ತುಮಕೂರು:

      ಗ್ರಾಮ ಪಂಚಾಯ್ತಿ ಸಿಬ್ಬಂದಿಗಳ ವೇತನವನ್ನು ನಿಗದಿತ ಸಮಯಕ್ಕೆ ನೀಡಬೇಕು ಮತ್ತು ಕನಿಷ್ಟ ವೇತನವನ್ನು ಪಾವತಿ ಮಾಡುವುದು, ಇಎಫ್‍ಎಂಎಸ್ ಅಳವಡಿಸುವುದು ಗ್ರಾಮ ಪಂಚಾಯ್ತಿ ಸಿಬ್ಬಂದಿಗಳ ಅನುಮೋದನೆ ಮತ್ತು ಮುಂಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರು ಸಿಐಟಿಯು ನೇತೃತ್ವದಲ್ಲಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.

      ಟೌನ್‍ಹಾಲ್ ವೃತ್ತದಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಪಂಚಾಯ್ತಿ ಸಿಬ್ಬಂದಿಗಳಿಗೆ 2018 ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ಬಾಕಿ ಉಳಿಸಿಕೊಂಡಿರುವ ವೇತನ ಪೂರ್ಣವಾಗಿ ಪಾವತಿಸಬೇಕು. ಕೈಬಿಟ್ಟ ಹೋದ ನೌಕರರ ವಿವರವನ್ನು ಪಂಚತಂತ್ರದಲ್ಲಿ ಅಳವಡಿಸಲು ಉಪಕಾರ್ಯದರ್ಶಿಯವರು ಕ್ರಮ ಕೈಗೊಳ್ಳಬೇಕು ಹಾಗೂ ವೇತನವನ್ನು ಮಾರ್ಚ್ 1, 2018ರಿಂದ ಬಿಡುಗಡೆ ಮಾಡಬೇಕು. ಗ್ರಾಮ ಪಂಚಾಯ್ತಿ ಸಿಬ್ಬಂದಿಗಳಿಗೆ 2018 ಮಾರ್ಚ್ ತಿಂಗಳಿಗೂ ಹಿಂದೆ ಉಳಿಸಿಕೊಂಡಿರುವ ಹಿಂದಿನ ವೇತನವನ್ನು ಪಂಚಾಯ್ತಿ ನಿಧಿಯಿಂದ ಪಾವತಿಸಬೇಕು. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಅರ್ಹ ಸಿಬ್ಬಂದಿಗಳಿಗೆ ಬಡ್ತಿ ನೀಡಬೇಕು. ಗ್ರಾಮ ಪಂಚಾಯ್ತಿ ನೌಕರರನ್ನು ಸಿ ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸಿ ವೇತನ ಶ್ರೇಣಿ ನೀಡಬೇಕು ಎಂದು ಆಗ್ರಹಿಸಿದರು.

      ಜಿಲ್ಲಾ ಪಂಚಾಯಿತಿ ಹಂತದಲ್ಲಿರುವ ಕೆಲಸಗಳನ್ನು ಜುಲೈ 15ರೊಳಗೆ ಕಾರ್ಯಗತಗೊಳಿಸದೇ ಹೋದರೆ ಮುಂದೆ ಎಲ್ಲಾ ನೌಕರರು ಜಿಲ್ಲಾ ಪಂಚಾಯಿತಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.ಇಎಫ್‍ಎಂಎಸ್ ತಂತ್ರಾಂಶದಲ್ಲಿ ಸೇರ್ಪಡೆಗೊಳ್ಳದ ಸಿಬ್ಬಂದಿಗಳನ್ನು ಕೂಡಲೇ ಇಎಫ್‍ಎಂಎಸ್‍ಗೆ ಅಳವಡಿಸಬೇಕು. ಗ್ರಾಮ ಪಂಚಾಯ್ತಿ ಸಿಬ್ಬಂದಿಗಳ ವೇತನಕ್ಕೆ ಬೇಕಾದ ಅನುದಾನವನ್ನು ಸರ್ಕಾರ ಭರಿಸಿ ತಿಂಗಳಿಗೆ ಸರಿಯಾಗಿ ವೇತನ ನೀಡಬೇಕು.. ಅಪರ ಕಾರ್ಯದರ್ಶಿ ಸ್ವಾಮಿ ವರದಿಯಂತೆ ಬಾಕಿ ಇರುವ ಎಲ್ಲಾ ನೌಕರರನ್ನು ಏಕ ಕಾಲದಲ್ಲಿ ಅನುಮೋದನೆ ನೀಡಬೇಕು ಎಂದರು.

