ್ಲಾ ಸಾಬ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.