ತುಮಕೂರು:
ದಲಿತರ ಸಮಸ್ಯೆಗಳನ್ನು ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ನಿಯಮಾವಳಿಗಳನ್ವಯ ತಮ್ಮ ಹಂತದಲ್ಲಿಯೇ ಬಗೆಹರಿಸಿದಲ್ಲಿ ಸಮಸ್ಯೆಗಳು ಉದ್ಭವವಾಗುವುದಿಲ್ಲ ಎಂದು ಉಪವಿಭಾಗಾಧಿಕಾರಿ ಶಿವಕುಮಾರ್ ಸಲಹೆ ನೀಡಿದರು.
ತುಮಕೂರು ಉಪವಿಭಾಗಕ್ಕೆ ಸಂಬಂಧಿಸಿದಂತೆ ಜಿಲ್ಲಾ ಬಾಲಭವನದಲ್ಲಿಂದು ಜರುಗಿದ ಪರಿಶಿಷ್ಟ ಜಾತಿ ಮತ್ತು ವರ್ಗದ ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ದಲಿತರ ಸಮಸ್ಯೆಗಳನ್ನು ಆಲಿಸಿ, ಅವರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ ಅವರು ನಿರ್ಣಯವಾಗದ ಅಹವಾಲುಗಳನ್ನು ಚರ್ಚಿಸಲು ಬರುವ ವಾರ ತಮ್ಮ ಕಚೇರಿಯಲ್ಲಿಯೇ ಸಭೆ ನಡೆಸಲಾಗುವುದೆಂದರಲ್ಲದೆ ಇಂದಿನ ಸಭೆಗೆ ಗೈರು ಹಾಜರಾದ ಎಲ್ಲ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಶಿಫಾರಸ್ಸು ಮಾಡಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ತುಮಕೂರು ಉಪವಿಭಾಗಕ್ಕೊಳಪಡುವ ತುಮಕೂರು, ಗುಬ್ಬಿ ಹಾಗೂ ಕುಣಿಗಲ್ ತಾಲೂಕಿಗೆ ಸಂಬಂಧಿಸಿದ ದಲಿತ ಮುಖಂಡರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ಉಪವಿಭಾಗ ವ್ಯಾಪ್ತಿಯ ಸಾಕಷ್ಟು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗಾಗಿ ಪ್ರತ್ಯೇಕ ಸ್ಮಶಾನ ಭೂಮಿಯಿರುವುದಿಲ್ಲ. ಎಲ್ಲ ಗ್ರಾಮಗಳಲ್ಲಿಯೂ ತ್ವರಿತವಾಗಿ ಪ್ರತ್ಯೇಕ ಸ್ಮಶಾನ ಭೂಮಿಯನ್ನು ಗುರುತಿಸುವ ಕಾರ್ಯವಾಗಬೇಕು. ತುಮಕೂರು ಕಸಬಾ ಹೋಬಳಿ ಹಬ್ಬತ್ತನಹಳ್ಳಿ, ದೇವರಾಯಪಟ್ಟಣ ಹಾಗೂ ಮಾರನಾಯಕನಹಳ್ಳಿಯಲ್ಲಿರುವ ದಲಿತರ ಸ್ಮಶಾನಭೂಮಿಯ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿ ಗಾರ್ಡನ್ ರಸ್ತೆಯಲ್ಲಿರುವ ಹಿಂದೂ ರುದ್ರುಭೂಮಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ದಲಿತರಿಗೆ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡುತ್ತಿಲ್ಲವೆಂದು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದರು.
ದೂರಿಗೆ ಸ್ಪಂದಿಸಿದ ಉಪವಿಭಾಗಾಧಿಕಾರಿಗಳು ಸ್ಮಶಾನ ಭೂಮಿಯ ಒತ್ತುವರಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿರುವ ವಿದ್ಯುತ್ ಚಿತಾಗಾರವನ್ನು ಎಲ್ಲ ಜಾತಿ ಮತ್ತು ಧರ್ಮದವರ ಅಂತ್ಯಕ್ರಿಯೆ ನಡೆಸಲು ನಿರ್ಮಿಸಲಾಗಿದ್ದು, ಈ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್ ನಾಗರಾಜ್ ಅವರಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟ-ಗುಡ್ಡಗಳ ಪಕ್ಕದಲ್ಲಿರುವ ದಲಿತರ ಜಮೀನುಗಳಿಗೆ ಸುಗಮವಾಗಿ ಹೋಗಿಬರಲು “ನಮ್ಮ ಗ್ರಾಮ ನಮ್ಮ ರಸ್ತೆ” ಯೋಜನೆಯಡಿ ರಸ್ತೆ ನಿರ್ಮಾಣ ಮಾಡಬೇಕು ಹಾಗೂ ದಲಿತರಿಗೆ ಮಂಜೂರಾಗಿರುವ ಜಮೀನುಗಳನ್ನು ರಾಜಕಾರಣಿಗಳು, ಶ್ರೀಮಂತರು, ಪ್ರಭಾವಿ ವ್ಯಕ್ತಿಗಳ ಹೆಸರಿಗೆ ಅಧಿಕಾರಿಗಳು ಸದ್ದಿಲ್ಲದೆ ಖಾತೆ ಮಾಡಿಕೊಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಕೇಳಿದರೆ ಕುಂಟು ನೆಪ ಹೇಳುತ್ತಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕಲ್ಲದೆ, ಇಂತಹ ದಲಿತ ವಿರೋಧಿ ಅಧಿಕಾರಿಗಳು ನಮಗೆ ಬೇಕಿಲ್ಲವೆಂದು ದಲಿತ ಮುಖಂಡರೆಲ್ಲ ಒಕ್ಕೊರಲಿನಿಂದ ಆಗ್ರಹಿಸಿದಾಗ ಉಪವಿಭಾಗಾಧಿಕಾರಿ ಅವರನ್ನು ಸಮಾಧಾನಪಡಿಸಿ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಆದ್ಯತೆ ಮೇಲೆ ಬಗೆಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ನಿರ್ಮಿಸಬೇಕೆಂದಿರುವ ಬಾಬು ಜಗಜೀವನರಾಂ ಭವನದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ಪಹಣಿ ಬರಲಿದೆ. ಈಗಾಗಲೇ ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಗುಜರಿ ಅಂಗಡಿಗಳಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅಂಗಡಿಗಳನ್ನು ತೆರವುಗೊಳಿಸಿ ಆವರಣ ಗೋಡೆಯನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದೆಂದರು.
