ತುಮಕೂರು:
ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ ಮೂಲಮಂತ್ರ ಎಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪತಂಜಲಿ ಯೋಗ ಸಂಸ್ಥೆ, ನೆಹರು ಯುವ ಕೇಂದ್ರ, ಎನ್‍ಸಿಸಿ, ಮತ್ತಿತರ ಸಂಘ ಸಂಸ್ಥೆ, ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿಂದು ಬೆಳಿಗ್ಗೆ ಹಮ್ಮಿಕೊಂಡಿದ್ದ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು.
ಈ ನಿಟ್ಟಿನಲ್ಲಿ ನಿಯತವಾಗಿ ಯೋಗಾಭ್ಯಾಸ ಮಾಡುವುದರಿಂದ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯ, ಮತ್ತಿತರ ರೋಗಗಳನ್ನು ದೂರವಿಡಬಹುದಾಗಿದೆ. ಜನರು ಈಗಲಾದರೂ ಎಚ್ಚೆತ್ತುಕೊಂಡು ಆರೋಗ್ಯ ದೃಷ್ಟಿಯಿಂದ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ರೋಗಮುಕ್ತ ಜೀವನಕ್ಕೆ ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಧ್ಯಾನವನ್ನು ಅಭ್ಯಾಸ ಮಾಡುವುದೊಂದೇ ಉತ್ತಮ ಮಾರ್ಗ ಎಂದು ಸಲಹೆ ನೀಡಿದರು.
ಯೋಗಾಭ್ಯಾಸ ಜೂನ್ 21ಕ್ಕೆ ಮಾತ್ರ ಸೀಮಿತವಾಗಬಾರದು. ಯೋಗದ ಮೂಲವೇ ಭಾರತ. ವಿದೇಶೀಯರೇ ಯೋಗಭ್ಯಾಸವನ್ನು ರೂಢಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ನಾವೇಕೆ ಮರೆಯಬೇಕು? ಇಂದಿನಿಂದಲೇ ಎಲ್ಲರ ಮನೆಯಲ್ಲೂ ಪ್ರತಿನಿತ್ಯ ಕಡ್ಡಾಯವಾಗಿ ಹಿರಿಯರು, ಕಿರಿಯರೆನ್ನದೆ ಎಲ್ಲರೂ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳುವುದರಿಂದ ಮುಂದಿನ ಪೀಳಿಗೆಯವರು ಆರೋಗ್ಯಯುತವಾಗಿ ಬದುಕಬಹುದೆಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ವೀರಭದ್ರಯ್ಯ ಮಾತನಾಡಿ, ಯೋಗದಿಂದ ದೇಹದ ಎಲ್ಲ ಅಂಗಗಳಿಗೂ ಶಕ್ತಿ ದೊರೆತು ದಿನಪೂರ್ತಿ ಚಟುವಟಿಕೆಯಿಂದಿರಲು ಸಹಕಾರಿಯಾಗುತ್ತದೆ. ಆಧುನಿಕ ಜೀವನ ಶೈಲಿಯಿಂದ ಉಂಟಾಗುತ್ತಿರುವ ವಾಯುಮಾಲಿನ್ಯದಿಂದ ಶ್ವಾಸಕೋಶ ಸಂಬಂಧಿ ಖಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಯೋಗಾಭ್ಯಾಸದಿಂದ ಉಸಿರಾಟ ಶುದ್ಧವಾಗಿ ಅಸ್ತಮಾ, ಶ್ವಾಸಕೋಶ ಸಂಬಂಧಿ ಖಾಯಿಲೆ, ಬಹು ಅಂಗಾಂಗ ವೈಫಲ್ಯ, ಮತ್ತಿತರ ಖಾಯಿಲೆಗಳನ್ನು ನಿಯಂತ್ರಿಸಬಹುದು. ನಿಯತವಾಗಿ ಯೋಗ, ಪ್ರಾಣಾಯಾಮ, ಧ್ಯಾನದ ಅಭ್ಯಾಸವನ್ನು ರೂಢಿಸಿಕೊಂಡಿದ್ದರಿಂದಲೇ ಶ್ರೀ ಸಿದ್ದಗಂಗಾಮಠದ ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಯವರು 112 ವರ್ಷಗಳ ಸುದೀರ್ಘಕಾಲ ಸಾರ್ಥಕವಾದ ಆರೋಗ್ಯಜೀವನ ನಡೆಸಿದ್ದರು ಎಂದು ಸ್ಮರಿಸಿದರು.
