ತುಮಕೂರು:
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ 14 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 8 ಸೇರಿದಂತೆ ಒಟ್ಟು 22 ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 21 ರಿಂದ ಜೂನ್ 28 ರವರೆಗೆ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ಜಿಲ್ಲೆಯಾದ್ಯಂತ ನಡೆಯಲಿದ್ದು, ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಳೆದ ಮುಖ್ಯ ಪರೀಕ್ಷೆಯಲ್ಲಿ ಮೊಬೈಲನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ದ ಪ್ರಕರಣ ಜಿಲ್ಲೆಯನ್ನು ರಾಜ್ಯದಲ್ಲಿ ಗುರುತಿಸುವಂತಾಯಿತು. ಯಾವುದೇ ಕಾರಣಕ್ಕೂ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರದಲ್ಲಿರುವ ಯಾರ ಬಳಿಯಲ್ಲಿಯೂ ಮೊಬೈಲ್ ಇರಕೂಡದು. ಈ ಬಗ್ಗೆ ಮುಖ್ಯ ಅಧೀಕ್ಷಕರು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಇರುವ ಮಾಹಿತಿ ಅಥವಾ ಬೇರೆ ಅವಗಢಗಳು ಸಂಭವಿಸಿದಲ್ಲಿ ಮುಖ್ಯ ಅಧೀಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಲ್ಲ ಮುಖ್ಯ ಅಧೀಕ್ಷಕರಿಗೆ ಸೂಚಿಸಿದರು.
ಈಗಾಗಲೇ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆಯನ್ನು ಜಾರಿಗೊಳಿಸುವ ಆದೇಶವನ್ನು ಜಿಲ್ಲಾಧಿಕಾರಿಗಳಿಂದ ಹೊರಡಿಸಲಾಗಿದೆ. ಪ್ರಶ್ನೆ ಪತ್ರಿಕೆ ರವಾನಿಸಲು ತುಮಕೂರು, ತುರುವೇಕೆರೆ, ತಿಪಟೂರು ಮತ್ತು ಪಾವಗಡ ತಾಲ್ಲೂಕಿಗೆ ತಲಾ 1ರಂತೆ ಒಟ್ಟು 04 ವಾಹನಗಳನ್ನು ಒದಗಿಸಲು ಅಧಿಗ್ರಹಣಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರಕ್ಕೂ ವೀಕ್ಷಕರುಗಳನ್ನು ನೇಮಿಸಲಾಗಿದೆ. ಅದೇ ರೀತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತೀ ಕೇಂದ್ರಕ್ಕೂ ಮುಖ್ಯ ಶಿಕ್ಷಕರನ್ನು ರೊಟೇಷನ್ ಆಧಾರದಲ್ಲಿ ಸ್ಥಾನಿಕ ಜಾಗೃತದಳಕ್ಕೆ ನೇಮಿಸಲು ಸೂಚಿಸಿದರಲ್ಲದೆ, ಕೊಠಡಿ ಮೇಲ್ವಿಚಾರಕರಾಗಿ ಸಂಬಂಧಿಸಿದ ವಿಷಯ ಶಿಕ್ಷಕರನ್ನು ನೇಮಿಸಬಾರದೆಂದು ನಿರ್ದೇಶನ ನೀಡಿದರು. ಮಾರ್ಗಾಧಿಕಾರಿಗಳು ತಾಲ್ಲೂಕು ಖಜಾನೆಯಿಂದ ಗೌಪ್ಯ ಸಾಮಾಗ್ರಿಗಳನ್ನು ಸಕಾಲದಲ್ಲಿ ಸಂಬಂಧಿಸಿದ ಕೇಂದ್ರಗಳಿಗೆ ಸೂಕ್ತ ಬೆಂಗಾವಲಿನೊಂದಿಗೆ ತಲುಪಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅವರು ಸೂಚಿಸಿದರು.
ತುಮಕೂರು ಮತ್ತು ಮಧುಗಿರಿಯಲ್ಲಿ ಉತ್ತರ ಪತ್ರಿಕೆಗಳ ಸಂರಕ್ಷಣೆಗೆ ನಿರ್ಮಿಸಿರುವ ಭದ್ರತಾ ಕೊಠಡಿಗಳಿಗೆ ಹಾಗೂ ಉತ್ತರ ಪತ್ರಿಕೆಗಳನ್ನು ಬೆಂಗಳೂರಿಗೆ ಸಾಗಿಸುವವರೆಗೂ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಆಯಾ ವ್ಯಾಪ್ತಿಯ ಪೋಲೀಸ್ ಠಾಣೆಗೆ ಮನವಿ ಸಲ್ಲಿಸಲು ಉಪನಿರ್ದೇಶಕರಿಗೆ ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ.ಆರ್ ಕಾಮಾಕ್ಷಿ ಮಾತನಾಡಿ, ತುಮಕೂರಿನ 4578 ಹಾಗೂ ಮಧುಗಿರಿಯ 2020 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.
ಡಯಟ್ ಪ್ರಾಂಶುಪಾಲರು, ಜಿಲ್ಲಾ ಖಜಾನಾಧಿಕಾರಿಗಳು, ಪರೀಕ್ಷಾ ನೋಡಲ್ ಅಧಿಕಾರಿಗಳು, ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರುಗಳು ಸಭೆಯಲ್ಲಿ ಹಾಜರಿದ್ದರು.