       ಕರ್ನಾಟಕರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಮಾತನಾಡಿ, ಅನುಮೋದನೆಗೊಂಡ ಎಲ್ಲಾ ನೌಕರರಿಗೆ ಸರ್ಕಾರದ ಆದೇಶದ ಪ್ರಕಾರ ಜೇಷ್ಟತೆ ಪಟ್ಟಿ ಮಾಡಿ ಬಡ್ತಿ ನೀಡಲು 2019ರ ಪವಿತ್ರ ಕೇಸಿನಲ್ಲಿ ಸುಪ್ರೀಂಕೋರ್ಟ್‍ನ ತೀರ್ಪು ಬಂದಿರುವುದರಿಂದ ಪಿ.ಡಿ.ಓ ಬಡ್ತಿ ಗ್ರೇಡ್ 1 ಬಡ್ತಿ ನೀಡಿ, ಖಾಲಿಯಾದ ಗ್ರೇಡ್ 2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಿಲ್‍ಕಲೆಕ್ಟರ್ ಮತ್ತು ಡಾಟಾ ಎಂಟ್ರಿ ಆಪರೇಟರ್‍ಗಳನ್ನು ನೇಮಕಾತಿ ಮಾಡುವಂತಾಗಬೇಕು. ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‍ಗಳನ್ನು ಬಡ್ತಿಗೆ ಪರಿಗಣಿಸಬೇಕು. ಪಂಚಾಯ್ತಿ ಎಲ್ಲಾ ನೌಕರರಿಗೂ ಭವಿಷ್ಯನಿಧಿ, ಆರೋಗ್ಯ ವಿಮೆ, ನಿವೃತ್ತಿ ವೇತನ, ಜನಶ್ರೀ ವಿಮಾ ಯೋಜನೆ, ರಜೆ ಸೌಲಭ್ಯ, ಸೇವಾ ನಿಯಮಾವಳಿ, ಸೇವಾ ಪುಸ್ತಕ ಮುಂತಾದ ಸೌಲಭ್ಯಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

      ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಡಿ.ನಾಗೇಶ್ ಮಾತನಾಡಿ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ ವೇತನ ಪಾವತಿ ಮಾಡುತ್ತಿಲ್ಲ. ಈ ಹಿಂದೆ ಇಎಫ್‍ಎಂಎಸ್‍ಗೆ ನೌಕರರ ಮಾಹಿತಿಯನ್ನು ಅಳವಡಿಸುವಾಗ ಜಿಲ್ಲೆಯ ಕುಣಿಗಲ್ ಮತ್ತು ಸಿರಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಲಾಗಿನ್ ಮಾಡದೇ ಇರುವುದರಿಂದ ನೌಕರರಿಗೆ ವೇತನ ಸಿಗದೆ ಪರಿತಪಿಸುವಂತಾಗಿದೆ. ಆದ ಕಾರಣ ಸದರಿ ಇಬ್ಬರು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈ ಸಂಬಂಧ ಶಿಸ್ತುಕ್ರಮ ಜಾರಿ ಮಾಡಬೇಕು. ಕನಿಷ್ಠ ವೇತನ ನೀಡದ ಪಿಡಿಓಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ನಿವೃತ್ತಿ ವೇತನ ಹಾಗೂ ಉಪಧನ ಕಡ್ಡಾಯವಾಗಿ ಸಿಗಬೇಕು. ಗ್ರಾಮ ಪಂಚಾಯ್ತಿ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಸಮವಸ್ತ್ರ ವಿತರಣೆ ಮಾಡಬೇಕು. ಬಿಲ್ ಕಲೆಕ್ಟರ್ ಮತ್ತು ಡಾಟಾ ಎಂಟ್ರಿ ಆಪರೇಟರ್‍ಗಳ ಜೇಷ್ಠತಾಪಟ್ಟಿಯನ್ನು ತಯಾರಿಸಲು ಕ್ರಮ ವಹಿಸಬೇಕು ಎಂದರು.

      ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ದುಡಿಯುತ್ತಿರುವ ಎಲ್ಲಾ ನೌಕರರಿಗೂ ಪ್ರತಿ ತಿಂಗಳು ವೇತನ ನೀಡಬೇಕು. ಏಕಕಾಲಕ್ಕೆ ನೌಕರರ ಅನುಮೋದನೆಯಾಗಬೇಕು. ಪಿಎಫ್, ಇಎಸ್‍ಐ ಜಾರಿಯಾಗಬೇಕು. ಬಿಲ್ ಕಲೆಕ್ಟರ್ ಮತ್ತು ಕಂಪ್ಯೂಟರ್ ಆಪರೇಟರ್‍ಗಳ ಜೇಷ್ಟತಾಪಟ್ಟಿಯನ್ನು ತಯಾರಿಸಲು ಜಿಲ್ಲಾ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 

(Visited 84 times, 1 visits today)