ಅಧ್ಯಕ್ಷತೆವಹಿಸಿದ್ದ ಶಾಸಕ ಜ್ಯೋತಿ ಗಣೇಶ್ ಮಾತನಾಡಿ ಉಳಿದೆಲ್ಲ ದಿನಗಳಿಗೆ ಹೋಲಿಸಿದರೆ ಜೂನ್ 21ರಂದು ಹಗಲು ವೇಳೆ ಹೆಚ್ಚಾಗಿರುವುದರಿಂದ ಈ ದಿನವನ್ನು ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಯಾವುದೇ ದೇಶ ಸದೃಢವಾಗಬೇಕಾದರೆ ದೇಶದ ಜನರು ಸದೃಢರಾಗಿರಬೇಕು. ಯೋಗದಿಂದ ಜನರು ಸದೃಢರಾಗಿರಲು ಸಾಧ್ಯವೆಂದು ತಿಳಿಸಿದರಲ್ಲದೆ ಯೋಗವನ್ನು ವಿಶ್ವಕ್ಕೆ ಭಾರತ ನೀಡಿದ ಕೊಡುಗೆ. ಯಾವುದೇ ಖರ್ಚಿಲ್ಲದೆ ಅಭ್ಯಾಸಮಾಡಬಹುದಾದ ಯೋಗ ಹಾಗೂ ಧ್ಯಾನದಿಂದ ದೇಹಬಲ, ಮನೋಬಲ ಹೆಚ್ಚುತ್ತದೆ ಅಲ್ಲದೆ ಎಂತಹ ಕಷ್ಟ ಪರಿಸ್ಥಿತಿಗಳಲ್ಲಿಯೂ ಎದೆಗುಂದದೆ ಎದುರಿಸುವ ಆತ್ಮಸ್ಥೈರ್ಯವನ್ನು ತಂದುಕೊಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗಾಭ್ಯಾಸವನ್ನು ರೂಢಿಸಿಕೊಂಡು ಆರೋಗ್ಯಯುತ ಜೀವನ ನಡೆಸಬೇಕೆಂದರು.
ಇದಕ್ಕೂ ಮುನ್ನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಚಾಲಕ ಚೆನ್ನಬಸಪ್ಪ ಅವರು ಯೋಗದ ವಿವಿಧ ಭಂಗಿಗಳಾದ ವಜ್ರಾಸನ, ತ್ರಿಕೋನಾಸನ, ವಕ್ರಾಸನ, ಭುಜಂಗಾಸನ, ಶಲಭಾಸನ, ಪ್ರಾಣಾಯಾಮ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರಲ್ಲದೆ, ಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾನಿಲಯದ ಸುಜಾತ ಅವರು ಧ್ಯಾನ ಕ್ರಮದ ಬಗ್ಗೆ ವಿವರಣೆ ನೀಡುತ್ತಾ ಚಿನ್ಮುದ್ರೆಯಲ್ಲಿ ಧ್ಯಾನ ಮಾಡಿದರೆ ಏಕಾಗ್ರತೆ ಸಾಧಿಸಬಹುದು. ಧ್ಯಾನದಿಂದ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳು ಮೂಡುತ್ತವೆ. ವಿಶ್ರಾಂತ ಸ್ಥಿತಿಯಲ್ಲಿ ಧ್ಯಾನಾಭ್ಯಾಸದಲ್ಲಿ ತೊಡಗುವುದರಿಂದ ಉಸಿರಾಟ ಕ್ರಿಯೆ, ನಾಡಿಬಡಿತ, ರಕ್ತಸಂಚಾರ ಕ್ರಿಯೆ ಸಾಮಾನ್ಯ ಸ್ಥಿತಿಗೆ ಬಂದು ಮನಸ್ಸು ಶಾಂತವಾಗುತ್ತದೆ. ಮನಸ್ಸು ಶಾಂತವಾಗಿದ್ದರೆ ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆಯಲ್ಲದೆ ದೇಹದಲ್ಲಿರುವ ಎಲ್ಲ ತೊಂದರೆಗಳೂ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್, ಡಿವೈಎಸ್‍ಪಿ ಡಾ|| ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಟಿ.ಎ. ವೀರಭದ್ರಯ್ಯ, ಡಿಹೆಚ್‍ಓ ಡಾ|| ಬಿ.ಆರ್. ಚಂದ್ರಿಕಾ, ಎನ್‍ಸಿಸಿ ಕೆಡೆಟ್, ಸ್ಕೌಟ್ಸ್ ಮತ್ತು ಗೈಡ್ಸ್ ತಂಡದವರು ಯೋಗಾಭ್ಯಾಸ ಮಾಡಿದರು.ಭಾರತ ಸ್ವೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯವರು ಪ್ರಕಟಿಸಿರುವ ವಾರ್ಷಿಕ ಕಾರ್ಯಕ್ರಮಗಳ ಯೋಜನಾ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.ಮೇಯರ್ ಲಲಿತಾ ರವೀಶ್, ಡಿಡಿಪಿಐ ಎಂ.ಆರ್. ಕಾಮಾಕ್ಷಿ, ಜಿಲ್ಲಾ ಆಯುಷ್ ಅಧಿಕಾರಿ ಡಾ|| ಸಂಜೀವಮೂರ್ತಿ, 4ನೇ ಕರ್ನಾಟಕ ಬೆಟಾಲಿಯನ್ ಅಧಿಕಾರಿ ಕರ್ನಲ್ ಯೋಗೇಂದ್ರ ಸಿಂಗ್ ಪರ್ಮರ್, ಕ್ಯಾಂಪ್ ಕಮಾಂಡೆಂಟ್ ಕರ್ನಲ್ ಶೈಲೇಶ್ ಶರ್ಮ, ಮತ್ತಿತರರು ಉಪಸ್ಥಿತರಿದ್ದರು.