ತುಮಕೂರು ತಾಲೂಕು ಮಲ್ಲಸಂದ್ರ ಗ್ರಾಮ ಪಂಚಾಯತಿಗೆ ಸೇರಿದ ಅದಲಾಪುರ ಗ್ರಾಮದಲ್ಲಿರುವ ವಾಸದ ಮನೆ ಹಾಗೂ ಸರ್ಕಾರಿ ಪಾಠ ಶಾಲೆಗೆ ಹೊಂದಿಕೊಂಡಂತೆ ಅನಧಿಕೃತವಾಗಿ ಇಟ್ಟಿಗೆ ಕಾರ್ಖಾನೆಯನ್ನು ನಿರ್ಮಿಸಿರುವ ಬಗ್ಗೆ ಸಭೆಯಿಂದ ಮಾಹಿತಿ ಪಡೆದ ಉಪವಿಭಾಗಾಧಿಕಾರಿಗಳು ತತ್‍ಕ್ಷಣವೇ ಸ್ಥಳಪರಿಶೀಲನೆ ನಡೆಸಿ ಕಾರ್ಖಾನೆಯನ್ನು ಸ್ಥಗಿತಗೊಳಿಸುವುದರ ಜೊತೆಗೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್‍ಗೆ ಸೂಚನೆ ನೀಡಿದರು.
ಉಳಿದಂತೆ ಸಭೆಯಲ್ಲಿ ತುಮಕೂರು ಕಸಬಾ ಹೋಬಳಿ ಹಬ್ಬತ್ತನಹಳ್ಳಿ ಸ್ಮಶಾನಭೂಮಿ ಸ್ವಚ್ಛತೆ, ಬೆಳ್ಳಾವಿ ಹೋಬಳಿ ಮುದಿಗೆರೆ ಗ್ರಾಮದ ವಾಸಿ ದೊಡ್ಡಯ್ಯ ಅವರು ಅನುಭವಿಸಿಕೊಂಡು ಬಂದಿರುವ ಜಮೀನಿಗೆ ಸಾಗುವಳಿ ಚೀಟಿ ನೀಡುವ, ಊರ್ಡಿಗೆರೆ ಹೋಬಳಿ ಚಿಕ್ಕಹಳ್ಳಿ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಅರ್ಜಿದಾರರಿಗೆ ಹಕ್ಕುಪತ್ರ ವಿತರಣೆ, ಗೊಲ್ಲಹಳ್ಳಿ ಗ್ರಾಮದಲ್ಲಿ ಆಶ್ರಯ ಯೋಜನೆಯ ಜಮೀನು ಒತ್ತುವರಿ, ದಲಿತರ ಕಾಲೋನಿಯಲ್ಲಿ ರಸ್ತೆ ನಿರ್ಮಾಣ, ತುಮಕೂರಿನ ಶೇಷಾದ್ರಿಪುರ ಕಾಲೇಜಿನ ಬಳಿ ದಲಿತರು ಓಡಾಡಲು ಬಂಡಿಜಾಡು ಬಿಡುವ, ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಮಂಚಲದೊರೆ ಗ್ರಾ.ಪಂ. ಕಾಳಿಂಗನಹಳ್ಳಿ ಗ್ರಾಮದಲ್ಲಿ ಕೊರೆದಿರುವ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ, ದಲಿತರಿಗೆ ಭೂ-ಮಂಜೂರಾತಿ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಸಂಖ್ಯಾಬಲಕ್ಕನುಗುಣವಾಗಿ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಮೀಮ್ ಉನ್ನಿಸಾ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶಯ್ಯ, ಮತ್ತಿತರು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.