ತುಮಕೂರು:

       ನವಜಾತ ಶಿಶುವಿಗೆ ಆರು ತಿಂಗಳೊಳಗಾಗಿ ಶ್ರವಣ ದೋಷವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಶಿಶು ಆರೋಗ್ಯವಾಗಿ ಸಾಮಾನ್ಯರಂತೆ ಇರಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.

       ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ವಾಣಿ ಡೆಫ್ ಚಿಲ್ಡ್ರನ್ಸ್ ಫೌಂಡೇಷನ್ ಹಾಗೂ ಅಜೀಮ್ ಪ್ರೇಮ್‍ಜಿ ಫಿಲಂಥ್ರೋಫಿಕ್ ಇನಿಷಿಯೇಟಿವ್ಸ್ ಸಹಯೋಗದಲ್ಲಿ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿಂದು ನಡೆದ “ಸೋಹಮ್” ನವಜಾತ ಶಿಶುಗಳ ಶ್ರವಣದೋಷ ಪರೀಕ್ಷಾ ಸಾಧನ ಅನುಸ್ಥಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ಜಿಲ್ಲಾಸ್ಪತ್ರೆಗೆ ಈ ಸಾಧನವನ್ನು ನೀಡಿರುವ ವಾಣಿ ಡೆಫ್ ಚಿಲ್ಡ್ರನ್ಸ್ ಫೌಂಡೇಷನ್ ಸಂಸ್ಥೆಗೆ ಅಭಿನಂದಿಸಿದ ಅವರು ಇನ್ನು ಮುಂದೆ ಈ ಸಾಧನವನ್ನು ಬಳಸಿಕೊಂಡು ಜನಿಸುವ ಮಗುವಿಗೆ ಶಬ್ದ ಕೇಳಿಸುತ್ತಿದ್ದೆಯೋ, ಇಲ್ಲವೋ ಎಂಬುದು ಮಗು ಜನಿಸಿದ ದಿನದಂದೆ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿಯೂ ಈ ಸೌಲಭ್ಯ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

       ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಛೇರ್ಮನ್ ಎಸ್. ನಾಗಣ್ಣ ಮಾತನಾಡಿ ಶ್ರವಣ ದೋಷಪೂರಿತ ಮಕ್ಕಳನ್ನು ಪತ್ತೆ ಹೆಚ್ಚಿ ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ದೊರಕಿಸಿ ಕೊಡಬೇಕು. ಇಂಥ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು. ಕಿವುಡತನ ಮತ್ತು ಶಬ್ದಗಳ ಸ್ಪಷ್ಟ ಉಚ್ಚಾರಣೆ ದೋಷ ಹೊಂದಿರುವವರನ್ನು ಗುರುತಿಸಿ ಅಂತಹ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ತಿಳಿಸಿದರು.

        ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಿಕಾ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 957 ಮಕ್ಕಳು ಶ್ರವಣ ದೋಷಕ್ಕೊಳಪಟ್ಟಿದ್ದು, ಹುಟ್ಟಿದ ಮಗುವಿನಲ್ಲಿಯೇ ಶ್ರವಣ ದೋಷವನ್ನು ಪತ್ತೆ ಮಾಡುವ ಸಾಧನವನ್ನು ನೀಡಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಕಿವುಡತನ ಮುಕ್ತ ಜಿಲ್ಲೆ ಮಾಡುವ ಉದ್ದೇಶದಿಂದ ಈ ಸೌಲಭ್ಯವನ್ನು ಎಲ್ಲಾ ತಾಲೂಕು ಪ್ರಾಥಮಿಕ ಕೇಂದ್ರಗಳಲ್ಲಿ ಈ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

        ವಾಣಿ ಡೆಫ್ ಚಿಲ್ಡ್ರನ್ಸ್ ಫೌಂಡೇಷನ್ ಕಾರ್ಯನಿರ್ವಾಹಕ ನಿರ್ದೇಶಕಿ ಸುಮೇಧ ವಿಜಯಲಕ್ಷ್ಮಿ ಜೋಗಲೇಕರ್ ಅವರು 7.75ಲಕ್ಷ ರೂ. ಮೌಲ್ಯದ “ಸೋಹಮ್” ನವಜಾತ ಶಿಶುಗಳ ಶ್ರವಣದೋಷ ಪರೀಕ್ಷಾ ಸಾಧನವನ್ನು ಜಿಲ್ಲಾಸ್ಪತ್ರೆಗೆ ನೀಡಿ ತಮ್ಮ ಸಂಸ್ಥೆಯ ಬಗ್ಗೆ ಪರಿಚಯ ನೀಡಿದರು.

       ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ವೀರಭದ್ರಯ್ಯ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಪ್ರೊ|| ಚಂದ್ರಣ್ಣ, ಮತ್ತಿತರರು ಉಪಸ್ಥಿತರಿದ್ದರು.

(Visited 18 times, 1 visits today)