ತುಮಕೂರು :
ವಾಲ್ಮೀಕಿ ಸಮುದಾಯಕ್ಕೆ ಸಂವಿಧಾನಬದ್ಧವಾಗಿ ದೊರೆಯಬೇಕಾಗಿರುವ ಮೀಸಲಾತಿಯನ್ನು ಶೇ. 3 ರಿಂದ ಶೇ. 7.5ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಇಂದಿಲ್ಲಿ ಒತ್ತಾಯಿಸಿದರು.
ಪರಿಶಿಷ್ಟ ವರ್ಗದ 49 ಜಾತಿಗಳಿಗೆ ಮೀಸಲಾತಿ ಹಂಚಿತೆಯಲ್ಲಿ ಅನ್ಯಾಯವಾಗಿದೆ. ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಶೇ. 3 ರಿಂದ 7.5ಕ್ಕೆ ಹೆಚ್ಚಿಸಬೇಕು. ಈಗಾಗಲೇ ಕೇಂದ್ರ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸಿದೆ. ರಾಜ್ಯ ಸರ್ಕಾರ ಸಹ ಕಾನೂನಾತ್ಮಕವಾಗಿ ಇರುವ ಅಡಚಣೆಗಳನ್ನು ನಿವಾರಣೆ ಮಾಡಿ ಶೇ. 7.5 ಮೀಸಲಾತಿ ನೀಡಲೇಬೇಕು ಎಂದು ಅವರು ಆಗ್ರಹಿಸಿದರು.
ರಾಜನಹಳ್ಳಿಯಿಂದ ರಾಜಧಾನಿವರೆಗೆ ಮಹರ್ಷಿ ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಹಮ್ಮಿಕೊಂಡಿರುವ ಪಾದಯಾತ್ರೆಗೆ ಚಾಲನೆ ನೀಡುವ ಮುನ್ನ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಮಾತನಾಡಿದ ಅವರು, ಈ ಹೋರಾಟ ಯಾವುದೇ ಒಂದು ಜಾತಿಗಾಗಿ ಅಲ್ಲ. ಮೀಸಲಾತಿಯಿಂದ ಅನ್ಯಾಯಕ್ಕೆ ಒಳಗಾಗಿರುವ ಎಲ್ಲ ಜಾತಿಗಳಿಗೆ ನ್ಯಾಯ ದೊರಕಿಸಿಕೊಡುವ ಹೋರಾಟವಾಗಿದೆ. ನಮ್ಮ ಹೋರಾಟದಿಂದ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ರಸ್ತೆತಡೆ, ಪ್ರತಿಭಟನೆ ಮಾಡುತ್ತಿಲ್ಲ. ಬದಲಿಗೆ ಶಾಂತಿಯುತವಾಗಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಮಹಾತ್ಮಗಾಂಧೀಜಿಯವರು ಅಹಿಂಸಾ ತತ್ವವನ್ನು ಅನುಸರಿಸಿ ಸತ್ಯಾಗ್ರಹ ನಡೆಸುವ ಮೂಲಕ ಹೋರಾಟ ನಡೆಸಿದರು. ಅವರು ಹಾಕಿಕೊಟ್ಟ ದಾರಿಯಲ್ಲೇ ನಾವುಗಳ ಸಹ ಮುಂದುವರೆಯುತ್ತಿದ್ದೇವೆ ಎಂದು ಅವರು ಹೇಳಿದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿ, ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಡೆಸುತ್ತಿರುವ ಈ ಹೋರಾಟಕ್ಕೆ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸಹಕಾರ ಇದ್ದೇ ಇರುತ್ತದೆ ಎಂದರು. ವಿಧಾನಸೌಧದಲ್ಲೂ ಸಹ ಸಮಾಜದ ಪರವಾಗಿ ಧ್ವನಿಯಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದ ಅವರು, ಈ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.
ಬಾವಿಕಟ್ಟೆ ಕಲ್ಯಾಣ ಮಂಟಪದಿಂದ ಹೊರಟ ಪಾದಯಾತ್ರೆಯು ಅಶೋಕ ರಸ್ತೆ, ಟೌನ್‍ಹಾಲ್ ವೃತ್ತ, ಬಿ.ಹೆಚ್. ರಸ್ತೆ ಮುಖೇನ ಬೆಂಗಳೂರಿನತ್ತ ಸಾಗಿತು.
ಪಾದಯಾತ್ರೆಯಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯದ ಶ್ರೀ ಪ್ರಸನಾನ್ನಂದ ಸ್ವಾಮೀಜಿ, ಶಿಡ್ಲೆಕೋಣ ಶ್ರೀ ಸಂಜಯಕುಮಾರ ಸ್ವಾಮೀಜಿ, ಕೇದಾರ ಮಠದ ಶ್ರೀ ಬಸವ ಕೇದಾರನಂದ ಸ್ವಾಮೀಜಿ, ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಾಂತಲಾ ರಾಜಣ್ಣ, ಆರ್. ರಾಜೇಂದ್ರ, ಜಿ.ಪಂ. ಸದಸ್ಯ ರಾಮಾಂಜಿಪ್ಪ, ತು.ಬಿ. ಮಲ್ಲೇಶ್, ಪ್ರತಾಪ್, ರಂಗಪ್ಪನಾಯಕ್, ಭೀಮಣ್ಣ, ನಾಗರಾಜು, ಚೌಡಪ್ಪ, ಬೆಟ್ಟಸ್ವಾಮಿ, ಜಿ.ಜೆ. ರಾಜಣ್ಣ, ದಿಲೀಪ್‍ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.