ತುಮಕೂರು:
ಜಿಲ್ಲೆಯಲ್ಲಿ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಎಸಿಬಿ ಅಧಿಕಾರಿಗಳು ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಇವರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿ ಸೋಮವಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವೈ.ಹೆಚ್.ಹುಚ್ಚಯ್ಯ ಹಾಗೂ ಮತ್ತಿತರರು ಎಸಿಬಿ ಡಿವೈಎಸ್ಪಿ ರಘುಕುಮಾರ್ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು.
ಬಡವರು,ನಿಗರ್ತಿಕರು,ಅನ್ಯಾಯಕ್ಕೆ ಒಳಗಾದವರು ನ್ಯಾಯ ಅರಸಿ ಕೋರ್ಟುಗಳಿಗೆ ಬರುವುದು ಸಹಜ. ಆದರೆ ನ್ಯಾಯಾಲಯ ದಲ್ಲಿ ಸರಕಾರದ ಪರವಾಗಿ ದೂರದಾರರ ಪರ ವಾದ ಮಾಡಿ ನ್ಯಾಯ ಒದಗಿಸಬೇಕಾದ ಸರಕಾರಿ ವಕೀಲರೇ ಲಂಚದ ಆಸೆಗೆ ಬಿದ್ದು ಶೋಷಣೆ ಮಾಡಿದ ಪ್ರಕರಣವನ್ನು ಇತ್ತೀಚಿಗೆ ಎಸಿಬಿ ಕೈಗೆತ್ತಿಕೊಂಡು, ಆರೋಪಿಯನ್ನು ಜೈಲಿಗೆ ಕಳುಹಿಸಲು ಕ್ರಮ ವಹಿಸಿದೆ.ಇದು ನಿಜಕ್ಕೂ ಪ್ರಶಂಶನೀಯ ಕೆಲಸ,ಇದರ ಜೊತೆಗೆ ಇತ್ತೀಚಗೆ ಲೋಕಾಯುಕ್ತ ಹಲವು ಪ್ರಕರಣಗಳಲ್ಲಿ ಭ್ರಷ್ಟಾಚಾರ ಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿದೆ.ಈ ಹಿನ್ನೆಲೆಯಲ್ಲಿ ಇಲಾಖೆಯ ಕಾರ್ಯವೈಖರಿಯನ್ನು ಮೆಚ್ಚಿ, ಅಭಿನಂದನೆ ಸಲ್ಲಿಸುತ್ತಿರುವುದಾಗಿ ವೈ.ಹೆಚ್.ಹುಚ್ಚಯ್ಯ ತಿಳಿಸಿದರು.
ಒಲ್ಲದ ಮನಸ್ಸಿನಿಂದ ಅಭಿನಂದನೆ ಸ್ವೀಕರಿಸಿದ ಎಸಿಬಿ ಡಿವೈಎಸ್ಪಿ ರಘುಕುಮಾರ್,ಇದೊಂದು ಟೀಮ್ ವರ್ಕ್, ನನ್ನಗೆ ಸಲ್ಲಿಕೆಯಾಗಿರುವ ಪ್ರಶಂಸೆ, ನಮ್ಮ ಸಿಬ್ಬಂದಿಗೂ ಸಲ್ಲಬೇಕು.ಸಾರ್ವಜನಿಕರು ನಮ್ಮ ಕೆಲಸ ಮೆಚ್ಚಿ, ನಮಗೆ ಹಾರ, ತುರಾಯಿ ಹಾಕುವುದು ಬೇಡ. ಹೆಚ್ಚು ಹೆಚ್ಚು ದೂರುಗಳು ಬರುವಂತೆ ಮಾಡಿದರೆ ಸಾಕು. ಅಲ್ಲದೆ ದೂರು ನೀಡಿದವರು ತಾವು ನೀಡಿದ ದೂರಿಗೆ ಬದ್ದವಾಗಿದ್ದರೆ, ಅದಕ್ಕಿಂತ ದೊಡ್ಡ ಸನ್ಮಾನ ಮತ್ತೊಂದಿಲ್ಲ ಎಂದರು.
ಎಸಿಬಿ ಡಿವೈಎಸ್ಪಿಯಾಗಿ ಇಲ್ಲಿಗೆ ಬಂದನಂತರ ಸಾರ್ವಜನಿಕರಲ್ಲಿ ಅರಿವು ಮೂಡಿಸಿ,ಧೈರ್ಯ ತುಂಬಿ ಅವರು ತಮ್ಮ ನೋವುಗಳ ನ್ನು ದೂರಿನ ರೂಪದಲ್ಲಿ ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಸಾಮಾಜಿಕ ಜಾಲ ತಾಣಗಳಲ್ಲಿ ಎಸಿಬಿ ಕಚೇರಿಯ ಮಾಹಿತಿಗಳನ್ನು ಪ್ರಕಟಿಸುವ ಮೂಲಕ ಹೆಚ್ಚು ಜನರನ್ನು ತಲುಪಲು ಪ್ರಯತ್ನಿಸುತ್ತಿದ್ದೇನೆ ಎಂದು ರಘುಕುಮಾರ್ ನುಡಿದರು.
ಈ ವೇಳೆ ದೇವರಾಜಯ್ಯ,ನರಸಿಂಹರಾಜು,ಪ್ರೊ.ಶಶಿಧರ, ವಕೀಲರಾದ ವೆಂಕಟೇಶ್, ಶ್ರೀನಿವಾಸ್,ಎಸಿಬಿ ಕಚೇರಿಯ ಸಿಬ್ಬಂದಿಗಳು ಜೊತೆಗಿದ್ದರು